ಬುಲ್ಸ್ಗೆ ತಿವಿದ ಪುನೇರಿ ಪಲ್ಟಾನ್
Team Udayavani, Aug 22, 2019, 5:18 AM IST
ಚೆನ್ನೈ: ಆತಿಥೇಯ ತಮಿಳ್ ತಲೈವಾಸ್ ತಂಡಕ್ಕೆ ಸೋಲುಣಿಸಿ ಬೀಗಿದ್ದ ಬೆಂಗಳೂರು ಬುಲ್ಸ್ ತಂಡವನ್ನು ಪುನೇರಿ ಪಲ್ಟಾನ್ 31-23 ಅಂಕಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಬೆಂಗಳೂರು ತಂಡ 9 ಪಂದ್ಯಗಳಲ್ಲಿ 4ನೇ ಸೋಲು ಅನುಭವಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ ದ್ವಿತೀಯ ಪಂದ್ಯದಲ್ಲಿ ಜೈಪುರ್ 28-26 ಅಂತರದಿಂದ ಆತಿಥೇಯ ತಲೈವಾಸ್ಗೆ ಸೋಲುಣಿಸಿತು.
ಬುಧವಾರ ಇಲ್ಲಿನ ಜವಾಹರ್ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪಲ್ಟಾನ್ ಹುಡುಗರು ಬ್ರೇಕ್ ಹಾಕಿದರು. ಪುನೇರಿ ಪಲ್ಟಾನ್ ಪರ ರೈಡಿಂಗ್ನಲ್ಲಿ ಮಂಜಿತ್ (7 ಅಂಕ) ಅತ್ಯುತ್ತಮ ಆಟ ಪ್ರದರ್ಶಿಸಿದರೆ, ಸುರ್ಜಿತ್ ಸಿಂಗ್ (6 ಅಂಕ) ಹಾಗೂ ಜಾಧವ್ ಶಾಹಜಿ (5 ಅಂಕ) ಅದ್ಭುತ ಟ್ಯಾಕಲ್ ನಡೆಸಿ ಬುಲ್ಸ್ಗೆ ಮಾರಕವಾಗಿ ಪರಿಣಮಿಸಿದರು. ತ್ರಿಮೂರ್ತಿಗಳ ಅಬ್ಬರದ ಆಟದಿಂದಾಗಿ ಪುನೇರಿ ಪಲ್ಟಾನ್ಗೆ ಸುಲಭವಾಗಿ ಬೆಂಗಳೂರನ್ನು ಕಟ್ಟಿ ಹಾಕಲು ಸಾಧ್ಯವಾಯಿತು.
ಪವನ್ ಸೆಹ್ರಾವತ್ ವಿಫಲ
ಪಂದ್ಯದುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡುತ್ತಿರುವ ತಾರಾ ರೈಡರ್ ಪವನ್ ಸೆಹ್ರಾವತ್ (5 ಅಂಕ) ರೈಡಿಂಗ್ನಲ್ಲಿ ವಿಫಲರಾದರು. ಜತೆಗೆ ನಾಯಕ ರೋಹಿತ್ ಕುಮಾರ್ (7 ಅಂಕ) ಕೂಡ ರೈಡಿಂಗ್ನಲ್ಲಿ ದೊಡ್ಡ ಯಶಸ್ಸು ಕಾಣಲಿಲ್ಲ.