ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್
Team Udayavani, May 31, 2020, 11:55 AM IST
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ನಾಯಕತ್ವದಲ್ಲಿ ತಾನು ಯಶಸ್ಸು ಕಾಣಲು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎಂದು ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆಗೆ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯ ನಾಯಕತ್ವವನ್ನು ಬಹಳಷ್ಟು ಗಮನಿಸಿದ್ದೇನೆ. ನಾನು ನಾಯಕನಾಗುತ್ತೇನೆ ಎಂದು ಯಾವತ್ತೂ ಅಂದು ಕೊಂಡಿರಲಿಲ್ಲ.
ಪಂದ್ಯದ ವೇಳೆ ಬಹಳಷ್ಟು ವಿಚಾರಗಳನ್ನು ಧೋನಿ ಬಳಿ ಕೇಳಿದ್ದೇನೆ. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನ ಮೇಲೆ ಬಹಳಷ್ಟು ನಂಬಿಕೆ ಇಟ್ಟಿದ್ದರು. ಧೋನಿ ಆಟಗಾರರ ಕ್ಷಮತೆಯನ್ನು ಗಮನಿಸುತ್ತಾರೆ. ಆತನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ. ನನ್ನ ಬೆಳವಣಿಗೆಯಲ್ಲಿ ಧೋನಿಯ ಪಾತ್ರ ಮಹತ್ವದ್ದು ಎಂದು ಕೊಹ್ಲಿ ಹೇಳಿದ್ದಾರೆ.
2014ರಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ನಂತರ 2017ರಲ್ಲಿ ಏಕದಿನ ಮತ್ತು ಟಿ20 ತಂಡದ ಚುಕ್ಕಾಣಿಯನ್ನು ಹಿಡಿದರು.