ಭಾರತ-ಫಿನ್ಲಂಡ್ ಡೇವಿಸ್ ಕಪ್ ಟೆನಿಸ್ ಮುಂದೂಡಿಕೆ
Team Udayavani, Jun 28, 2020, 5:53 AM IST
ಹೊಸದಿಲ್ಲಿ: ಕೊನೆಗೂ ಭಾರತ-ಫಿನ್ಲಂಡ್ ನಡುವಿನ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯನ್ನು 2021ಕ್ಕೆ ಮುಂದೂಡಲಾಗಿದೆ. ಕೋವಿಡ್-19 ಕಾರಣದಿಂದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ತನ್ನೆಲ್ಲ ಟೆನಿಸ್ ಕೂಟಗಳನ್ನು ಮುಂದೂಡಿದ ಕಾರಣ ಈ ನಿರ್ಧಾರಕ್ಕೆ ಬರಬೇಕಾಯಿತು.
ಭಾರತ ತಂಡ ವರ್ಲ್ಡ್ ಗ್ರೂಪ್1 ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೆಪ್ಟಂಬರ್ನಲ್ಲಿ ಫಿನ್ಲಂಡಿಗೆ ತೆರಳಬೇಕಿತ್ತು. ಇದಕ್ಕೂ ಹಿಂದಿನ ಡೇವಿಸ್ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ 1-3 ಅಂತರದಿಂದ ಕ್ರೊವೇಶಿಯಾಕ್ಕೆ ಶರಣಾಗಿತ್ತು. ಇನ್ನೊಂದೆಡೆ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಸ್ಪರ್ಧೆಯಲ್ಲಿ ಫಿನ್ಲಂಡ್ 3-2ರಿಂದ ಮೆಕ್ಸಿಕೊಗೆ ಸೋಲುಣಿಸಿತ್ತು.
ಭಾರತಕ್ಕೆ ಫಿನ್ಲಂಡ್ ಸುಲಭ ಎದುರಾಳಿ ಎಂದೇ ಭಾವಿಸಲಾಗಿದೆ. ಇಲ್ಲಿನ ಯಾವ ಟೆನಿಸಿಗರೂ ಅಗ್ರ ನೂರರ ರ್ಯಾಂಕಿಂಗ್ ಯಾದಿಯಲ್ಲಿಲ್ಲ. 101ನೇ ಸ್ಥಾನದಲ್ಲಿರುವ ಎಮಿಲ್ ರುಸುವೂರಿ ಅವರದೇ ಅತ್ಯುತ್ತಮ ರ್ಯಾಂಕಿಂಗ್ ಆಗಿದೆ. ಉಳಿದವರು ಅಗ್ರ 400ರ ಯಾದಿಯಲ್ಲೂ ಇಲ್ಲ.