ಜು.20ರಂದು ಐಸಿಸಿ ಸಭೆ: ಟಿ20 ವಿಶ್ವಕಪ್ ನಿರ್ಧಾರವನ್ನು ಎದುರು ನೋಡುತ್ತಿದೆ ಬಿಸಿಸಿಐ
Team Udayavani, Jul 19, 2020, 4:40 PM IST
ದುಬೈ: ಮುಂದಿನ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಐಸಿಸಿ ಸೋಮವಾರ ಸಭೆ ಸೇರಲಿದೆ. ಐಪಿಎಲ್ ನಡೆಸಲು ತುದಿಗಾಲಲ್ಲಿ ನಿಂತಿರುವ ಬಿಸಿಸಿಐ ಈ ಸಭೆಯ ನಿರ್ಧಾರವನ್ನು ಎದುರು ನೋಡುತ್ತಿದೆ.
ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸೀಸ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ ಕೋವಿಡ್ 19 ಸೋಂಕು ಭೀತಿಯ ಕಾರಣ ವಿಶ್ವಕಪ್ ನಡೆಯುವುದು ಕಷ್ಟ ಎನ್ನಲಾಗಿದೆ. ನಾಳೆ ನಡೆಯುವ ಐಸಿಸಿ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.
ಟಿ20 ವಿಶ್ವಕಪ್ ನಡೆಯದೆ ಹೋದಲ್ಲಿ ಆ ಸಮಯದಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಎಪ್ರಿಲ್ ನಲ್ಲಿ ನಡೆಯಬೇಕಿದ್ದ ಐಪಿಎಲ್ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದೆ.
ಸಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ದುಬೈನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಜ್ಜಾಗಿದೆ ಎನ್ನಲಾಗಿದೆ.