ಫ್ರೆಂಚ್ ಓಪನ್: ನಡಾಲ್ ಕ್ವಾ.ಫೈನಲ್ಗೆ
Team Udayavani, Jun 5, 2017, 12:23 PM IST
ಪ್ಯಾರಿಸ್: ಮಾಜಿ ವಿಶ್ವ ನಂ.1ಟೆನಿಸ್ ಆಟಗಾರ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ನಲ್ಲಿ 9 ಬಾರಿಯ ಫ್ರೆಂಚ್ ಓಪನ್ ವಿಜೇತ ನಡಾಲ್ 6-1, 6-2, 6-2 ರಿಂದ ಸ್ಪೇನ್ನ ರಾಬರ್ಟೊ ಬಟಿಸ್ಟಾ ಅಗಟ್ ವಿರುದ್ಧ ಸುಲಭ ಜಯ ಸಾಧಿಸಿದರು. ಮೂರು ಸೆಟ್ನಲ್ಲಿ ತನ್ನದೇ ರಾಷ್ಟ್ರದ ಆಟಗಾರನ ವಿರುದ್ಧ ಭರ್ಜರಿ ಹೋರಾಟ ಪ್ರದರ್ಶಿಸಿದ ನಡಾಲ್ ಸುಲಭವಾಗಿ ಪಂದ್ಯವನ್ನು ವಶಪಡಿಸಿಕೊಂಡರು. ಯಾವುದೇ ಹಂತದಲ್ಲಿ ಎದುರಾಳಿಗೆ ತಿರುಗೇಟು ನೀಡಲು ಅವಕಾಶ ನೀಡಲಿಲ್ಲ.
ಉಳಿದಂತೆ ಪುರುಷರ ಸಿಂಗಲ್ಸ್ನ ಮತ್ತೂಂದು ಪಂದ್ಯದಲ್ಲಿ ಸ್ಪೇನ್ನ ಪ್ಯಾಬ್ಲೋ ಕ್ಯಾರೆನೊ ಬುಸ್ಟಾ ಕೆನಡಾದ ಮಿಲೋಸ್ ರಾವೋನಿಕ್ ವಿರುದ್ಧ ಹೋರಾಟದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ವೋಜ್ನಿಯಾಕಿ ಕ್ವಾರ್ಟರ್ಗೆ: ಮಹಿಳೆಯರ ಸಿಂಗಲ್ಸ್ನಲ್ಲಿ ಡೆನ್ಮಾರ್ಕ್ನ ಟೆನಿಸ್ ಸುಂದರಿ ಕ್ಯಾರೊಲಿನಾ ವೋಜ್ನಿಯಾಕಿ 6-1, 4-6, 6-2 ರಿಂದ ರಷ್ಯಾದ ಸ್ವೆಟ್ಲಾನಾ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆನ್ಮಾರ್ಕ್ ಆಟಗಾರ್ತಿಗೆ 2ನೇ ಗೇಮ್ನಲ್ಲಿ ರಷ್ಯಾ ಆಟಗಾರ್ತಿ ತಿರುಗೇಟು ನೀಡಿದ್ದರು. ಆದರೆ ಮೂರನೇ ಸೆಟ್ನಲ್ಲಿ ಎಚ್ಚೆತ್ತುಕೊಂಡ ವೋಜ್ನಿಯಾಕಿ ಸೆಟ್ ವಶಪಡಿಸಿಕೊಂಡು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು. ಉಳಿದಂತೆ ಮಹಿಳೆಯರ ಸಿಂಗಲ್ಸ್ನಲ್ಲಿ ಜೆಲೆನಾ ಒಸ್ಟಪೆನ್ಕೊ ಕ್ವಾರ್ಟರ್ಗೆ ಪ್ರವೇಶಿಸಿದ್ದಾರೆ.