ನಡಾಲ್‌, ಹಾಲೆಪ್‌ ಶುಭಾರಂಭ; ಶರಪೋವಾಗೆ ಸೋಲಿನ ಆಘಾತ

Team Udayavani, Jan 22, 2020, 12:08 AM IST

ಮೆಲ್ಬರ್ನ್: ವಿಶ್ವದ ನಂಬರ್‌ ವನ್‌ ರಫೆಲ್‌ ನಡಾಲ್‌ ನಿರೀಕ್ಷೆಯಂತೆ ಸುಲಭ ಗೆಲುವಿನೊಂದಿಗೆ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ನಲ್ಲಿ ತನ್ನ ಅಭಿಯಾನವನ್ನು ಶುಭಾರಂಭಗೈದಿದ್ದಾರೆ. ಆದರೆ ಎರಡು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಸಿಮೋನಾ ಹಾಲೆಪ್‌ ಮೊದಲ ಸುತ್ತು ದಾಟಲು ಸ್ವಲ್ಪ ಕಷ್ಟಪಟ್ಟರು. ಇದೇ ವೇಳೆ ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಮರಿಯಾ ಶರಪೋವಾ ಮೊದಲ ಸುತ್ತಿನಲ್ಲಿ ಸೋತು ಆಘಾತ ಅನುಭವಿಸಿದ್ದಾರೆ.

ಭಾರತದ ಪ್ರಜ್ಞೆಶ್ ಗೆ ಸೋಲು

ಮೆಲ್ಬರ್ನ್: ಭಾರತದ ಅಗ್ರ ರ್‍ಯಾಂಕಿನ ಟೆನಿಸ್‌ ಆಟಗಾರ ಪ್ರಜ್ಞೆಶ್‌ ಗುಣೇಶ್ವರನ್‌ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ಓಪನ್‌ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೋತು ಕೂಟದಿಂದ ಹೊರನಡೆದಿದ್ದಾರೆ.

ಈ ಸೋಲಿನೊಂದಿಗೆ ಪ್ರಜ್ಞೆàಶ್‌ ವಿಶ್ವದ 2ನೇ ರ್‍ಯಾಂಕಿನ ನೊವಾಕ್‌ ಜೊಕೋವಿಕ್‌ ವಿರುದ್ಧ ಸೆಣಸುವ ಸುವರ್ಣಾವಕಾಶವನ್ನು ಕಳೆದುಕೊಂಡರು. ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ 122ನೇ ರ್‍ಯಾಂಕಿನ ಪ್ರಜ್ಞೆàಶ್‌ ಅದೃಷ್ಟದ ಬಲದಿಂದ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟಿದ್ದರು.

ಸೋಮವಾರ ಮಳೆಯ ಕಾರಣ ವೇಳಾಪಟ್ಟಿಯನ್ನು ಪರಿಷ್ಕರಿಸಿ ಮಂಗಳವಾರಕ್ಕೆ ಪಂದ್ಯವನ್ನು ಮುಂದೂಡಲಾಗಿತ್ತು. ಮಂಗಳವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಜಪಾನಿನ ವೈಲ್ಡ್‌ಕಾರ್ಡ್‌ ಆಟಗಾರ ತತ್ಸುಮ ಇಟೊ ವಿರುದ್ಧ 6-4, 6-2, 7-5 ನೇರ ಸೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿದರು. ಈ ಹೋರಾಟ 2 ತಾಸು ಸಾಗಿದ್ದು ಗೆಲುವು ಸಾಧಿಸಲು ಪ್ರಜ್ಞೆàಶ್‌ ಅವಿರತ ಪ್ರಯತ್ನ ನಡೆಸಿದ್ದರು. ಪ್ರಜ್ಞೆàಶ್‌ ಸತತ ಐದನೇ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಮುಖ್ಯ ಡ್ರಾದಲ್ಲಿ ಆಡಿದ್ದಾರೆ.

ಈ ಸೋಲಿನೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ದಿವಿಜ್‌ ಶರಣ್‌ ಮತ್ತು ಕಿವೀಸ್‌ನ ಜತೆಗಾರ ಆರ್ಟೆಮ್‌ ಸಿತಾಕ್‌ ಮತ್ತು ರೋಹನ್‌ ಬೋಪಣ್ಣ ಮತ್ತು ಜಪಾನಿನ ಜತೆಗಾರ ಯಸುಟಕ ಯುಚಿಯಾಮ ತಮ್ಮ ಎದುರಾಳಿಯೆದುರು ಆಡಲಿದ್ದಾರೆ. ಸಾನಿಯಾ ಮಿರ್ಜಾ ಮತ್ತು ನದಿಯಾ ಕಿಚೆನಾಕ್‌ ವನಿತೆಯರ ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ನಡಾಲ್‌ ಜಯಭೇರಿ
ಬೊಲಿವಿಯನ್‌ನ ಹುಗೊ ಡೆಲೀನ್‌ ಅವರನ್ನು 6-2, 6-3, 6-0 ನೇರ ಸೆಟ್‌ಗಳಿಂದ ಉರುಳಿಸಿದ ನಡಾಲ್‌ ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದರು. ರೋಜರ್‌ ಫೆಡರರ್‌ ಅವರ ದಾಖಲೆಯ 20 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಸಾಧನೆ ಸಮಗಟ್ಟುವುದು ಮುಖ್ಯವಲ್ಲ ಆದರೆ ಟೆನಿಸ್‌ ಬಾಳ್ವೆಯಲ್ಲಿ ಖುಷಿಯಾಗಿರುವುದು ಇಷ್ಟ ಎಂದು ನಡಾಲ್‌ ಹೇಳಿದ್ದಾರೆ.

ನಡಾಲ್‌ ಅವರು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚಿನ ಬಾರಿ ಗೆಲ್ಲಲಿಲ್ಲ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 12 ಬಾರಿ (ಫ್ರೆಂಚ್‌ ಓಪನ್‌), ಯುಎಸ್‌ ಓಪನ್‌ನಲ್ಲಿ ನಾಲ್ಕು ಮತ್ತು ವಿಂಬಲ್ಡನ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಒಂದು ವೇಳೆ ನಡಾಲ್‌ ಇಲ್ಲಿ ಈ ಬಾರಿ ಪ್ರಶಸ್ತಿ ಬಾರಿ ವರ್ಷದ ನಾಲ್ಕು ಗ್ರ್ಯಾನ್‌ ಸ್ಲಾಮ್‌ ಅನ್ನು ಎರಡನೇ ಬಾರಿ ಗೆದ್ದ ಅಪರೂಪದ ಸಾಧನೆಯನ್ನು ಕೂಡ ಮಾಡಲಿದ್ದಾರೆ.

ಹಾಲೆಪ್‌ಗೆ ಕಷ್ಟದ ಜಯ
ರೊಮಾನಿಯದ ನಾಲ್ಕನೇ ಶ್ರೇಯಾಂಕದ ಹಾಲೆಪ್‌ ಅವರು ಕಳಪೆಯಾಗಿ ಆಟ ಆರಂಭಿಸಿ ದ್ದರೂ ಅಮೆರಿಕದ ಜೆನ್ನಿಫ‌ರ್‌ ಬ್ರ್ಯಾಡಿ ಅವರನ್ನು 7-6 (7-5), 6-1 ಸೆಟ್‌ಗಳಿಂದ ಮಣಿಸಲು ಯಶಸ್ವಿಯಾದರು. 2018ರ ಫ್ರೆಂಚ್‌ ಮತ್ತು 2019ರ ವಿಂಬಲ್ಡನ್‌ ಚಾಂಪಿಯನ್‌ ಆಗಿರುವ ಹಾಲೆಪ್‌ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಅರ್ಹತಾ ಆಟಗಾರ್ತಿ ಹರಿಯೆಟ್‌ ಡಾರ್ಟ್‌ ಅಥವಾ ಜಪಾನಿನ ಮಿಸಾಕಿ ದೊಯಿ ಅವರನ್ನು ಎದುರಿಸಲಿದ್ದಾರೆ.

ಮೆಡ್ವೆಡೇವ್‌ ಮುನ್ನಡೆ
ಮಳೆಯಿಂದ ಮುಂದೂಡಲ್ಪಟ್ಟ ಇನ್ನೊಂದು ಪಂದ್ಯದಲ್ಲಿ ಡೆನಿಲ್‌ ಮೆಡ್ವೆಡೇವ್‌ ಅವರು ಫ್ರಾನ್ಸಿಸ್‌ ತಿಯಾಪೋಯಿ ಅವರನ್ನು ನಾಲ್ಕು ಸೆಟ್‌ಗಳಲ್ಲಿ ಮಣಿಸಿ ಮುನ್ನಡೆದರು. ಮಳೆಯಿಂದ ಆಟ ನಿಂತಾಗ ಇಬ್ಬರೂ ಒಂದೊಂದು ಸೆಟ್‌ ಗೆದ್ದಿದ್ದರು. ಮಂಗಳವಾರ ಆಟ ಆರಂಭಗೊಂಡ ಬಳಿಕ ಆಟದಲ್ಲಿ ಪ್ರಾಬಲ್ಯ ಸ್ಥಾಪಿಸಿದ ಡೆನಿಲ್‌ಮೆಡ್ವೆಡೇವ್‌ ಅಂತಿಮವಾಗಿ 6-3, 4-6, 6-4, 6-2 ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಇನ್ನೊಂದು ಪಂದ್ಯದಲ್ಲಿ ನಿಕ್‌ ಕಿರ್ಗಿಯೋಸ್‌ ಅವರು ಎಲ್‌. ಸೊನೆಗೊ ಅವರನ್ನು 6-2, 7-6 (7-3), 7-6 (7-1) ಸೆಟ್‌ಗಳಿಂದ ಕೆಡಹಿದರೆ ಫ್ರಾನ್ಸ್‌ನ ಗಾಲ್‌ ಮೊನ್‌ಫಿಲ್ಸ್‌ ಅವರು ಯೆನ್‌ ಹುÕನ್‌ ಅವರನ್ನು 6-1, 6-4, 6-2 ಸೆಟ್‌ಗಳಿಂದ ಸದೆಬಡಿದರು.

ವಾವ್ರಿಂಕಗೆ ಜಯ
ನಾಲ್ಕು ಸೆಟ್‌ಗಳ ಕಾದಾಟದಲ್ಲಿ ಸ್ವಿಸ್‌ನ ಸ್ಟಾನ್‌ ವಾವ್ರಿಂಕ ಅವರು ಡಿಜುಮ್‌ಹರ್‌ ಅವರನ್ನು 7-5, 6-7 (4), 6-4, 6-4 ಸೆಟ್‌ಗಳಿಂದ ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಡೊಮಿನಿಕ್‌ ಥೀಮ್‌ ಅವರು ಆ್ಯಡ್ರಿಯನ್‌ ಮನ್ನಾರಿಯೊ ಅವರ ವಿರುದ್ಧ 6-3, 7-5, 6-2 ಸೆಟ್‌ಗಳಿಂದ ಗೆದ್ದು ಬಂದರು.

ಶರಪೋವಾಗೆ ಆಘಾತ
ವೈಲ್ಡ್‌ಕಾರ್ಡ್‌ ಮೂಲಕ ಇಲ್ಲಿ ಆಡಲಿಳಿದ ಶರಪೋವಾ ಮೊದಲ ಸುತ್ತಿನಲ್ಲಿಯೇ ಆಟ ಮುಗಿಸಿ ಹೊರಬಿದ್ದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಶರಪೋವಾ ಇಲ್ಲಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸದಲ್ಲಿದ್ದರು. ಆದರೆ 3-6, 4-6 ನೇರ ಸೆಟ್‌ಗಳಿಂದ ಕ್ರೊವೇಶಿಯದ ಡೊನ್ನಾ ವೆಕಿಕ್‌ ಅವರಿಗೆ ಸೋತು ಆಘಾತ ಅನುಭವಿಸಿದರು. 2010ರಲ್ಲಿ ಇಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದ ಶರಪೋವಾ ಇದೀಗ ಸತತ ಮೂರನೇ ಗ್ರ್ಯಾನ್‌ ಸ್ಲಾಮ್‌ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. ವನಿತೆಯರ ಇನ್ನೊಂದು ಪಂದ್ಯದಲ್ಲಿ ಕೆರೋಲಿನಾ ಪ್ಲಿಸ್ಕೋವಾ ಅವರು ಕ್ರಿಸ್ಟಿನಾ ಮಡೆನೋವಿಕ್‌ ಅವರನ್ನು 6-1, 7-5 ಸೆಟ್‌ಗಳಿಂದ ಉರುಳಿಸಿದರು.

ಫಾಗ್ನಿನಿಗೆ ಅದ್ಭುತ ಜಯ
ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಅದ್ಭುತವಾಗಿ ಆಡಿದ ಇಟಲಿಯ 12ನೇ ಶ್ರೇಯಾಂಕದ ಫಾಬಿಯೊ ಫಾಗ್ನಿನಿ ದ್ವಿತೀಯ ಸುತ್ತಿಗೆ ಏರಿದ್ದಾರೆ. ಮೊದಲೆರಡು ಸೆಟ್‌ಗಳಲ್ಲಿ ಸೋತಿದ್ದರೂ ವಿಚಲಿತರಾಗದೇ ಗೆಲುವಿನ ಉತ್ಸಾಹದೊಂದಿಗೆ ಹೋರಾಡಿದ ಫಾಗ್ನಿನಿ ಅಮೆರಿಕದ ರೀಲಿ ಒಪೆಲ್ಕ ಅವರನ್ನು 3-6, 6-7 (3-7), 6-4, 6-3, 7-6(7-5) ಸೆಟ್‌ಗಳಿಂದ ಮಣಿಸಿ ಸಂಭ್ರಮಿಸಿದರು. ಪಂದ್ಯದ ಮೊದಲೆರಡು ಸೆಟ್‌ ಮುಗಿದ ಬಳಿಕ ಮಳೆ ಬಂದ ಕಾರಣ ನಿಂತಿತ್ತು. ಮಂಗಳವಾರ ಈ ಪಂದ್ಯ ಮತ್ತೆ ಆರಂಭವಾಗಿತ್ತು. ಮಳೆಯ ಲಾಭ ಎತ್ತಿದ ಫಾಗ್ನಿನಿ ಅದ್ಭುತ ರೀತಿಯಲ್ಲಿ ಪ್ರತ್ಯುತ್ತರ ನೀಡಿ ಸತತ ಎರಡು ಸೆಟ್‌ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಐದನೇ ಸೆಟ್‌ನಲ್ಲಿ ಮತ್ತೆ ಇಬ್ಬರೂ ಉಗ್ರ ಕಾಳಗ ನಡೆಸಿದರು. ಅಂತಿಮವಾಗಿ ಟೈಬ್ರೇಕರ್‌ನಲ್ಲಿ ಫಾಗ್ನಿನಿ ಪಂದ್ಯ ಗೆಲ್ಲಲು ಯಶಸ್ವಿಯಾದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ