ಅಪಘಾತದ ಬಳಿಕ ಮೊದಲ ಪ್ರಶಸ್ತಿ ಗೆದ್ದ ಮೊಮೊಟ
Team Udayavani, Nov 22, 2021, 11:15 PM IST
ಬಾಲಿ (ಇಂಡೋನೇಶ್ಯ): ಕಳೆದ ವರ್ಷದ ಭೀಕರ ರಸ್ತೆ ಅಪಘಾತದ ಬಳಿಕ ಚೇತರಿಸಿಕೊಂಡು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ಗೆ ಇಳಿದ ಜಪಾನಿನ ಕೆಂಟೊ ಮೊಮೊಟ ಮೊದಲ ಪ್ರಶಸ್ತಿ ಜಯಿಸಿದ್ದಾರೆ.
ಇಂಡೋನೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಿಂಗಲ್ಸ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಫೈನಲ್ ಹಣಾಹಣಿಯಲ್ಲಿ ಕೆಂಟೊ ಮೊಮೊಟ ಡೆನ್ಮಾರ್ಕ್ನ ಆ್ಯಂಡರ್ ಆ್ಯಂಟೋನ್ಸೆನ್ ವಿರುದ್ಧ 21-17, 21-11 ಅಂತರದ ಜಯ ಸಾಧಿಸಿದರು.
“ಈ ಗೆಲುವಿಗಾಗಿ ನಾನು ಕಠಿನ ಪ್ರಯತ್ನ ಮಾಡಿದ್ದೇನೆ. ಬಹಳ ಸಂತೋಷವಾಗಿದೆ. ಎರಡೂ ಗೇಮ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ’ ಎಂದು 27 ವರ್ಷದ ಕೆಂಟೊ ಮೊಮೊಟ ಹೇಳಿದರು.