ಆಸ್ಟ್ರೇಲಿಯನ್ ಓಪನ್: ಮೂರನೇ ಸುತ್ತಿಗೆ ಒಸಾಕಾ, ನಡಾಲ್
Team Udayavani, Jan 20, 2022, 6:40 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ನವೋಮಿ ಒಸಾಕಾ, ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ, ಪುರುಷರ ವಿಭಾಗದ ನೆಚ್ಚಿನ ಆಟಗಾರ ರಫೆಲ್ ನಡಾಲ್ ದ್ವಿತೀಯ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ.
ಪುರುಷರ ವಿಭಾಗದಿಂದ ಮುನ್ನಡೆದ ಇತರ ಪ್ರಮುಖ ರೆಂದರೆ ಅಲೆಕ್ಸಾಂಡರ್ ಜ್ವೆರೇವ್, ಡೆನ್ನಿಸ್ ಶಪೊವಲೋವ್, ಕರೆನ್ ಕಶನೋವ್. ವನಿತಾ ವಿಭಾಗದಿಂದ ಎಲಿನಾ ಸ್ವಿಟೋಲಿನಾ, ಮರಿಯಾ ಸಕ್ಕರಿ, ಮ್ಯಾಡಿಸನ್ ಕೀಸ್, ವಿಕ್ಟೋರಿಯಾ ಅಜರೆಂಕಾ, ಅಮಂಡಾ ಅನಿಸಿಮೋವಾ ತೃತೀಯ ಸುತ್ತು ತಲುಪಿದ್ದಾರೆ.
ನವೋಮಿ ಒಸಾಕಾ ಅಮೆರಿಕದ ಮ್ಯಾಡಿಸನ್ ಬ್ರಿಂಗ್ಲೆ ವಿರುದ್ಧ 6-0, 6-4 ಅಂತರದಿಂದ ಗೆದ್ದು ಬಂದರು. ಮುಂದಿನ ಸುತ್ತಿನಲ್ಲೂ ಇವರಿಗೆ ಅಮೆರಿಕನ್ ಆಟಗಾರ್ತಿ ಎದುರಾಗಲಿದ್ದಾರೆ. ಅದು ಅಮಂಡಾ ಅನಿಸಿ ಮೋವಾ. ಅವರು ಒಲಿಂಪಿಕ್ಸ್ ಚಾಂಪಿಯನ್ ಬೆಲಿಂಡಾ ಬೆನ್ಸಿಕ್ ವಿರುದ್ಧ 6-2, 7-5 ಗೆಲುವು ಒಲಿಸಿಕೊಂಡರು.
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್
ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಇಟಲಿಯ ಲೂಸಿಯಾ ಬೊÅಂಜೆಟ್ಟಿ ಅವರೆದುರು 6-1, 6-1 ಅಂತರದ ಸುಲಭ ಜಯ ಸಾಧಿಸಿದರು. ಫ್ರೆಂಚ್ ಓಪನ್ ಚಾಂಪಿಯನ್ ಬಬೊìರಾ ಕ್ರೆಜಿಕೋವಾ 6-2, 6-3ರಿಂದ ವಾಂಗ್ ಕ್ಸಿಯು ಅವರನ್ನು ಸೋಲಿಸಿದರು.
ಇದೇ ವೇಳೆ ಎರಡು ಬಾರಿಯ ಚಾಂಪಿಯನ್ ಅಜರೆಂಕಾ ಹಾಗೂ ಎಲಿನಾ ಸ್ವಿಟೋಲಿನಾ 3ನೇ ಸುತ್ತಿನ ಮುಖಾಮುಖೀಗೆ ಸಜ್ಜಾದರು.
ಪುರುಷರ ವಿಭಾಗ
ನಡಾಲ್ ಎದುರಾಳಿ ಜರ್ಮನಿಯ ಯಾನಿಕ್ ಹಾಫ್ಮನ್ ಅರ್ಹತಾ ಆಟಗಾರನಾಗಿದ್ದರು. ಗೆಲುವಿನ ಅಂತರ 6-2, 6-3, 6-4. ಅಲೆಕ್ಸಾಂಡರ್ ಜ್ವೆರೇವ್ ಆತಿಥೇಯ ನಾಡಿನ ಜಾನ್ ವಿರುದ್ಧ 6-4, 6-4, 6-0 ಅಂತರದ ಜಯ ಸಾಧಿಸಿದರು. ಡೆನ್ನಿಸ್ ಶಪೊವಲೋವ್, ಪಾಬ್ಲೊ ಕರೆನೊ ಬುಸ್ಟ 5 ಸೆಟ್‌ಗಳ ಹೋರಾಟ ನಡೆಸಿ ಗೆದ್ದು ಬಂದರು.