ಅಶ್ಲೀಲ ಸಂದೇಶ ಪ್ರಕರಣ: ಆಸೀಸ್ ಟೆಸ್ಟ್ ನಾಯಕತ್ವ ಬಿಟ್ಟ ಪೇನ್
Team Udayavani, Nov 20, 2021, 5:19 AM IST
ಹೋಬರ್ಟ್: ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕತ್ವಕ್ಕೆ ಟಿಮ್ ಪೇನ್ ರಾಜೀನಾಮೆ ನೀಡಿದ್ದಾರೆ. ಇಂಗ್ಲೆಂಡ್ ಎದುರಿನ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಇನ್ನು ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ಸಂಭವಿಸಿದೆ.
2017-18ರ ಆ್ಯಶಸ್ ಸರಣಿ ವೇಳೆ “ಕ್ರಿಕೆಟ್ ಆಸ್ಟ್ರೇಲಿಯ’ದ ಮಾಜಿ ಸಹದ್ಯೋಗಿಗೆ ಅಶ್ಲೀಲ ಚಿತ್ರ ಮತ್ತು ಸಂದೇಶ ರವಾನಿಸಿದ್ದಾರೆಂಬ ಆರೋಪ ಟಿಮ್ ಪೇನ್ ವಿರುದ್ಧ ಕೇಳಿ ಬಂದಿದೆ. ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೇನ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು “ಕ್ರಿಕೆಟ್ ಆಸ್ಟ್ರೇಲಿಯ’ ತಿಳಿಸಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ಸರಣಿ ಜಯಭೇರಿ
ವಿವಾದ ಬಯಸುವುದಿಲ್ಲ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಮ್ ಪೇನ್, “ಇದು ನಂಬಲಾಗದ ನಿರ್ಧಾರ. ಆದರೆ ಕ್ರಿಕೆಟ್ ಆಸ್ಟ್ರೇಲಿಯ ಹಾಗೂ ನನ್ನ ಕುಟುಂಬದ ಪಾಲಿಗೆ ಇದು ಸೂಕ್ತ ನಿರ್ಧಾರವಾಗಿದೆ. ಆಗ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೆ . ಈ ಘಟನೆ ಸಾರ್ವಜನಿಕವಾಗಿ ದೊಡ್ಡ ಚರ್ಚೆಯಾಗಿದೆ. ಪ್ರಕರಣ ಸಂಬಂಧ ನನ್ನ ಹೆಂಡತಿ, ಕುಟುಂಬಸ್ಥರು ಹಾಗೂ ಕ್ರಿಕೆಟ್ ಆಸ್ಟ್ರೇಲಿಯದ ಕ್ಷಮೆಯಾಚಿಸುತ್ತೇನೆ. ಆ್ಯಶಸ್ ಸರಣಿ ಸಂದರ್ಭದಲ್ಲಿ ದೊಡ್ಡ ವಿವಾದ ಸೃಷ್ಟಿಸಲು ನಾನು ಬಯಸುವುದಿಲ್ಲ. ಹೀಗಾಗಿ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ’ ಎಂದು ಪೇನ್ ತಿಳಿಸಿದ್ದಾರೆ.
ಈ ಹಿಂದೆ ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವನ್ ಸ್ಮಿತ್ ನಿಷೇಧಕ್ಕೊಳಗಾದಾಗ ಪೇನ್ ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದರು. ಇದೀಗ ಆ್ಯಶಸ್ ಸರಣಿಯಲ್ಲಿ ಉಪನಾಯಕ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.