ಇಂಗ್ಲೆಂಡ್‌ಗೆ ಸೂಪರ್‌ ವಿಶ್ವಕಪ್‌

ಗರಿಷ್ಠ ಬೌಂಡರಿ ಲೆಕ್ಕಾಚಾರದಲ್ಲಿ ಫ‌ಲಿತಾಂಶ ನಿರ್ಣಯ

Team Udayavani, Jul 15, 2019, 5:42 AM IST

ಲಂಡನ್‌: ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರವಿವಾರ ನಡೆದ ವಿಶ್ವಕಪ್‌ ಕ್ರಿಕೆಟ್ ಕೂಟದ ಫೈನಲ್ ಹೋರಾಟದಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಪ್ರಚಂಡ ಹೋರಾಟ ನಡೆಸಿದವು. ಫೈನಲ್ ಪಂದ್ಯ ರೋಚಕ ಟೈಯಲ್ಲಿ ಅಂತ್ಯಗೊಂಡರೆ ಆಬಳಿಕ ಫ‌ಲಿತಾಂಶ ನಿರ್ಧಾರಕ್ಕಾಗಿ ನಡೆದ ಸೂಪರ್‌ ಓವರ್‌ ಕೂಡ ರೋಚಕ ಟೈ ಆಯಿತು. ಅಂತಿಮವಾಗಿ ಗರಿಷ್ಠ ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಎಂದು ಘೋಷಿಸಲಾಯಿತು.

ಈ ಹಿಂದೆ ಮೂರು ಬಾರಿ ಫೈನಲ್ನಲ್ಲಿ ಎಡವಿದ್ದ ಇಂಗ್ಲೆಂಡ್‌ ಈ ಬಾರಿಯೂ ಎಡವಿ ಬೀಳಬಹುದೆಂದು ಭಾವಿಸಲಾಗಿತ್ತು. ಆದರೂ ಫೈನಲ್ ಪಂದ್ಯ ಮತ್ತು ಸೂಪರ್‌ ಓವರಿನಲ್ಲಿ ಸಮಬಲ ಸಾಧಿಸಿದ್ದರೂ ಗರಿಷ್ಠ ಬೌಂಡರಿ ಆಧಾರದಲ್ಲಿ ವಿಶ್ವಕಪ್‌ ಪ್ರಶಸ್ತಿಯನ್ನು ಚೊಚ್ಚಲ ಬಾರಿ ಗೆದ್ದ ಹಿರಿಮೆಗೆ ಪಾತ್ರವಾಯಿತು. ಈ ಮೂಲಕ ಆತಿಥ್ಯ ರಾಷ್ಟ್ರವಾಗಿ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ ಹ್ಯಾಟ್ರಿಕ್‌ ಸಾಧಿಸಿತು. ಈ ಮೊದಲು 2011ರಲ್ಲಿ ಭಾರತ ಮತ್ತು 2015ರಲ್ಲಿ ಆಸ್ಟ್ರೇಲಿಯ ಆತಿಥ್ಯ ರಾಷ್ಟ್ರವಾಗಿ ಪ್ರಶಸ್ತಿ ಜಯಿಸಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ತಂಡವು 8 ವಿಕೆಟಿಗೆ 241 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಬೆನ್‌ ಸ್ಟೋಕ್ಸ್‌ ಮತ್ತು ಬಟ್ಲರ್‌ ಅವರ ಪ್ರಚಂಡ ಆಟದಿಂದಾಗಿ ಗೆಲುವಿನತ್ತ ದಾಪುಗಾಲು ಹಾಕಿದ್ದ ಇಂಗ್ಲೆಂಡ್‌ ಕೊನೆ ಹಂತದಲ್ಲಿ ಎಡವಿದ ಕಾರಣ ನಿಗದಿತ 50 ಓವರ್‌ಗಳಲ್ಲಿ 241 ರನ್‌ ಗಳಿಸಿ ಆಲೌಟಾಯಿತು. ಹಾಗಾಗಿ ಫ‌ಲಿತಾಂಶ ನಿರ್ಧಾರಕ್ಕಾಗಿ ಸೂಪರ್‌ ಓವರ್‌ ಅಳವಡಿಸಲಾಯಿತು.

ಸೂಪರ್‌ ಓವರ್‌ ಕೂಡ ಟೈ

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಎರಡು ಬೌಂಡರಿ ಸಹಿತ 15 ರನ್‌ ಪೇರಿಸಿತು. ಸ್ಟೋಕ್ಸ್‌ 8 ಮತ್ತು ಬಟ್ಲರ್‌ 7 ರನ್‌ ಹೊಡೆದರು. ಇದಕ್ಕೆ ಪ್ರತಿಯಾಗಿ ನ್ಯೂಜಿಲ್ಯಾಂಡಿನ ಮಾರ್ಟಿನ್‌ ಗಪ್ಟಿಲ್ ಮತ್ತು ಜೇಮ್ಸ್‌ ನೀಶಮ್‌ ಬ್ಯಾಟಿಂಗ್‌ ನಡೆಸಿದ್ದರು. ಒಂದು ಸಿಕ್ಸರ್‌ ಬಾರಿಸಿದ ನೀಶಮ್‌ ಅಂತಿಮ ಎಸೆತದಲ್ಲಿ ಎರಡನೇ ರನ್ನಿಗಾಗಿ ಓಡಿದ ಕಾರಣ ತಂಡ 15 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹಾಗಾಗಿ ಸೂಪರ್‌ ಓವರ್‌ ಕೂಡ ಟೈ ಆಯಿತು. ಇದರಿಂದಾಗಿ ಗರಿಷ್ಠ ಬೌಂಡರಿ ಬಾರಿಸಿದ ಇಂಗ್ಲೆಂಡ್‌ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಟಾಸ್‌ ಗೆದ್ದ ನ್ಯೂಜಿಲ್ಯಾಂಡ್‌ ತಂಡವು ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆತಿಥೇಯರ ದಾಳಿಯನ್ನು ಆರಂಭಿಕ ರಾದ ಮಾರ್ಟಿನ್‌ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಎಚ್ಚರಿಕೆಯಿಂದ ಎದುರಿಸಿ ದರು. ಬೃಹತ್‌ ಮೊತ್ತ ಪೇರಿಸುವುದೇ ನ್ಯೂಜಿ ಲ್ಯಾಂಡಿನ ಉದ್ದೇಶವಾಗಿತ್ತು. ಆದರೆ ಇಲ್ಲಿನ ಪಿಚ್ ಇದಕ್ಕೆ ಅವಕಾಶ ನೀಡಿಲ್ಲ.

ಗಪ್ಟಿಲ್ ಮತ್ತು ನಿಕೋಲ್ಸ್ ಇಬ್ಬರೂ ರನ್‌ ಗಳಿಸಲು ಬಹಳಷ್ಟು ಒದ್ದಾಟ ನಡೆಸಿದರು. ಒಂಟಿ ಮತ್ತು ಅವಳಿ ರನ್ನಿಗೆ ಹೆಚ್ಚಿನ ಮಹತ್ವ ನೀಡಿದರು. ಆರು ಓವರ್‌ ಆಡಿದ ಅವರಿಬ್ಬರು ಮೊದಲ ವಿಕೆಟಿಗೆ 29 ರನ್‌ ಪೇರಿಸಿ ಬೇರ್ಪಟ್ಟರು. ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ಗಪ್ಟಿಲ್ ಫೈನಲ್ನಲ್ಲಿ ಸಿಡಿಯಬಹುದೆಂದು ನಿರೀಕ್ಷಿಸಲಾಗಿತ್ತು. ಒಂದು ಜೀವದಾನ ಪಡೆದರೂ ಅವರ ಆಟ 19 ರನ್ನಿಗೆ ನಿಂತಿತು.

ವಿಲಿಯಮ್ಸನ್‌ ವಿಫ‌ಲ

ನಿಕೋಲ್ಸ್ ಅವರನ್ನು ಸೇರಿಕೊಂಡ ನಾಯಕ ಕೇನ್‌ ವಿಲಯಮ್ಸನ್‌ ನಿಧಾನವಾಗಿ ತಂಡದ ಮೊತ್ತವನ್ನು ಏರಿಸತೊಡಗಿದರು. ದ್ವಿತೀಯ ವಿಕೆಟಿಗೆ 74 ರನ್ನುಗಳ ಜತೆಯಾಟ ನಡೆಸಿದರು. ಒಂದು ರನ್‌ ಗಳಿಸಿದ ವೇಳೆ ವಿಶ್ವಕಪ್‌ ಕೂಟವೊಂದರಲ್ಲಿ ನಾಯಕರಾಗಿ ಗರಿಷ್ಠ ರನ್‌ ಪೇರಿಸಿದ ಸಾಧಕರಾಗಿ ಮೂಡಿ ಬಂದ ವಿಲಿಯಮ್ಸನ್‌ ಫೈನಲ್ನಲ್ಲಿ ಭರ್ಜರಿ ಆಟವಾಡಲು ವಿಫ‌ಲವಾದರು. ಈ ಹಿಂದಿನ ಪಂದ್ಯಗಳಲ್ಲಿ ಅದ್ಭುತವಾಗಿ ಆಡಿ ಏಕಾಂಗಿಯಾಗಿ ತಂಡವನ್ನು ಫೈನಲಿಗೇರಲು ಪ್ರಮುಖ ಕಾರಣರಾಗಿದ್ದ ವಿಲಿಯಮ್ಸನ್‌ ಇಲ್ಲಿ 30 ರನ್‌ ಗಳಿಸಲಷ್ಟೇ ಶಕ್ತರಾದರು. ಅದಕ್ಕಾಗಿ 53 ಎಸೆತ ತೆಗೆದುಕೊಂಡರು.

ವಿಲಿಯಮ್ಸನ್‌ ಬಳಿಕ ಟಾಮ್‌ ಲ್ಯಾಥಮ್‌ ಮಾತ್ರ ಸ್ವಲ್ಪಮಟ್ಟಿಗೆ ಆಂಗ್ಲರ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ನಾಯಕ ಕೇನ್‌ ಔಟಾದ ಸ್ವಲ್ಪ ಹೊತ್ತಿಗೆ ನಿಕೋಲ್ಸ್ ಅವರು ಪ್ಲಂಕೆಟ್‌ಗೆ ಬಲಿಯಾದರು. 77 ಎಸೆತ ಎದುರಿಸಿದ್ದ ಅವರು 55 ರನ್‌ ಹೊಡೆದರು. ರಾಸ್‌ ಟೇಲರ್‌ ಇಲ್ಲಿ ವೈಫ‌ಲ್ಯ ಅನುಭವಿಸಿದರೆ ಟಾಮ್‌ ಲ್ಯಾಥಮ್‌ 56 ಎಸೆತಗಳಿಂದ 47 ರನ್‌ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಅಂತಿಮವಾಗಿ ತಂಡ 8 ವಿಕೆಟಿಗೆ 241 ರನ್‌ ಪೇರಿಸಲಷ್ಟೇ ಶಕ್ತವಾಯಿತು.

ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌

ಸರಣಿ ಶ್ರೇಷ್ಠ: ಕೇನ್‌ ವಿಲಿಯಮ್ಸನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ