ಸಿಎಸ್‌ಕೆ ಪರಿವಾರ ಯುಎಇಗೆ ತೆರಳದು
Team Udayavani, Aug 12, 2020, 10:05 PM IST
ಸಾಂದರ್ಭಿಕ ಚಿತ್ರ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕುಟುಂಬದವರು ಯುಎಇಗೆ ಪಯಣಿಸುವುದಿಲ್ಲ ಎಂಬುದಾಗಿ ತಂಡದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಆದರೆ ಕೂಟದ ದ್ವಿತೀಯಾರ್ಧದ ವೇಳೆ ಇವರು ತೆರಳಲೂಬಹುದು, ಇದನ್ನು ಮುಂದೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.
“ಕೂಟದ ಪ್ರಥಮಾರ್ಧದಲ್ಲಿ ಆಟಗಾರರ ಕುಟುಂಬದವರ್ಯಾರೂ ಯುಎಇಗೆ ತೆರಳುವುದಿಲ್ಲ. ಅಲ್ಲಿಗೆ ತೆರಳಿದ ಬಳಿಕ ಪರಿಸ್ಥಿತಿ ಹೇಗೆ ನಿಂತೀತು ಎಂಬುದರ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ವಿಶ್ವನಾಥನ್ ಹೇಳಿದರು.
ಬಿಸಿಸಿಐ ನಿರ್ಬಂಧವಿಲ್ಲ
ಬಿಸಿಸಿಐ ಪ್ರಕಟಿಸಿದ ಎಸ್‌ಒಪಿ ನಿಯಮಾವಳಿಯಲ್ಲಿ ಕುಟುಂಬದ ಸದಸ್ಯರಿಗೇನೂ ನಿರ್ಬಂಧ ವಿಧಿಸಿರಲಿಲ್ಲ. ಇದು ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ, ಪರಿವಾರದವರು ಅಲ್ಲಿಗೆ ತೆರಳಿದರೆ ಜೈವಿಕ ಸುರಕ್ಷ ವಲಯದ ಪ್ರತಿಯೊಂದು ನಿಯಮಾವಳಿಯನ್ನೂ ತಪ್ಪದೇ ಪಾಲಿಸಬೇಕಾಗುತ್ತದೆ ಎಂದು ಸೂಚಿಸಿತ್ತು. ಅಭಿಮಾನಿಗಳಿಗೂ ಯುಎಇಗೆ ತೆರಳಲು ಅವಕಾಶವಿಲ್ಲ ಎಂದು ವಿಶ್ವನಾಥನ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಸಿಎಸ್‌ಕೆ ತಂಡದ ಆಟಗಾರರು ಮತ್ತು ಸಹಾಯಕ ಸಿಬಂದಿಯೆಲ್ಲ ಆ. 14ರಂದು ಚೆನ್ನೈಗೆ ಆಗಮಿಸುವ ನಿರೀಕ್ಷೆ ಇದೆ. ಆ. 21ರಂದು ಇವರೆಲ್ಲ ಒಟ್ಟಿಗೇ ಯುಎಇಗೆ ಪ್ರಯಾಣಿಸಲಿದ್ದಾರೆ.