ಆಸ್ಟ್ರೇಲಿಯನ್‌ ಓಪನ್‌ : 4ನೇ ಸುತ್ತಿಗೆ ನಡಾಲ್‌ ನಾಗಾಲೋಟ

Team Udayavani, Jan 19, 2019, 12:30 AM IST

ಮೆಲ್ಬರ್ನ್ : ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಸ್ಪೇನಿನ 17 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ರಫೆಲ್‌ ನಡಾಲ್‌ 4ನೇ ಸುತ್ತಿಗೆ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರದ ಸ್ಪರ್ಧೆಯಲ್ಲಿ ಅವರು ಆಸ್ಟ್ರೇಲಿಯದ ಯುವ ಟೆನಿಸಿಗ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6-1, 6-2, 6-4 ಅಂತರದ ಜಯ ಸಾಧಿಸಿದರು. ಕಳೆದ ವರ್ಷದ ವಿಂಬಲ್ಡನ್‌ನಲ್ಲೂ ಮಿನೌರ್‌ ಇಷ್ಟೇ ಅಂತರದಿಂದ ನಡಾಲ್‌ಗೆ ಶರಣಾಗಿದ್ದರು.

2018ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ್ದ ನಡಾಲ್‌, ಈ ಹಾದಿಯಲ್ಲಿ ಜೆಕ್‌ ಆಟಗಾರ ಥಾಮಸ್‌ ಬೆರ್ಡಿಶ್‌ ಅವರನ್ನು ಎದುರಿಸಲಿದ್ದಾರೆ. ಬೆರ್ಡಿಶ್‌ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ವಿರುದ್ಧ 5-7, 6-3, 7-5, 6-4 ಅಂತರದ ಗೆಲುವು ಒಲಿಸಿಕೊಂಡರು.

3ನೇ ಸುತ್ತು ದಾಟಿದ ಫೆಡರರ್‌
ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಕೂಡ 3ನೇ ಸುತ್ತು ದಾಟಿದ್ದಾರೆ. ಅವರು ಅಮೆರಿಕದ 21ರ ಹರೆಯದ ಟಯ್ಲರ್‌ ಫ್ರಿಟ್ಜ್ ವಿರುದ್ಧ 6-2, 7-5, 6-2 ಅಂತರದಿಂದ ಗೆಲುವು ಸಾಧಿಸಿದರು. ಇದು “ರಾಡ್‌ ಲೆವರ್‌ ಅರೆನಾ’ದಲ್ಲಿ ಫೆಡರರ್‌ ಆಡಿದ 100ನೇ ಪಂದ್ಯವೆಂಬುದು ವಿಶೇಷ. ಅವರ ಮುಂದಿನ ಎದುರಾಳಿ ಗ್ರೀಕ್‌ನ 14ನೇ ಶ್ರೇಯಾಂಕಿತ ಸ್ಟೆಫ‌ನಸ್‌ ಸಿಸಿಪಸ್‌.

ಡಿಮಿಟ್ರೋವ್‌ ಮುನ್ನಡೆ
ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಅಂತಿಮ 16ರ ಸುತ್ತು ತಲುಪಿದ್ದಾರೆ. 3ನೇ ಸುತ್ತಿನ ಸೆಣಸಾಟದಲ್ಲಿ ಅವರು ಇಟಲಿಯ ಥಾಮಸ್‌ ಫ್ಯಾಬಿಯಾನೊ ವಿರುದ್ಧ 7-6 (7-5), 6-4, 6-4 ಅಂತರದಿಂದ ಮೇಲುಗೈ ಸಾಧಿಸಿದರು. ಇವರ ಮುಂದಿನ ಎದುರಾಳಿ ಅಮೆರಿಕದ ಫ್ರಾನ್ಸೆಸ್‌ ಟಿಯಾಫೊ. ಇಟಲಿಯ ಆ್ಯಂಡ್ರಿಯಾಸ್‌ ಸೆಪ್ಪಿ ವಿರುದ್ಧ ಟಿಯಾಫೊ 5 ಸೆಟ್‌ಗಳ ಕಾದಾಟದ ಬಳಿಕ ಜಯ ಕಾಣುವಲ್ಲಿ ಯಶಸ್ವಿಯಾದರು. ರವಿವಾರ ಟಿಯಾಫೊ ಅವರ 21ನೇ ಬರ್ತ್‌ಡೇ ಆಗಿದ್ದು, ಗೆದ್ದರೆ ಅದೊಂದು ಸ್ಮರಣೀಯ ಉಡುಗೊರೆಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ