ಸಿಡ್ನಿಯಲ್ಲಿ ಭಾರೀ ಮಳೆ:ಅಭ್ಯಾಸ ಪಂದ್ಯಕ್ಕೆ ಅಡಚಣೆ
Team Udayavani, Nov 29, 2018, 6:25 AM IST
ಸಿಡ್ನಿ: ಶತಮಾನದ ಮಳೆಯಿಂದ ತತ್ತರಿಸುತ್ತಿರುವ ಸಿಡ್ನಿಯಲ್ಲಿ ಭಾರತ-ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ನಡುವಿನ ಅಭ್ಯಾಸ ಪಂದ್ಯಕ್ಕೆ ಅಡ್ಡಿಯಾಗಿದೆ. ಬುಧವಾರದ ಮೊದಲ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಟಾಸ್ ಕೂಡ ಸಾಧ್ಯವಾಗಲಿಲ್ಲ.
ಸಿಡ್ನಿಯಲ್ಲಿಂದು ಪಂದ್ಯ ನಡೆಯದು ಎಂದು ಮುಂಜಾನೆಯೇ ತಿಳಿದಿತ್ತು. ಆದರೆ ಅಪರಾಹ್ನ ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಅಂಪಾಯರ್ಗಳು 3.30ರಿಂದ 4 ಗಂಟೆಯ ಅವಧಿಯಲ್ಲಿ ಟಾಸ್ ಸಮಯವನ್ನು ಗೊತ್ತುಮಾಡಿದರು. ಆದರೆ ಈ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ಮತ್ತೆ ಮಳೆ ಪ್ರಾರಂಭವಾಯಿತು. ದಿನದಾಟವನ್ನು ರದ್ದುಗೊಳಿಸಲಾಯಿತು.
ಸದ್ಯ ಗುರುವಾರ ಬೆಳಗ್ಗೆ 9.30ಕ್ಕೆ ಟಾಸ್, 10 ಗಂಟೆಗೆ ಪಂದ್ಯ ಆರಂಭ ಎಂದು ನಿರ್ಧರಿಸಲಾಗಿದೆ. ಆದರೆ ಇದಕ್ಕೆ ಮಳೆ ಅವಕಾಶ ಕೊಡುವ ಸಾಧ್ಯತೆ ಇಲ್ಲ. ಶುಕ್ರವಾರ, ಶನಿವಾರ ಮಳೆ ಬಿಡುವು ನೀಡಬಹುದೆಂಬುದು ಹವಾಮಾನ ಇಲಾಖೆಯ ವರದಿ. ಆಗ ಈ ಚತುರ್ದಿನ ಪಂದ್ಯ 2 ದಿನಗಳಿಗೆ ಸೀಮಿತಗೊಳ್ಳಲಿದೆ. ಡಿ. 6ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಇದೊಂದೇ ಅಭ್ಯಾಸ ಪಂದ್ಯವಾದುದರಿಂದ ಟೆಸ್ಟ್ ತಯಾರಿಗೆ ಭಾರೀ ಹಿನ್ನಡೆಯಾಗಿದೆ.