ಶೂ ಇಲ್ಲದೆ ಪಾದಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಪಡೆದ ಬಾಲಕಿ
400 ಮೀಟರ್, 800 ಮೀಟರ್ ಹಾಗೂ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮೂರು ಚಿನ್ನದ ಪದಕ
Team Udayavani, Dec 18, 2019, 6:26 PM IST
ನವದೆಹಲಿ: ಏನಾದರು ಸಾಧಿಸಲೆಬೇಕೆಂಬ ಛಲ ಇದ್ದರೆ ಗುರಿ ಮುಟ್ಟಬಹುದು ಎಂಬುದಕ್ಕೆ ಈ ಬಾಲಕಿಯೇ ಸಾಕ್ಷಿ. ಶೂ ಇಲ್ಲದೆಯೇ ಶಾಲಾ ಕ್ರೀಡಾಕೂಟದಲ್ಲಿ ಪಾದಕ್ಕೆ, ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಓಟದ ಸ್ಪರ್ಧೆಯಲ್ಲಿ ಬರೋಬ್ಬರಿ ಮೂರು ಚಿನ್ನದ ಪದಕ ಗಳಿಸಿದ್ದಾಳೆ!
ಫಿಲಿಫ್ಫೀನ್ಸ್ ನ 11 ವರ್ಷದ ಬಾಲಕಿಯ ಈ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಯಾ ಬುಲ್ಲೋಸ್ ಇಲ್ಲೋಲಿಯೋ ಶಾಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಳು. ಆದರೆ ಈಕೆ ಬಳಿ ಶೂ ಇರಲಿಲ್ಲವಾಗಿತ್ತು. ಆದರೂ ಧೈರ್ಯಗೆಡದ ಬುಲ್ಲೋಸ್ ಪಾದದ ಹಿಂಭಾಗಕ್ಕೆ, ಪಾದಕ್ಕೆ ಬ್ಯಾಂಡೇಜ್ ಅನ್ನೇ ಸುತ್ತಿಕೊಂಡು 400 ಮೀಟರ್, 800 ಮೀಟರ್ ಹಾಗೂ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಬುಲ್ಲೋಸ್ ಪಾದಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ: ನೂತನ ಮಾದರಿಯ ಸ್ಪೈಕ್ ಶೂಸ್…ಮೇಡ್ ಇನ್ ಫಿಲಿಪ್ಪೀನ್ಸ್.. 3 ಚಿನ್ನದ ಪದಕ ಪಡೆದ ರೆಯಾ ಬುಲ್ಲೋಸ್ ಗೆ ಅಭಿನಂದನೆಗಳು ಎಂದು ಬರೆದಿದ್ದರು.
ಈ ಫೇಸ್ ಬುಕ್ ಫೋಸ್ಟ್ ಕೆಲವೇ ಗಂಟೆಯಲ್ಲಿ 2 ಸಾವಿರ ಲೈಕ್ ಹಾಗೂ ಒಂದು ಸಾವಿರಕ್ಕೂ ಅಧಿಕ ಶೇರ್ ಆಗಿರುವುದಾಗಿ ವರದಿ ತಿಳಿಸಿದೆ.