ಮುಗುರುಜಾಗೆ ಶರಣಾದ ಮರಿಯಾ ಶರಪೋವಾ
Team Udayavani, Jun 7, 2018, 6:20 AM IST
ಪ್ಯಾರಿಸ್: ಸೆರೆನಾ ವಿಲಿಯಮ್ಸ್ ವಿರುದ್ಧ ಆಡದೆಯೇ ಕ್ವಾರ್ಟರ್ ಫೈನಲ್ಗೆ “ವಾಕ್ ಓವರ್’ ಪಡೆದ ಮರಿಯಾ ಶರಪೋವಾ ಅವರನ್ನು “ಲಕ್ಕಿ’ ಎಂದೇ ಭಾವಿಸಲಾಗಿತ್ತು. ಆದರೆ ಬುಧವಾರದ ಸೆಣಸಾಟದಲ್ಲಿ ಅವರನ್ನು ಸ್ಪೇನಿನ ಗಾರ್ಬಿನ್ ಮುಗುರುಜಾ 6-2, 6-1 ಅಂತರದಿಂದ ಕೆಡವಿ ಸೆಮಿಫೈನಲ್ಗೆ ಏರಿಹೋದರು.
2015ರ ಬಳಿಕ ಫ್ರೆಂಚ್ ಓಪನ್ನಲ್ಲಿ ಕಾಣಿಸಿಕೊಂಡ ಶರಪೋವಾ ಪಾಲಿಗೆ ಇದು ಗ್ರ್ಯಾನ್ಸ್ಲಾಮ್ನಲ್ಲಿ ಎದುರಾದ 2ನೇ ದೊಡ್ಡ ಸೋಲಾಗಿದೆ. 2012ರ ಆಸ್ಟ್ರೇಲಿಯನ್ ಓಪನ್ನಲ್ಲಿ ವಿಕ್ಟೋರಿಯಾ ಅಜರೆಂಕಾ ಕೈಯಲ್ಲಿ 6-3, 6-0 ಅಂತರದಿಂದ ಸೋತದ್ದು ಶರಪೋವಾಗೆ ಎದುರಾದ ದೊಡ್ಡ ಆಘಾತವಾಗಿದೆ.
“ನಾನು ಪ್ಯಾರಿಸ್ನಲ್ಲಿ ಮತ್ತೂಂದು ಫೈನಲ್ ಕಾಣುವ ನಿರೀಕ್ಷೆಯಲ್ಲಿದ್ದೇನೆ. ಶರಪೋವಾ ಓರ್ವ ಶ್ರೇಷ್ಠ ಆಟಗಾರ್ತಿ. ಹೀಗಾಗಿ ಶ್ರೇಷ್ಠ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಇದರಲ್ಲಿ ನಾನು ಯಶಸ್ವಿಯಾದೆ’ ಎಂದು 2016ರ ಚಾಂಪಿಯನ್ ಮುಗುರುಜಾ ಪ್ರತಿಕ್ರಿಯಿಸಿದ್ದಾರೆ.