18 ಸಿಕ್ಸರ್ ಚಚ್ಚಿದ ಗೇಲ್: ಸರಣಿ ವಿಶ್ವದಾಖಲೆ!
Team Udayavani, Dec 13, 2017, 3:00 PM IST
ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್)ನಲ್ಲಿ ಗೇಲ್ ಬೆಂಕಿ ಬಿರುಗಾಳಿಯ ಶತಕ ಸಿಡಿಸಿದ್ದಾರೆ. 2013ರಲ್ಲಿ ಐಪಿಎಲ್‌ನಲ್ಲಿ ತಾವೇ ದಾಖಲಿಸಿದ್ದ 17 ಸಿಕ್ಸರ್ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ. ಜತೆಗೆ ಕೆಲವೊಂದು ವಿಶ್ವದಾಖಲೆಗಳನ್ನು ಕೆರಿಬಿಯನ್ ದೊರೆ ಪುಡಿಗಟ್ಟಿದ್ದಾರೆ.
ಮಂಗಳವಾರ ನಡೆದ ಬಿಪಿಎಲ್ ಫೈನಲ್‌ನಲ್ಲಿ ಅಜೇಯ 146 ರನ್ ಬಾರಿಸಿದ ವೇಳೆ ಗೇಲ್ 18 ಸಿಕ್ಸರ್ ಸಿಡಿಸಿದರು. ಟಿ20 ಪಂದ್ಯವೊಂದರಲ್ಲಿ ಇಷ್ಟು ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇವರು ಬ್ರೆಂಡನ್ ಮೆಕಲಂ ಜತೆಗೂಡಿ ನಡೆಸಿದ ಸಾಹಸಮಯ 201 ರನ್ ಜತೆಯಾಟದಿಂದ ಢಾಕಾ ಡೈನಾಮೈಟ್ಸ್ (20 ಓವರ್, 149/9) ವಿರುದ್ಧ ರಂಗ್‌ಪುರ ರೈಡರ್ (20 ಓವರ್, 206/1) ಭರ್ಜರಿ 57 ರನ್ ಜಯ ಸಾಧಿಸಿ ಚಾಂಪಿಯನ್ ಆಯಿತು.
ಅವರು 69 ಎಸೆತದಲ್ಲಿ ವೇಗದ ಶತಕಸಿಡಿಸಿದರು. ಅಲ್ಲದೆ ಅವರು ಒಟ್ಟಾರೆ ಎಲ್ಲ ಟಿ20 ಕೂಟಗಳು ಸೇರಿ (ಐಪಿಎಲ್, ಬಿಗ್‌ಬಾಷ್, ಬಿಪಿಎಲ್, ಸಿಪಿಎಲ್, ಪಿಎಸ್‌ಎಲ್, ನಾಟ್‌ವೆಸ್ಟ್ ಹಾಗೂ ಅಂ.ರಾ. ಟಿ20) 11 ಸಾವಿರ ವೈಯಕ್ತಿಕ ರನ್ ಗಡಿ ದಾಟಿದರು. ಬಿಪಿಎಲ್ ಫೈನಲ್‌ನಲ್ಲಿ ಗೇಲ್ ಬಾರಿಸಿದ ಶತಕಅವರ ವೃತ್ತಿ ಜೀವನದ 20ನೆಯ ಶತಕವಾಗಿ ದಾಖಲಾಯಿತು.