ದೋಣಿಯನ್ನು ಕಾಂಡೋಮ್ ಬಳಸಿ ದುರಸ್ತಿ ಮಾಡಿದ ಜೆಸ್ಸಿಕಾ
Team Udayavani, Aug 1, 2021, 8:00 AM IST
ಟೋಕ್ಯೊ: ಪ್ರಸ್ತುತ ಒಲಿಂಪಿಕ್ಸ್ನಲ್ಲಿ ಕ್ಯಾನೋ ಸ್ಲೇಲಮ್, ಕಯಾಕ್ ಸ್ಲೇಲಮ್ ಎಂಬ ಸ್ಪರ್ಧೆಗಳೂ ಇವೆ. ಇದರಲ್ಲಿ ಕೆಲವು ಸ್ಪರ್ಧೆಗಳು ಮುಗಿದು ವಿಜೇತರ ಆಯ್ಕೆಯೂ ಆಗಿದೆ. ಇವೊಂದು ರೀತಿಯ ದೋಣಿಯೋಡಿಸುವ ಸ್ಪರ್ಧೆಗಳು ಅಷ್ಟೇ.
ಇತ್ತೀಚೆಗೆ ಏನಾಗಿದೆಯೆಂದರೆ ಆಸ್ಟ್ರೇಲಿಯದ ಮಹಿಳಾ ಸ್ಪರ್ಧಿ ಜೆಸ್ಸಿಕಾ ಫಾಕ್ಸ್ ಅವರ ದೋಣಿಯ ಮುಂಭಾಗ ತುದಿಯಲ್ಲಿ ತುಸು ಸಮಸ್ಯೆಯಾಗಿತ್ತು. ಅವರದನ್ನು ದುರಸ್ತಿ ಮಾಡಲು ಬಳಸಿದ್ದು ಕಾಂಡೋಮ್! ಮೊದಲು ದೋಣಿಯ ಮೊನೆಗೆ ಗಮ್ ಹಾಕಿದ ಜೆಸ್ಸಿಕಾ, ನಂತರ ತಮಗೆ ನೀಡಲಾಗಿದ್ದ ಕಾಂಡೋಮ್ ತೆಗೆದು ಅದಕ್ಕೆ ಜೋಡಿಸಿದ್ದಾರೆ.
ಬಹಳ ಸುರಕ್ಷಿತ, ಗಟ್ಟಿಮುಟ್ಟು ಎಂದು ಟ್ವೀಟ್ ಬೇರೆ ಮಾಡಿದ್ದಾರೆ! ಪ್ರತೀ ಒಲಿಂಪಿಕ್ಸ್ನಲ್ಲೂ ಶಿಷ್ಟಾಚಾರದಂತೆ ಅಥ್ಲೀಟ್ಗಳಿಗೆ ಉಚಿತವಾಗಿ ಕಾಂಡೋಮ್ ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಇರುವುದರಿಂದ ಲೈಂಗಿಕ ಕ್ರಿಯೆಗಳಿಂದ ದೂರವಿರಿ ಎಂದು ಅಥ್ಲೀಟ್ಗಳಿಗೆ ಒಲಿಂಪಿಕ್ಸ್ ಸಂಘಟನಾ ಸಮಿತಿಯೇ ಸೂಚಿಸಿದೆ.
ಹಾಗಾಗಿ ಇಂತಹ ಕೆಲಸಗಳಿಗೆ ಕಾಂಡೋಮ್ಗಳನ್ನು ಬಳಸುವುದೇ ಉತ್ತಮವೆಂದು ಜೆಸ್ಸಿಕಾಗೆ ಅನಿಸಿರಬಹುದು! ಈಕೆ ಕಯಾಕ್ ಸ್ಲೇಲಮ್ನಲ್ಲಿ ಕಂಚು, ಕ್ಯಾನೋ ಸ್ಲೇಲಮ್ನಲ್ಲಿ ಚಿನ್ನ ಗೆದ್ದಿದ್ದಾರೆ.