ಟಿ 20 ಕ್ರಿಕೆಟ್ ನಲ್ಲಿ 500 ವಿಕೆಟ್ ಸಾಧನೆ ಮಾಡಿದ ವಿಂಡೀಸ್ ಡ್ವೇನ್ ಬ್ರಾವೋ
ಈ ಸಾಧನೆ ಮಾಡಿದ ಏಕೈಕ ಬೌಲರ್ ಡ್ವೇನ್ ಬ್ರಾವೋ
Team Udayavani, Aug 27, 2020, 10:03 AM IST
ಟ್ರಿನಿಡಾಡ್ ಟೊಬ್ಯಾಗೋ: ವೆಸ್ಟ್ ಇಂಡೀಸ್ ನ ಹಿರಿಯ ಆಲ್ ರೌಂಡರ್ ಟಿ 20 ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಚುಟುಕು ಮಾದರಿ ಕ್ರಿಕೆಟ್ ನಲ್ಲ 500 ವಿಕೆಟ್ ಕಬಳಿಸಿದ ಮೊತ್ತ ಮೊದಲ ಬೌಲರ್ ಎಂಬ ಗರಿಮೆಗೆ ಬ್ರಾವೋ ಪಾತ್ರರಾಗಿದ್ದಾರೆ.
ಸದ್ಯ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬ್ರಾವೋ ಸಾಧನೆ ಮಾಡಿದ್ದಾರೆ. ಸೈಂಟ್ ಲೂಸಿಯಾ ಜೂಕ್ಸ್ ವಿರುದ್ಧದ ಪಂದ್ಯದಲ್ಲಿ ರಖೀಂ ಕಾರ್ನ್ ವಲ್ ವಿಕೆಟ್ ಪಡೆದ ಟ್ರಿನಿಡಾಡ್ ನೈಟ್ ರೈಡರ್ಸ್ ಬೌಲರ್ ಬ್ರಾವೋ 500 ವಿಕೆಟ್ ಪೂರ್ಣಗೊಳಿಸಿದರು.
2006ರಲ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಬ್ರಾವೋ ತನ್ನ 459ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವದ ಎಲ್ಲಾ ಟಿ20 ಕೂಟಗಳಲ್ಲಿ ಆಡುವ ಬ್ರಾವೋ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದು, ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಾರೆ.
ಬ್ರಾವೋ ಹೊರತುಪಡಿಸಿ ಇದುವರೆಗೆ ಯಾವುದೇ ಬೌಲರ್ 400 ವಿಕೆಟ್ ಸಹ ಕಬಳಿಸಿಲ್ಲ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಸಿತ್ ಮಲಿಂಗ 390 ವಿಕೆಟ್ ಪಡೆದಿದ್ದಾರೆ. ಸುನೀಲ್ ನರೈನ್ 383 ವಿಕೆಟ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಇದೇ ಸಿಪಿಎಲ್ ನಲ್ಲಿ ಮಾಲಿಂಗ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದಾರೆ.