ಭಾರತದಿಂದ 16 ಸ್ವರ್ಣ ಪದಕ ಬೇಟೆ
ಏಶ್ಯನ್ ಏರ್ಗನ್ ಚಾಂಪಿಯನ್ಶಿಪ್
Team Udayavani, Apr 2, 2019, 6:05 AM IST
ಹೊಸದಿಲ್ಲಿ: “ಏಶ್ಯನ್ ಏರ್ಗನ್ ಚಾಂಪಿಯನ್ಶಿಪ್’ ಕೂಟದಲ್ಲಿ ಕೊನೆಯ ದಿನವೂ ಪ್ರಾಬಲ್ಯ ಮೆರೆದ ಭಾರತದ ಶೂಟರ್ ಮತ್ತೆ 5 ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಚೈನೀಸ್ ತೈಪೆಯಲ್ಲಿ ನಡೆದ ಕೂಟದ ಅಂತಿಮ ದಿನವಾದ ಸೋಮವಾರ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಯಶ್ ವರ್ಧನ್, ಶ್ರೇಯಾ ಅಗರ್ವಾಲ್ ತಲಾ 3 ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.
ಪುರುಷರ ಜೂನಿಯರ್ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯ ಮೂರೂ ಪದಕಗಳು ಭಾರತದ ಪಾಲಾದವು. ಯಶ್ ವರ್ಧನ್ 249. 5 ಅಂಕ ಗಳಿಸಿ ಚಿನ್ನ, ಕೇವಲ್ ಪ್ರಜಾಪತಿ ಬೆಳ್ಳಿ (247.3) ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ (226.1) ಕಂಚಿನ ಪದಕ ಜಯಿಸಿದರು. ಅನಂತರ ನಡೆದ ತಂಡ ವಿಭಾಗದಲ್ಲಿ ಯಶ್, ಕೇವಲ್ ಮತ್ತು ಐಶ್ವರ್ಯ ಜೋಡಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು.
ಇದಕ್ಕೂ ಮುನ್ನ ನಡೆದ ಮಿಕ್ಸೆಡ್ ಟೀಮ್ ರೈಫಲ್ ಜೂನಿಯರ್ ವಿಭಾಗದಲ್ಲಿ ಯಶ್ ವರ್ಧನ್-ಶ್ರೇಯಾ ಅಗರ್ವಾಲ್ ಜೋಡಿ ಚಿನ್ನದ ಪದಕ ಗೆದ್ದಿತ್ತು.
ಸ್ವರ್ಣಕ್ಕೆ ಗುರಿಯಿಟ್ಟ ಶ್ರೇಯಾ
ವನಿತಾ ಜೂನಿಯರ್ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಚಿನ್ನ ಮತ್ತು ಕಂಚಿನ ಪದಕ ಜಯಿಸಿದರು. 252.5 ಅಂಕಗಳಿಸಿದ ಶ್ರೇಯಾ ಅಗರ್ವಾಲ್ ಚಿನ್ನ, ಮೆಹುಲಿ ಘೋಶ್ 228. 3 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಕವಿ ಚಕ್ರವರ್ತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ತಂಡ ವಿಭಾಗದಲ್ಲಿ ಶ್ರೇಯಾ, ಮೆಹುಲಿ ಮತ್ತು ಕವಿ ಅವರನ್ನೊಳಗೊಂಡ ಭಾರತ ತಂಡ ಚಿನ್ನ ಜಯಿಸಿತು.
ಒಟ್ಟು 25 ಪದಕ ಗೆದ್ದ ಭಾರತ
ಮಾರ್ಚ್ 27 ರಂದು ಆರಂಭವಾದ ಈ ಕೂಟದ ಹಿರಿಯರ ಮತ್ತು ಕಿರಿಯರ ವಿಭಾಗ ಎರಡಲ್ಲೂ ಭಾರತದ ಶೂಟರ್ಗಳು ಅಮೋಘ ಸಾಧನೆಗೈದರು. 6 ದಿನಗಳ ಕಾಲ ನಡೆದ ಈ ಕೂಟದಲ್ಲಿ ಭಾರತೀಯ ಶೂಟರ್ಗಳು 16 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕ ಸಹಿತ ಒಟ್ಟು 25 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಕೂಟವನ್ನು ಮುಗಿಸಿದರು.
ಭಾರತದ ಶೂಟರ್ಗಳಿನ್ನು ಎಪ್ರಿಲ್ 5ರಂದು ಆರಂಭವಾಗಲಿರುವ ಐಎಸ್ಎಸ್ಎಫ್ ಶಾಟ್ಗನ್ ವಿಶ್ವಕಪ್ 2ನೇ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.