ಆತಿಥೇಯ ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ
ಸುಲ್ತಾನ್ ಅಜ್ಲಾನ್ ಶಾ ಹಾಕಿ
Team Udayavani, Mar 27, 2019, 6:49 AM IST
ಇಪೊ (ಮಲೇಷ್ಯಾ): ಪುರುಷರ ಸುಲ್ತಾನ್ ಅಜ್ಲಾನ್ ಶಾ ಹಾಕಿ ಕೂಟದ ಲೀಗ್ನ ಮೂರನೇ ಪಂದ್ಯದಲ್ಲಿ ಭಾರತ 4-2 ಗೋಲುಗಳ ಅಂತರದಿಂದ ಆತಿಥೇಯ ಮಲೇಷ್ಯಾ ತಂಡವನ್ನು ಸೋಲಿಸಿದೆ. ಇದರೊಂದಿಗೆ ಭಾರತೀಯರು ಜಯದ ನಾಗಾಲೋಟವನ್ನು ಮುಂದುವರಿಸಿದ್ದಾರೆ.
ಭಾರತ ಲೀಗ್ನ ಮೊದಲ ಪಂದ್ಯದಲ್ಲಿ ಏಶ್ಯಾಡ್ ಚಾಂಪಿಯನ್ ಬಲಿಷ್ಠ ಜಪಾನ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಎರಡನೇ ಪಂದ್ಯದಲ್ಲಿ ಭಾರತೀಯರು ಕೊರಿಯ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತ್ತು. ಬುಧವಾರ ನಡೆಯಲಿರುವ ತನ್ನ ಲೀಗ್ನ 4ನೇ ಪಂದ್ಯದಲ್ಲಿ ಭಾರತವು ಕೆನಡ ತಂಡವನ್ನು ಎದುರಿಸಲಿದೆ.
ಸಿಡಿದ ಗೋಲುಗಳ ಮಳೆ
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಇಳಿಯಿತು. 17ನೇ ನಿಮಿಷದಲ್ಲಿ ಸುಮಿತ್ ಭಾರತದ ಗೋಲಿನ ಖಾತೆಯನ್ನು ತೆರೆದರು. ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಆದರೆ ಮಲೇಷ್ಯಾ ಅಷ್ಟಕ್ಕೆ ಸುಮ್ಮನಾಗಿ ಕೂರಲಿಲ್ಲ. 21ನೇ ನಿಮಿಷದಲ್ಲಿ ರಝಿ ಮೂಲಕ ಗೋಲಿನ ಖಾತೆ ತೆರೆಯಿತು. 1-1 ಗೋಲುಗಳಿಂದ ಸಮ ಸಾಧಿಸಿಕೊಂಡಿತು. ಅನಂತರ ಹಂತದಲ್ಲಿ ಭಾರತದ ಆಟ ಮತ್ತಷ್ಟು ತೀವ್ರವಾಯಿತು.
27ನೇ ನಿಮಿಷದಲ್ಲಿ ಸುಮಿತ್ ಕುಮಾರ್ ಹಾಗೂ 36ನೇ ನಿಮಿಷದಲ್ಲಿ ವರುಣ್ ಗೋಲು ಸಿಡಿಸುವ ಮೂಲಕ ತಂಡದ ಒಟ್ಟಾರೆ ಗೋಲಿನ ಸಂಖ್ಯೆಯನ್ನು 3-1ಕ್ಕೆ ಏರಿಸಿತು. ಪಂದ್ಯದ 57ನೇ ನಿಮಿಷದಲ್ಲಿ ಮಲೇಷ್ಯಾ ಪರ ಫರ್ಹಾನ್ ಗೋಲು ಸಿಡಿಸಿದರು. ತಂಡದ ಹಿನ್ನಡೆ ಅಂತರವನ್ನು 2-3ಕ್ಕೆ ತಗ್ಗಿಸಿದರು. ಆದರೆ 58ನೇ ನಿಮಿಷದಲ್ಲಿ ಮಂದೀಪ್ ಗೋಲು ಬಾರಿಸಿದ್ದರಿಂದ ಭಾರತ 4-2ಕ್ಕೆ ಗೋಲು ಹೆಚ್ಚಿಸಿಕೊಂಡಿತ್ತಲ್ಲದೆ ಗೆಲುವನ್ನೂ ಖಾತ್ರಿಗೊಳಿಸಿತು.