ಎಂಪಿಎಲ್‌ನಲ್ಲೂ ಮಿಂಚಿದ್ದ ಆರ್‌ಸಿಬಿಯ ಪಡಿಕ್ಕಲ್
Team Udayavani, Oct 12, 2020, 10:51 PM IST
ಮಂಗಳೂರು: ಐಪಿಎಲ್‌ನ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಆರಂಭಿಕ ಆಟಗಾರರಾಗಿ ಮಿಂಚುತ್ತಿರುವ ದೇವದತ್ತ್ ಪಡಿಕ್ಕಲ್ ಅವರಿಗೂ ಕರಾವಳಿ ಭಾಗಕ್ಕೂ ಅವಿನಾಭಾವ ಸಂಬಂಧವಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನ ಮೈದಾನಿನಲ್ಲಿ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಹೊಡೆಯುತ್ತಿದ್ದ ಈ ಹುಡುಗ ಆರ್‌ಸಿಬಿಯ ಬ್ಯಾಟಿಂಗ್ ಟ್ರಂಪ್ ಕಾರ್ಡ್ ಆಗುತ್ತಾನೆಂದು ಯಾರೂ ಊಹಿಸಿರಲಿಲ್ಲ.
ಸದ್ಯ ಆರ್‌ಸಿಬಿಯಲ್ಲಿ ಆಡುತ್ತಿರುವ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಣಕ್ಕಿಳಿದ 7 ಪಂದ್ಯದಲ್ಲಿ ಮೂರು ಅರ್ಧಶತಕ ಸಹಿತ 243 ರನ್ ಬಾರಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಇನ್ನೂ ಅವಕಾಶ ದೊರಕಿಲ್ಲ. ಅವರೊಬ್ಬ ಉತ್ತಮ ಆಫ್‌ಸ್ಪಿನ್ ಬೌಲರ್ ಆಗಿದ್ದಾರೆ.
ಮಂಗಳೂರಿನಲ್ಲಿ ಶತಕ ಸಿಡಿಸಿದ್ದ ಪಡಿಕ್ಕಲ್ !
ಮಂಗಳೂರಿನಲ್ಲಿ ನಡೆದ ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಕೂಟದಲ್ಲಿ ಮೂಡುಬಿದಿರೆಯ “ಟೀಂ ಎಲಿಗೆಂಟ್’ ತಂಡವನ್ನು ದೇವದತ್ತ್ ಪಡಿಕ್ಕಲ್ ಪ್ರತಿನಿಧಿಸಿದ್ದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅವರು ಒಟ್ಟು 427 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕ ಕೂಡ ಕೂಡಿತ್ತು. ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅವರು 9 ವಿಕೆಟ್ ಪಡೆದಿದ್ದರು. ಟೀಂ ಎಲಿಗೆಂಟ್ ತಂಡ ಸೆಮಿಫೈನಲ್ ಪ್ರವೇಶಿಸಲು ದೇವದತ್ತ್ ಅವರ ಪ್ರದರ್ಶನ ಪ್ರಮುಖ ಕಾರಣವಾಗಿತ್ತು.
ಎಂಪಿಎಲ್‌ನಲ್ಲಿದ್ದವರು ಐಪಿಎಲ್‌ನಲ್ಲಿ ಎಂಪಿಎಲ್‌ನಲ್ಲಿ ಆಡಿದ್ದ ಅನೇಕ ಮಂದಿ ಐಪಿಎಲ್‌ನಲ್ಲೂ ಮಿಂಚಿದ್ದಾರೆ. ಮುಖ್ಯವಾಗಿ ಅನಿರುದ್ಧ್ ಜೋಷಿ ಸದ್ಯ ರಾಜಸ್ಥಾನ ಪರ, ಸುಚಿತ್ ಪಂಜಾಬ್ ಪರ ಆಡುತ್ತಿದ್ದಾರೆ. ಅದೇ ರೀತಿ, ಕೆ.ಸಿ. ಕಾರಿಯಪ್ಪ, ಶಿವಿಲ್ ಕೌಶಿಕ್ ಕಳೆದ ಋತುವಿನಲ್ಲಿ ಆಡಿದ್ದರು.
ಎಂಪಿಎಲ್ ಕ್ರಿಕೆಟ್‌ನಿಂದ ಅನೇಕ ಆಟಗಾರರು ಬೆಳಕಿಗೆ ಬಂದಿದ್ದಾರೆ. ಆರ್‌ಸಿಬಿಯಲ್ಲಿ ಆಡುತ್ತಿರುವ ಪಡಿಕ್ಕಲ್ ಈ ಹಿಂದೆ ಕರಾವಳಿಯ ತಂಡವೊಂದರಲ್ಲಿ ಆಡಿದ್ದರು ಎನ್ನುವುದು ಹೆಮ್ಮೆ.
-ಇಮ್ತಿಯಾಜ್ ಅಹಮ್ಮದ್, ಕ್ರೀಡಾ ಸಂಘಟಕ