ತನ್ನದೇ ದೇಶದ ಬಿಗ್ ಬಾಶ್ ತ್ಯಜಿಸುತ್ತಾರಾ ಡೇವಿಡ್ ವಾರ್ನರ್?
Team Udayavani, Jul 7, 2022, 8:36 AM IST
ಸಿಡ್ನಿ: ಆಸ್ಟ್ರೇಲಿಯದ ಅದ್ಭುತ ಎಡಗೈ ಬ್ಯಾಟಿಗ ಡೇವಿಡ್ ವಾರ್ನರ್, ತಮ್ಮದೇ ದೇಶದ ಬಿಗ್‌ಬಾಶ್ ಟಿ20 ಲೀಗ್ ಬದಲು ಯುಎಇ ಲೀಗ್‌ನಲ್ಲೂ ಆಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ.
1 ಆಸ್ಟ್ರೇಲಿಯದಲ್ಲಿ ಯಾವುದೇ ತಂಡಗಳಿಗೂ ವೃತ್ತಿಜೀವನ ಪೂರ್ಣ ವಾರ್ನರ್ ನಾಯಕರಾಗುವಂತಿಲ್ಲವೆಂದು 2018ರಲ್ಲಿ ಆಸೀಸ್ ಕ್ರಿಕೆಟ್ ಮಂಡಳಿ ಹೇರಿರುವ ನಿಷೇಧ.
2 ಯುಎಇ ಲೀಗ್‌ನಲ್ಲಿ ಭಾರೀ ಹಣವನ್ನು ನೀಡಲಿರುವುದು!
ವಾರ್ನರ್ ಪತ್ನಿ ಕ್ಯಾಂಡಿಸ್, ಚೆಂಡು ವಿರೂಪ ಪ್ರಕರಣದಲ್ಲಿ ವಾರ್ನರ್‌ಗೆ ಜೀವನಪೂರ್ತಿ ನಾಯಕರಾಗುವಂತಿಲ್ಲವೆಂದು ಹೇಳಿರುವುದು ತಪ್ಪು. ಅದನ್ನು ತೆರವು ಮಾಡಬೇಕು. ಇನ್ನೊಂದು ಕಡೆ ವಾರ್ನರ್‌ಗೆ ಯುಎಇ, ಭಾರತದಲ್ಲೂ ಅವಕಾಶಗಳಿವೆ. ಅಲ್ಲಿ ವಾರ್ನರ್ ಸಾಮರ್ಥ್ಯವೇನು ಎಂದು ತಿಳಿದಿರುವುದರಿಂದ ಅದನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ವಾರ್ನರ್ ಅತ್ತಕಡೆಯೂ ಒಂದು ಗಮನವಿಟ್ಟಿದ್ದಾರೆಂದು ಕ್ಯಾಂಡಿಸ್ ಹೇಳಿದ್ದಾರೆ.
ಇದನ್ನೂ ಓದಿ:ವಾಹನಗಳಿಗೆ ಆ್ಯಡ್ ಆನ್ ವಿಮೆ : ವಿಮೆ ಸಂಸ್ಥೆಗಳಿಗೆ ಐಆರ್‌ಡಿಎಐ ಅನುಮತಿ
ಒಂದು ವೇಳೆ ನಾಯಕತ್ವದ ಮೇಲಿನ ನಿಷೇಧ ತೆರವು ಮಾಡದಿದ್ದರೆ, ವಾರ್ನರ್ ಬಿಗ್‌ಬಾಶ್ ಬದಲು ಯುಎಇ ಕೂಟದಲ್ಲಿ ಆಡುತ್ತಾರಾ? ಅದನ್ನು ಕೌಟುಂಬಿಕ ಪರಿಸ್ಥಿತಿಯನ್ನು ನೋಡಿ ನಿರ್ಧರಿಸಲಾಗುತ್ತದೆ ಎಂದು ಕ್ಯಾಂಡಿಸ್ ಹೇಳಿದ್ದಾರೆ.
ಅಂದರೆ ಬಿಗ್‌ಬಾಶ್ ಗಿಂತ ಯುಎಇ ಲೀಗ್ ನಲ್ಲಿ ಹೆಚ್ಚು ಹಣ ಸಿಗುತ್ತದೆ. ಇದರಿಂದ ಅಲ್ಲಿ ಆಡಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವುದು ಅವರ ಅಭಿಮತ. ಇದರ ಮೂಲಕ ಕ್ಯಾಂಡಿಸ್, ವಾರ್ನರ್ ನಾಯಕತ್ವದ ಮೇಲಿನ ನಿಷೇಧ ತೆರವು ಮಾಡಬೇಕೆಂದು ಪರೋಕ್ಷವಾಗಿ, ಅಷ್ಟೇ ಬಲವಾಗಿ ಒತ್ತಾಯಿಸಿದ್ದಾರೆ.