ಪಿ.ವಿ. ಸಿಂಧುಗೆ ಕಠಿನ ಡ್ರಾ
Team Udayavani, Dec 11, 2018, 6:00 AM IST
ಗ್ವಾಂಗ್ಝೂ (ಚೀನ): ಬುಧವಾರದಿಂದ ಆರಂಭವಾಗಲಿರುವ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್’ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಕಠಿನ ಡ್ರಾ ಎದುರಾಗಿದೆ. ಮೊದಲ ಬಾರಿಗೆ ಈ ಕೂಟದಲ್ಲಿ ಭಾಗವಹಿಸುತ್ತಿರುವ ಸಮೀರ್ ವರ್ಮ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಲಭ ಡ್ರಾ ಸಿಕ್ಕಿದ್ದು ನಾಕೌಟ್ ಹಂತ ತಲುಪುವ ಅವಕಾಶವಿದೆ.
ಕಳೆದ ವರ್ಷ ದುಬಾೖಯಲ್ಲಿ ನಡೆದ ಆವೃತ್ತಿಯಲ್ಲಿ ರನ್ನರ್ ಆಪ್ ಪ್ರಶಸ್ತಿ ಪಡೆದಿದ್ದ ಸಿಂಧು, ಈ ಬಾರಿಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಜಪಾನಿನ ಅಕಾನೆ ಯಮಗುಚಿ, ವಿಶ್ವದ ನಂ. ವನ್ ಚೈನೀಸ್ ತೈಪೆನ ತೈ ತ್ಸು ಯಿಂಗ್ ಹಾಗೂ ಅಮೆರಿಕದ ಬೈವೆನ್ ಹಾಂಗ್ ಅವರೊಂದಿಗೆ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸಿಂಧುಗೆ ಈ ಕೂಟ ಕಷ್ಟಕರವಾಗಿರಲಿದೆ. 3ನೇ ಬಾರಿಗೆ ಈ ಕೂಟದಲ್ಲಿ ಸಿಂಧು ಪಾಲ್ಗೊಳ್ಳುತ್ತಿದ್ದು, ಯಮಗುಚಿ ವಿರುದ್ಧ 9-4 ಗೆಲುವುಗಳ ದಾಖಲೆ ಹೊಂದಿದ್ದಾರೆ. ಆದರೆ ಈ ಋತುವಿನಲ್ಲಿ ಯಮಗುಚಿ ವಿರುದ್ಧದ 5 ಪಂದ್ಯಗಳಲ್ಲಿ 4ರಲ್ಲಿ ಸೋಲನುಭವಿಸಿದ್ದಾರೆ.
ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಟೂರ್ನಿಯ ಪ್ರಶಸ್ತಿ ಉಳಿಸಿಕೊಂಡಿರುವ ಸಮೀರ್ ವರ್ಮ, ಕೊನೆ ಘಳಿಗೆಯಲ್ಲಿ ಈ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅವರು ವಿಶ್ವದ ನಂ. ವನ್ ಜಪಾನಿನ ಕೆಂಟೊ ಮೊಮೊಟಾ, ಇಂಡೋನೇಶ್ಯದ ಟಾಮಿ ಸುಗಿಆರ್ಟೊ ಹಾಗೂ ಥಾಯ್ಲೆಂಡ್ನ ಕಂಟಾಫೊನ್ ವಾಂಗ್ಚಾರಿಯನ್ ಅವರೊಂದಿಗೆ ಗುಂಪು ಹಂಚಿಕೊಂಡಿದ್ದಾರೆ. ಕೆ. ಶ್ರೀಕಾಂತ್ ಬಳಿಕ ಈ ಕೂಟಕ್ಕೆ ಅರ್ಹತೆ ಪಡೆದ ಎರಡನೇ ಭಾರತೀಯ ಆಟಗಾರನಾಗಿರುವ ಸಮೀರ್ ವರ್ಮ ಸೆಮಿಫೈನಲ್ ವರೆಗೆ ಸುಲಭವಾಗಿ ಸಾಗಬಹುದು.