ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ನೋಟಿಸ್ ನೀಡಿದ ಗೋವಾ ಸರ್ಕಾರ
Team Udayavani, Nov 23, 2022, 10:15 AM IST
ಪಣಜಿ: ಪ್ರವಾಸೋದ್ಯಮ ಇಲಾಖೆಯಲ್ಲಿ ತಮ್ಮ ವಿಲ್ಲಾವನ್ನು ನೋಂದಾಯಿಸಲು ವಿಫಲವಾದ ಆರೋಪದ ಮೇಲೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಗೋವಾ ಸರ್ಕಾರ ನೋಟಿಸ್ ನೀಡಿದೆ.
ವರ್ಚವಾಡ, ಮೋರ್ಜಿಮ್, ಪೆರ್ನೆಮ್, ಗೋವಾದಲ್ಲಿ ನೆಲೆಗೊಂಡಿರುವ ನಿಮ್ಮ ವಸತಿ ಆವರಣವು ಹೋಮ್ ಸ್ಟೇ ಆಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ `Airbnb` ನಂತಹ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗಮನಕ್ಕೆ ಬಂದಿದೆ ಎಂದು ಟ್ವಿಟರ್ ಮತ್ತು ವೆಬ್‌ಸೈಟ್ ಲಿಂಕ್‌ಗಳನ್ನು ಉಲ್ಲೇಖಿಸಿ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಹೋಟೆಲ್/ಅತಿಥಿ ಗೃಹವನ್ನು ನಿರ್ವಹಿಸಲು ಉದ್ದೇಶಿಸಿರುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ನಿರ್ವಹಿಸುವ ಮೊದಲು, ನಿಗದಿತ ರೀತಿಯಲ್ಲಿ ನಿಗದಿತ ಪ್ರಾಧಿಕಾರಕ್ಕೆ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಈ ಸೂಚನೆಯ ಮೂಲಕ ಹೇಳಿದೆ.
ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಉಪ ನಿರ್ದೇಶಕರ ಮುಂದೆ ಹಾಜರಾಗಬೇಕೆಂದು ಪ್ರವಾಸೋದ್ಯಮ ಇಲಾಖೆಯು ತಿಳಿಸಿದೆ.
ಇದನ್ನೂ ಓದಿ:‘ದಿ ಸ್ಟೋರಿ ಟೆಲ್ಲರ್’ : ಸತ್ಯಜಿತ್ ರೇ ಅವರಿಗೆ ಸಲ್ಲಿಸಿದ ಕಾಣಿಕೆ
“ಈ ನೋಟಿಸ್ ನಲ್ಲಿ ಉಲ್ಲೇಖಿಸಲಾದ ದಿನಾಂಕದೊಳಗೆ ಯಾವುದೇ ಉತ್ತರವನ್ನು ನೀಡದಿದ್ದರೆ, ಈ ನೋಟಿಸ್ ನಲ್ಲಿ ಉಲ್ಲೇಖಿಸಲಾದ ಆಧಾರಗಳು ಸರಿಯಾಗಿವೆ ಎಂದು ಭಾವಿಸಲಾಗುತ್ತದೆ ಮತ್ತು ಸೆಕ್ಷನ್ 22 ರ ಅಡಿಯಲ್ಲಿ ಅಂತಹ ಊಹೆಯ ಮೇಲೆ ಅಥವಾ ಈ ಕಾಯಿದೆಯ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ ನೀವು ಶಿಕ್ಷಾರ್ಹರಾಗಿರುತ್ತೀರಿ. 1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ” ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.