ಜ. 2-6: ಮೂಡುಬಿದಿರೆಯಲ್ಲಿ ಭಾರತೀಯ ಅಂತರ್‌ ವಿ.ವಿ. ಕ್ರೀಡಾಕೂಟ

ಆಳ್ವಾಸ್‌ನಲ್ಲಿ ಕೂಟದ ಕಚೇರಿ ಉದ್ಘಾಟನೆ;ಕ್ರೀಡಾ ಇಲಾಖೆಯಿಂದ ರೂ. 50 ಲಕ್ಷ , ಕ್ರೀಡಾ ಸಲಕರಣೆ

Team Udayavani, Nov 9, 2019, 10:33 PM IST

ಮೂಡುಬಿದಿರೆ: “ರಾಜ್ಯದ 19 ಇಲಾಖೆಗಳಲ್ಲಿ 1ನೇ, 2ನೇ ದರ್ಜೆಯ ಹುದ್ದೆಗಳಿಗೆ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾಳುಗಳಿಗೆ ನೇರ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಮತ್ತು ಕ್ರೀಡಾ ಸಚಿವ ಈಶ್ವರಪ್ಪ ಹೇಳಿದರು.

ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಯೂನಿವರ್ಸಿಟೀಸ್‌ ಆಶ್ರಯದಲ್ಲಿ, ರಜತ ಸಂಭ್ರಮದಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿ.ವಿ. ಮತ್ತು ಮೂಡುಬಿದಿರೆಯ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ 2020ರ ಜನವರಿ 2ರಿಂದ 6ರ ವರೆಗೆ ನಡೆಸಲಿರುವ 80ನೇ ಅಖೀಲ ಭಾರತ ಅಂತರ್‌ ವಿ.ವಿ. ಕ್ರೀಡಾಕೂಟದ ಕಚೇರಿಯನ್ನು ಸ್ವರಾಜ್ಯ ಮೈದಾನದ ಬಳಿಯ ಆಳ್ವಾಸ್‌ ಆಡಳಿತ ಕಚೇರಿಯ ಕಟ್ಟಡದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಕೂಟಕ್ಕೆ ಕ್ರೀಡಾಇಲಾಖೆಯಿಂದ ರೂ. 50 ಲಕ್ಷ ಅನುದಾನ ಒದಗಿಸುವ ಜತೆಗೆ ಸಂಘಟಕ ಡಾ| ಮೋಹನ ಆಳ್ವರ ಕೋರಿಕೆ ಮೇರೆಗೆ ಕೂಟಕ್ಕೆ ಅಗತ್ಯವಾದ ಕ್ರೀಡಾಸಲಕರಣೆಗಳನ್ನು ಒದಗಿಸುವುದಾಗಿ ಘೋಷಿಸಿದರು.

ಆಳ್ವರ ಚಿಂತನೆಗಳು ಸ್ವಾಗತಾರ್ಹ
ಆಳ್ವಾಸ್‌ ಪ್ರವರ್ತಕ ಡಾ| ಮೋಹನ ಆಳ್ವರು ಶಿಕ್ಷಣ, ಕ್ರೀಡೆ, ಸಂಸ್ಕೃತಿ ವಿಚಾರದಲ್ಲಿ ಹೊಂದಿರುವ ಕಾಳಜಿ, ಪರಿಶ್ರಮ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಗೂ ಮನವರಿಕೆಯಾಗಿದೆ. ಈ ಎಲ್ಲ ವಿಚಾರಗಳಲ್ಲಿ ಸರಕಾರವು ಅಧಿಕಾರಿಗಳು ಹಾಗೂ ಮುತ್ಸದ್ದಿಗಳ ಜತೆ ಸಮಾಲೋಚನೆ ನಡೆಸುವಾಗ ಡಾ| ಆಳ್ವರನ್ನೂ ಖಂಡಿತ ಆಹ್ವಾನಿಸುತ್ತೇವೆ’ ಎಂದು ಈಶ್ವರಪ್ಪ ತಿಳಿಸಿದರು.

ಕ್ರೀಡಾ ಆಯುಕ್ತ ಶ್ರೀನಿವಾಸ್‌ ಅವರು “ಪಾಟಿಯಾಲದ ಮಾದರಿಯಲ್ಲಿ ತುಮಕೂರಿನಲ್ಲಿ ಕ್ರೀಡಾ ವಿ.ವಿ. ಸ್ಥಾಪಿಸಲು ಸಿದ್ಧತೆ ನಡೆದಿದೆ’ ಎಂದು ತಿಳಿಸಿ, ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರೋತ್ಸಾಹಧನ, ಪೊಲೀಸ್‌ ಇಲಾಖೆಯಿಂದ ತೊಡಗಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಸೌಲಭ್ಯಗಳ ವಿವರ ನೀಡಿದರು.

ವಿದ್ಯಾಗಿರಿಯ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್‌ ವಹಿಸಿದ್ದರು.

ಕ್ರೀಡಾ ನೀತಿ ರಾಜ್ಯಕ್ಕೂ ಅನ್ವಯವಾಗಲಿ
ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದು, “ಈ ಹಿಂದೆ 3 ಬಾರಿ ಅಂತರ್‌ ವಿ.ವಿ. ಕ್ರೀಡಾಕೂಟಗಳನ್ನು ಆಳ್ವಾಸ್‌ ನಡೆಸಿದ್ದು, ಮುಂದಿನ ಕೂಟದಲ್ಲಿ 4,000 ಕ್ರೀಡಾಳುಗಳು ಸೇರಿದಂತೆ 6,000 ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಕೇಂದ್ರದ ಕ್ರೀಡಾನೀತಿಗೂ ರಾಜ್ಯದ ಕ್ರೀಡಾ ನೀತಿಗೂ ಬಹಳ ವ್ಯತ್ಯಾಸ ಇರುವುದರಿಂದ ರಾಜ್ಯದ ಕ್ರೀಡಾಳುಗಳಿಗೆ ಅನ್ಯಾಯ ವಾಗುತ್ತಿದೆ. ಕೇಂದ್ರದ ಕ್ರೀಡಾ ನೀತಿ ಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ; ರಾಜ್ಯದ ಕ್ರೀಡೆ ಯಾವುದು, ಕಲೆ ಯಾವುದು ಎಂಬುದೂ ಘೋಷಣೆ ಯಾಗಬೇಕಾಗಿದೆ’ ಎಂದು ಅವರು ಆಗ್ರಹಿಸಿದರು.

ಕ್ರೀಡಾ ಇಲಾಖೆಯ ವಿಶೇಷ ಅಧಿಕಾರಿ ಜಯರಾಮ್‌, ಈಶ್ವರಪ್ಪ ಅವರ ಪುತ್ರ, ಶಿವಮೊಗ್ಗ ಜಿ.ಪಂ. ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್‌, ದ.ಕ. ಜಿ.ಪಂ. ಸಿಇಒ ಆರ್‌. ಸೆಲ್ವಮಣಿ ಉಪಸ್ಥಿತರಿ ದ್ದರು. ಉಪನ್ಯಾಸಕ ವೇಣುಗೋಪಾಲ್‌ ನಿರೂಪಿಸಿದರು.

ಫಿಟ್‌ ಕರ್ನಾಟಕ
“ಕೇರಳ, ಹರ್ಯಾಣವೇ ಮೊದಲಾದ ರಾಜ್ಯಗಳಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ನೀಡಲಾಗುವಂತೆ ಕರ್ನಾಟಕದಲ್ಲೂ ಕೃಪಾಂಕ ನೀಡುವಂತಾಗಬೇಕು. ಕಲೆ, ಕ್ರೀಡೆ, ಶಿಕ್ಷಣ ಮೊದಲಾದ ರಂಗಗಳ ವಿಷಯದಲ್ಲಿ “ಫಿಟ್‌ ಕರ್ನಾಟಕ’ ಎಂಬ ಸಮಾವೇಶ ನಡೆಸಿ ಈ ರಾಜ್ಯದ ವಿಶಿಷ್ಟತೆ, ತಾಕತ್ತು ಏನು ಎಂಬುದು ಎಲ್ಲರಿಗೂ ಗೊತ್ತಾಗುವಂತಾಗಲಿ; ಈ ವಿಚಾರದಲ್ಲಿ ಸರಕಾರ ಬಯಸುವುದಾದರೆ ಎಲ್ಲ ಸಹಕಾರ ನೀಡುವೆ’ ಎಂದು ಡಾ| ಮೋಹನ ಆಳ್ವರು ಪ್ರಕಟಿಸಿದರು.

“1984ರಿಂದ ಏಕಲವ್ಯ ಕ್ರೀಡಾ ಸಂಸ್ಥೆಯ ಮೂಲಕ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಿ, ನಾಡಿಗೆ ಕೀರ್ತಿ ತಂದ ಕ್ರೀಡಾಳುಗಳನ್ನು ಬೆಳೆಸಿ, ಈಗ 800 ಮಂದಿ ಇದ್ದಾರೆ, ವಾರ್ಷಿಕ ರೂ. 10 ಕೋಟಿ ನಿರ್ವಹಣ ವೆಚ್ಚವಾಗುತ್ತಿದೆ. ಆದರೆ, ಸರಕಾರದ ಯಾವುದೇ ಆರ್ಥಿಕ ನೆರವು ಲಭಿಸಿಲ್ಲ ‘ ಎಂದು ವಿಷಾದಿಸಿದರು.

ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಎಳವೆಯಿಂದಲೂ ಆಟೋಟಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತ ಬಂದಿದ್ದು ಕಾಲೇಜಿನಲ್ಲಿ ಕಬಡ್ಡಿ , ಕೊಕ್ಕೋ ತಂಡಗಳ ನಾಯಕನಾಗಿದ್ದೆ. ಎಷ್ಟು ವ್ಯಸ್ತನಾಗಿದ್ದರೂ ಸುಮಾರು 25 ವರ್ಷ ಶಟ್ಲ ಆಡಿದ ಜೀವ ಇದು. ನನ್ನಂಥವರಿಗೆ ಶುಗರ್‌, ಬಿಪಿ ಬರೋದಿಲ್ಲ, ನನ್ನ ತಂಟೆಗೆ ಬಂದವರಿಗೆ ಬರುತ್ತೆ ನೋಡಿ.
– ಈಶ್ವರಪ್ಪ,ಕ್ರೀಡಾ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...