ಸಹೋದರನ ಬ್ಯಾಟಿಂಗ್‌ ವೇಳೆ ಆ್ಯಶ್ಟನ್ ಗೆ ಚೆಂಡಿನೇಟು

Team Udayavani, Nov 18, 2019, 12:51 AM IST

ಅಡಿಲೇಡ್‌: ಕ್ರಿಕೆಟಿಗರ ಪಾಲಿಗೆ “ಡೆಡ್ಲಿ ನವೆಂಬರ್‌’ ಭೀತಿ ಇನ್ನೂ ದೂರವಾದಂತೆ ಕಾಣುತ್ತಿಲ್ಲ. ರವಿವಾರ ಆಸ್ಟ್ರೇಲಿಯದಲ್ಲಿ ನಡೆದ “ಮಾರ್ಷ್‌ ಒನ್‌ ಡೇ ಕಪ್‌’ ಕ್ರಿಕೆಟ್‌ ಪಂದ್ಯದ ವೇಳೆ ಆ್ಯಶ್ಟನ್ ಅಗರ್‌ ಚೆಂಡಿನೇಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಘಟನೆ ಸಂಭವಿಸಿದೆ. ಸಹೋದರ ವೆಸ್‌ ಅಗರ್‌ ಅವರ ಕ್ಯಾಚ್‌ ಪಡೆಯುವ ವೇಳೆಯೇ ಆ್ಯಶ್ಟನ್ ಅಗರ್‌ ಈ ಆಘಾತಕ್ಕೆ ಸಿಲುಕಿದ್ದು ವಿಪರ್ಯಾಸ!

ಅಡಿಲೇಡ್‌ನ‌ “ಕರೆನ್‌ ರೋಲ್ಟನ್‌ ಓವಲ್‌’ನಲ್ಲಿ ಸೌತ್‌ ಆಸ್ಟ್ರೇಲಿಯ-ವೆಸ್ಟರ್ನ್ ಆಸ್ಟ್ರೇಲಿಯ ನಡುವಿನ ಮುಖಾಮುಖೀಯ ವೇಳೆ ಈ ಘಟನೆ ಸಂಭವಿಸಿದೆ. ಕಿರಿಯ ಸಹೋದರ ವೆಸ್‌ ಅಗರ್‌ ಬಾರಿಸಿದ ಚೆಂಡು ಕ್ಯಾಚ್‌ ರೂಪದಲ್ಲಿ ನೇರವಾಗಿ ಮಿಡ್‌ ಆನ್‌ನಲ್ಲಿ ನಿಂತಿದ್ದ ಆ್ಯಶ್ಟನ್ ಅಗರ್‌ ಅವರತ್ತ ಧಾವಿಸಿ ಬಂತು. ಆದರೆ ಕ್ಯಾಚ್‌ ಪಡೆಯುವ ಪ್ರಯತ್ನದಲ್ಲಿ ಜಾರಿ ಬಿದ್ದುದರಿಂದ ಚೆಂಡು ಆ್ಯಶ್ಟನ್ ಅಗರ್‌ ಅವರ ಕಣ್ಣಿನ ನಡುವೆ ಹೋಗಿ ಅಪ್ಪಳಿಸಿತು. ಇದರಿಂದ ಹಣೆ ಹಾಗೂ ಮೂಗಿನಿಂದ ತೀವ್ರ ರಕ್ತಸ್ರಾವ ಆಗತೊಡಗಿತು.

ಕೂಡಲೇ ವೆಸ್‌ ಅಗರ್‌ ಸಹಿತ ಆಟಗಾರರೆಲ್ಲ ಧಾವಿಸಿ ಬಂದರು. ರಕ್ತಸ್ರಾವ ಸ್ಥಿತಿಯಲ್ಲೇ ಆ್ಯಶ್ಟನ್ ಅವರನ್ನು ಡ್ರೆಸ್ಸಿಂಗ್‌ ರೂಮ್‌ಗೆ ಕರೆದೊಯ್ಯಲಾಯಿತು. ಅನಂತರ ಅವರು ಆಡಲಿಳಿಯಲಿಲ್ಲ.

ಆಸೀಸ್‌ ಆರಂಭಕಾರ ಫಿಲಿಪ್‌ ಹ್ಯೂಸ್‌ ಅವರ 5ನೇ ಪುಣ್ಯತಿಥಿಯ ಸಂದರ್ಭದಲ್ಲೇ (ನ. 27) ಈ ಘಟನೆ ಸಂಭವಿಸಿದ್ದರಿಂದ ಕ್ರಿಕೆಟ್‌ ಅಭಿಮಾನಿಗಳು ಬೆಚ್ಚಿಬಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ