ಭಾರತ ‘ಎ’ ಗೆ ಮೊದಲ ಜಯ

Team Udayavani, Jun 8, 2019, 10:04 AM IST

ಬೆಳಗಾವಿ: ಅಜೇಯ ಶತಕ ಗಳಿಸಿದ ಭಾರತ ಎ ತಂಡದ ರುತುರಾಜ ಗಾಯಕವಾಡ.

ಬೆಳಗಾವಿ: ಭಾರತ ಎ ಹಾಗೂ ಶ್ರೀಲಂಕಾ ತಂಡದ ಬ್ಯಾಟ್ಸಮನ್‌ಗಳಿಂದ ರನ್‌ಗಳ ಮಳೆ ಸುರಿದು ಭಾರತ ಎ ತಂಡ ಜಯಗಳಿಸುವಲ್ಲಿ ಯಶಸ್ವಿಯಾಯಿತು.

ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ತಂಡದ ವಿರುದ್ಧ 48 ರನ್‌ಗಳ ಅರ್ಹ ಜಯಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ನಿಗದಿತ 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 317 ರನ್‌ಗಳನ್ನು ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ದಿಟ್ಟತನದ ಪ್ರತಿರೋಧ ಒಡ್ಡಿದರೂ 42 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 269 ರನ್‌ ಗಳಿಸಿ ಸೋಲು ಅನುಭವಿಸಿತು. ಬೆಳಗಿನ ಜಾವ ಮಳೆಬಿದ್ದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಇದರಿಂದ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭವಾಗಿ 42 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಮೊದಲ ಒಂದು ದಿನದ ಪಂದ್ಯದಲ್ಲಿ ಎರಡು ಶತಕಗಳು ಬಂದಿದ್ದು ವಿಶೇಷ. ಭಾರತ ಎ ತಂಡದ ಪರ ಆರಂಭಿಕ ಆಟಗಾರ ರುತುರಾಜ ಗಾಯಕವಾಡ ಅಜೇಯ ಶತಕ ಸಿಡಿಸಿದರೆ ಶ್ರೀಲಂಕಾ ಎ ತಂಡದ ಪರ ಸೇಹನ್‌ ಜಯಸೂರ್ಯ ಅಜೇಯ ಶತಕ ಬಾರಿಸಿದರು. ಇಬ್ಬರಿಗೂ ದಿನದ ಗೌರವ ಸಿಕ್ಕಿತು. ಶ್ರೀಲಂಕಾದ ಎಲ್ಲ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ರನ್‌ಗಳ ಸುರಿಮಳೆ ಹರಿಸಿದರು. ಕೇವಲ 136 ಎಸೆತಗಳಲ್ಲಿ ಅಜೇಯ 187 ರನ್‌ಗಳನ್ನು ಕಲೆಹಾಕಿದ ರುತುರಾಜ ಇದರಲ್ಲಿ 26 ಬೌಂಡರಿ ಹಾಗೂ ಎರಡು ಸಿಕ್ಸರ್‌ ಹೊಡೆದಿದ್ದರು. ನಿರೀಕ್ಷೆಯಂತೆ ಗಾಯಕವಾಡ ಪಂದ್ಯದ ಆಟಗಾರ ಗೌರವ ಪಡೆದರು.

ಬೆಳಿಗ್ಗೆ ಟಾಸ್‌ ಸೋತು ಬ್ಯಾಟಿಂಗ್‌ಗೆ ಕಳಿಸಲ್ಪಟ್ಟ ಭಾರತ ಎ ತಂಡಕ್ಕೆ ನಿರೀಕ್ಷೆಯಂತೆ ಒಳ್ಳೆಯ ಆರಂಭ ಸಿಗಲಿಲ್ಲ ತಂಡದ ಮೊತ್ತ ಕೇವಲ 11 ರನ್‌ಗಳಾಗಿದ್ದಾಗ ಶುಭ್ಮನ್‌ ಗಿಲ್ (5) ವಿಕೆಟ್ ಅನ್ನು ಶ್ರೀಲಂಕಾದ ಲಹಿರು ಕುಮಾರ ಉರುಳಿಸಿದರು. ಆದರೆ ಎದುರಾಳಿ ತಂಡದ ಈ ಸಂತಸ ಬಹಳ ಸಮಯ ಉಳಿಯಲಿಲ್ಲ. ಈ ವಿಕೆಟ್ ಪತನದ ನಂತರ ಜೊತೆಗೂಡಿದ ರುತುರಾಜ ಗಾಯಕವಾಡ ಹಾಗೂ ಅತ್ಯುತ್ತಮ ಫಾರ್ಮ್ನಲ್ಲಿರುವ ಅನಮೋಲ ಪ್ರೀತ್‌ ಸಿಂಗ್‌ ಎರಡನೇ ವಿಕೆಟ್ ಜೊತೆಯಾಟದಲ್ಲಿ ಅಮೂಲ್ಯ 163 ರನ್‌ಗಳನ್ನು ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇವರಿಬ್ಬರ ಆಕರ್ಷಕ ಆಟದಿಂದಾಗಿ ಭಾರತ ಎ ತಂಡ 17.3 ಓವರ್‌ಗಳಲ್ಲಿ 100 ರ ಗಡಿ ದಾಟಿತು. ತಂಡದ ಮೊತ್ತ 174 ಆಗಿದ್ದಾಗ ವಿಕೆಟ್‌ನಲ್ಲಿ ಗಟ್ಟಿಯಾಗಿ ತಳ ಊರಿದ್ದ ಅನಮೋಲ ಪ್ರೀತ ಸಿಂಗ್‌ (65) ನಿರ್ಗಮಿಸಿದರು. 97 ನಿಮಿಷಗಳ ಕಾಲ ಕ್ರೀಸ್‌ದಲ್ಲಿದ್ದ ಅನಮೋಲ ಆರು ಬೌಂಡರಿಗಳ ಸಹಾಯದಿಂದ 60 ಗಡಿ ದಾಟಿದರು. ಎರಡನೇ ವಿಕೆಟ್ ಪತನದ ನಂತರ ಮೈದಾನಕ್ಕಿಳಿದ ನಾಯಕ ಇಶಾನ್‌ ಕಿಶನ್‌ ಆರಂಭಿಕ ಬ್ಯಾಟ್ಸಮನ್‌ ಗಾಯಕವಾಡಗೆ ಉತ್ತಮ ಬೆಂಬಲ ನೀಡಿದರು. ಅಕಿಲ ಧನಂಜಯ ಅವರ ಓವರಿನಲ್ಲಿ ಪಂದ್ಯದ ಮೊದಲ ಸಿಕ್ಸರ್‌ ಹೊಡೆದ ರುತುರಾಜ ಮತ್ತಷ್ಟು ಆಕ್ರಮಣಕಾರಿ ಆಟಕ್ಕಿಳಿದರು. ಇವರನ್ನು ಬಲಿಪಡೆಯಲು ಶ್ರೀಲಂಕಾ ನಾಯಕ ಎಂಟು ಜನ ಬೌಲರ್‌ಗಳನ್ನು ಬಳಸಿದರೂ ಯಾವುದೇ ಫಲ ನೀಡಲಿಲ್ಲ. ತಂಡದ ದುರ್ಬಲ ಬೌಲಿಂಗ್‌ ಹಾಗೂ ಕಳಪೆ ಕ್ಷೇತ್ರರಕ್ಷಣೆ ಭಾರತ ಎ ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಯಿತು.

ಭಾರತ ಎ ತಂಡದ ನಾಯಕ ಇಶಾನ್‌ 44 ರನ್‌ ಗಳಿಸಿದ್ದಾಗ ಲಹಿರು ಕುಮಾರ ಅವರ ಓವರಿನಲ್ಲಿ ಜಯರತ್ನೆ ಅವರಿಂದ ಜೀವದಾನ ಪಡೆದರು. ಆದರೆ ಇದರ ಲಾಭ ಭಾರತಕ್ಕೆ ದೊರೆಯಲಿಲ್ಲ. ಇದಾದ ಎರಡನೇ ಎಸೆತದಲ್ಲೇ ಇಶಾನ್‌ ತಮ್ಮ ವಿಕೆಟ್ ಒಪ್ಪಿಸಿದರು. ಆಗ ಭಾರತದ ಸ್ಕೋರ್‌ 275 ರ ಗಡಿಗೆ ಬಂದಿತ್ತು.

ಭಾರತ ಎ ತಂಡದ ಬೃಹತ್‌ ಮೊತ್ತ ಬೆನ್ನೆಟ್ಟುವ ಸವಾಲು ಪಡೆದ ಶ್ರೀಲಂಕಾಗೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಖಾತೆಯಲ್ಲಿ ಕೇವಲ ಒಂದು ರನ್‌ ಸೇರಿದ್ದಾಗ ಸಮರವಿಕ್ರಮ ಶೂನ್ಯಕ್ಕೆ ನಿರ್ಗಮಿಸಿದರು. ಇದಾದ ಸ್ವಲ್ಪೇ ಹೊತ್ತಿನಲ್ಲಿ ಎನ್‌ ಡಿಕ್ವೆಲ್ಲಾ ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲಿನ ಹಾದಿ ಹಿಡಿಯಿತು. ಆಗ ಜೊತೆಗೂಡಿದ ರಾಜಪಕ್ಷ ಹಾಗೂ ಎಸ್‌ ಜಯಸೂರ್ಯ ತಂಡದ ಪತನವನ್ನು ತಡೆಹಿಡಿದರು. ಮೂರನೇ ವಿಕೆಟ್‌ಗೆ ಈ ಜೋಡಿ 59 ರನ್‌ ಸೇರಿಸಿದ್ದಾಗ ಶಿವಮ್‌ ದುಬೆ ಈ ಜೊತೆಯಾಟವನ್ನು ಮುರಿದು ಭಾರತದ ಶಿಬಿರದಲ್ಲಿ ಸಂತಸ ಮೂಡಿಸಿದರು. ನಾಲ್ಕನೇ ವಿಕೆಟ್‌ಗೆ ಜಯಸೂರ್ಯ ಹಾಗೂ ನಾಯಕ ಎ ಪ್ರಿಯಂಜನ್‌ (29) ಮತ್ತು ಏಳನೇ ವಿಕೆಟ್‌ಗೆ ಜಯಸೂರ್ಯ ಮತ್ತು ಜಯರತ್ನೆ (ಅಜೇಯ 44) ಉತ್ತಮ ಆಟ ಪ್ರದರ್ಶಿಸಿದರೂ ಭಾರತದ ಬೃಹತ್‌ ಮೊತ್ತವನ್ನು ತಲುಪಲು ಸಾಕಾಗಲಿಲ್ಲ.

ಒಂದು ಕಡೆ ಆಗಾಗ ವಿಕೆಟ್ ಬೀಳುತ್ತಿದ್ದರೂ ಇನ್ನೊಂದು ಕಡೆ ಗಟ್ಟಿಯಾಗಿ ನಿಂತಿದ್ದ ಜಯಸೂರ್ಯ ಅಜೇಯ ಶತಕ ಗಳಿಸಿ ಗಮನ ಸೆಳೆದರು. 120 ಎಸೆತಗಳನ್ನು ಎದುರಿಸಿದ ಜಯಸೂರ್ಯ ತಮ್ಮ ಅಜೇಯ 108 ರನ್‌ಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ ಹೊಡೆದರು.ಸಂಕ್ಷಿಪ್ತ ಸ್ಕೋರು: ಭಾರತ ಎ ತಂಡ: 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 317. ( ಗಾಯಕವಾಡ ಅಜೇಯ 187.ಶುಬ್ಮನ್‌ ಗಿಲ್ 5, ಅನಮೋಲ 65. ಇಶಾನ್‌ ಕಿಶನ್‌ 45. ಶಿವಮ್‌ ದುಬೆ 6. ರಿಕಿ ಭುಯಿ ಅಜೇಯ 7. ಲಹಿರು ಕುಮಾರ 62 ಕ್ಕೆ 3.ವಿಕಟ್. ಪ್ರಿಯಂಜನ್‌ 29 ಕ್ಕೆ 1. ಶ್ರೀಲಂಕಾ ಎ ತಂಡ: 42 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 269. (ಎನ್‌ ಡಿಕ್ವೆಲ್ಲಾ 19, ಬಾನುಕಾ ರಾಜಪಕ್ಷ 29, ಸೇಹನ್‌ ಆಜೇಯ 108. ಎ. ಪ್ರಿಯಂಜನ್‌ 29. ಕಮಿಂದು ಮೆಂಡಿಸ್‌ 9. ದಸುನ್‌ 44, ಇಶಾನ್‌ ಜಯರತ್ನೆ ಅಜೇಯ 20. ಮಯಾಂಕ ಮಾರ್ಕಂಡೆ 66 ಕ್ಕೆ 2. ದೀಪಕ ಹೂಡಾ 24 ಕ್ಕೆ 1, ತುಷಾರ ದೇಶಪಾಂಡೆ 48 ಕ್ಕೆ 1. ಸಂದೀಪ ವಾರಿಯರ್‌ 39 ಕ್ಕೆ 1. ಶಿವಮ್‌ ದುಬೆ 35 ಕ್ಕೆ 1.

•ಕೇಶವ ಆದಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ