ಬ್ರಿಸ್ಬೇನ್ ಸಕ್ಸಸ್‌ಗೆ ಹನ್ನೊಂದರ ಬಳಗದ ಸರ್ಕಸ್
Team Udayavani, Jan 14, 2021, 7:00 AM IST
ಬ್ರಿಸ್ಬೇನ್: ಶುಕ್ರವಾರದಿಂದ ಆರಂಭವಾಗಲಿರುವ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಪ್ರವಾಸಿ ಭಾರತಕ್ಕೆ ನಿಜವಾಗಿಯೂ ಅಗ್ನಿಪರೀಕ್ಷೆ ತಂದೊಡ್ಡಿದೆ. ಅಸಾಮಾನ್ಯ ಹೋರಾಟ ಪ್ರದರ್ಶಿಸಿ ಸಿಡ್ನಿ ಪಂದ್ಯವನ್ನು ಉಳಿಸಿಕೊಂಡ ಆತ್ಮವಿಶ್ವಾಸದಲ್ಲಿದ್ದರೂ ಗಾಯಾಳುಗಳ ಸಮಸ್ಯೆಯಿಂದ ಟೀಮ್ ಇಂಡಿಯಾ ಕಂಗೆಟ್ಟಿದೆ. ಸಶಕ್ತ ಹನ್ನೊಂದರ ಬಳಗವನ್ನು ಕಟ್ಟುವ ಭಾರೀ ದೊಡ್ಡ ಸವಾಲು ಎದುರಿಗಿದೆ.
ಸಿಡ್ನಿಯಲ್ಲಿ ಆಡಿದ ಹನುಮ ವಿಹಾರಿ, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ ತಂಡದಿಂದ ಬೇರ್ಪಟ್ಟಿದ್ದಾರೆ. ಪೂರ್ತಿ ಫಿಟ್‌ನೆಸ್ ಹೊಂದಿಲ್ಲದ ಆರ್. ಅಶ್ವಿನ್ ಆಡುವುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ ಈ ನಾಲ್ಕು ಸ್ಥಾನಕ್ಕೆ ಸಮರ್ಥ ಆಟಗಾರರನ್ನು ಆರಿಸಲು ಭಾರೀ ಸರ್ಕಸ್ ಮಾಡಬೇಕಿದೆ!
ಅಗತ್ಯವಿದೆ ಸಾಹಾ ಸಹಾಯ :
ಈ ಸಂದರ್ಭದಲ್ಲಿ, ಫಾರ್ಮ್ ತೋರ್ಪಡಿಸದೆ ತಂಡದಿಂದ ಬೇರ್ಪಟ್ಟ ಆಟಗಾರರನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಭಾರತ ದ್ದಾಗಿದೆ. ಇವರಲ್ಲಿ ವೃದ್ಧಿಮಾನ್ ಸಾಹಾ ಮುಂಚೂಣಿಯಲ್ಲಿದ್ದಾರೆ. ಇವರನ್ನು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ವಿಹಾರಿ ಜಾಗಕ್ಕೆ ಸೇರಿಸಿ ಕೊಳ್ಳುವ ಸಾಧ್ಯತೆ ಇದೆ. ಅಕಸ್ಮಾತ್ ಪಂತ್‌ಗೆ ಕೀಪಿಂಗ್ ನಡೆಸಲು ಸಾಧ್ಯವಾಗದೇ ಹೋದರೆ ಸಾಹಾಗೆ ಈ ಜವಾಬ್ದಾರಿಯನ್ನೂ ವಹಿಸುವುದು ಸದ್ಯದ ಯೋಜನೆ.
ಅಶ್ವಿನ್ ಅಥವಾ ಕುಲದೀಪ್? :
ಆರ್. ಅಶ್ವಿನ್ ಬೆನ್ನುನೋವಿನಿಂದ ನರಳುತ್ತಿದ್ದಾರೆ. ಸದ್ಯ ಅವರು ಆಡುವ ಸಾಧ್ಯತೆ 60-40ರಷ್ಟು ಮಾತ್ರ ಇದೆ. ಅಕಸ್ಮಾತ್ ಪಂದ್ಯದ ನಡುವೆ ಅವರ ಸಮಸ್ಯೆ ಉಲ್ಬಣಗೊಂಡು ಬೌಲಿಂಗ್ ನಡೆಸಲು ಸಾಧ್ಯವಾಗದೇ ಹೋದರೆ ಆಗ ಭಾರತದ ಸಮಸ್ಯೆಯೂ ಬಿಗಡಾ ಯಿಸುತ್ತದೆ. ಹೀಗಾಗಿ ಅಶ್ವಿನ್ ಆಯ್ಕೆ ಬಗ್ಗೆ ಅನುಮಾನವಿದೆ. ಉಳಿದಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್. ಇವರಿಗೊಂದು ಅವಕಾಶ ಸಿಗಲೂಬಹುದು.
ಕುಲದೀಪ್ ಬೇಡವೆಂದಾದರೆ ಆಗ 4 ಮಂದಿ ಸ್ಪೆಷಲಿಸ್ಟ್ ವೇಗಿಗಳು ದಾಳಿ ಸಂಘಟಿಸುವ ಸಾಧ್ಯತೆ ಇದೆ. ಇವರೆಂದರೆ ಠಾಕೂರ್, ಸಿರಾಜ್, ಸೈನಿ ಮತ್ತು ನಟರಾಜನ್. ಬ್ರಿಸ್ಬೇನ್ ಟ್ರ್ಯಾಕ್ ಬೌನ್ಸ್ ಮತ್ತು ಸೀಮ್‌ಗೆ ಹೆಚ್ಚಿನ ನೆರವು ನೀಡುವುದೇ ಇದಕ್ಕೆ ಕಾರಣ.
ಒಂದು ವೇಳೆ ಅಶ್ವಿನ್ ಫಿಟ್ ಆದರೆ, ಆಗ ವಾಷಿಂಗ್ಟನ್ ಸುಂದರ್ ಅವರನ್ನೂ ಉಳಿಸಿಕೊಂಡು ಓರ್ವ ವೇಗಿಯನ್ನು ಕೈಬಿಡುವ ಯೋಜನೆ ಕೂಡ ತಂಡದ ಮುಂದಿದೆ.
ಸದ್ಯ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗಕ್ಕೆ ಯಾವುದೇ ಕಂಟಕ ಎದುರಾಗಿಲ್ಲ. ಹೀಗಾಗಿ ಪೃಥ್ವಿ ಶಾ ಹೆಸರು ಮುನ್ನೆಲೆಗೆ ಬಂದಿಲ್ಲ. ಆದರೆ ಗಾಯಾಳಾಗದೆ ಹೋಗಿದ್ದರೆ ಅಗರ್ವಾಲ್‌ಗೆ ಒಂದು ಚಾನ್ಸ್ ಇತ್ತು. ವಿಹಾರಿ ಬದಲು ಅವರನ್ನು ಆಡಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಹೀಗಾಗಿ ಅಗರ್ವಾಲ್ ನತದೃಷ್ಟರೇ ಸರಿ!
“ಗಬ್ಬಾ’ದಲ್ಲಿ ಟೀಮ್ ಇಂಡಿಯಾ ಅಭ್ಯಾಸ :
ಬ್ರಿಸ್ಬೇನ್: ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಗಾಯಾಳು ಆಟಗಾರರನ್ನು ಹೊರತುಪಡಿಸಿ ಭಾರತದ ಉಳಿದ ಸದಸ್ಯರೆಲ್ಲ ಬುಧವಾರ ಉತ್ತಮ ಅಭ್ಯಾಸ ನಡೆಸಿದರು. ರೋಹಿತ್, ಶುಭಮನ್ ಗಿಲ್, ನಾಯಕ ರಹಾನೆ ಅವರೆಲ್ಲ ಹೆಚ್ಚಿನ ಅವಧಿಯನ್ನು ನೆಟ್ಸ್ ನಲ್ಲಿ ಕಳೆದರು.
ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ಸುದೀರ್ಘ ಅಭ್ಯಾಸ ನಡೆಸಿದರು. ಸೀಮರ್ ಶಾರ್ದೂಲ್ ಠಾಕೂರ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಮನ ಸೆಳೆದರು.
ಪ್ರಧಾನ ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರು ಆಟಗಾರರ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರು. “ಸಿಡ್ನಿಯ ಅಮೋಘ ಫೈಟ್‌ಬ್ಯಾಕ್ ಬಳಿಕ ನಮ್ಮ ಪಾಲಿಗಿದು ಪುನರ್ ಸಂಘಟನೆಯ ಸಮಯ. ಅಂತಿಮ ಟೆಸ್ಟ್ ಪಂದ್ಯಕ್ಕೆ ನಮ್ಮ ಸಿದ್ಧತೆ ಆರಂಭಗೊಂಡಿದೆ’ ಎಂಬುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ.
ಕಠಿನ ಕ್ವಾರಂಟೈನ್ :
ಇದಕ್ಕೂ ಮುನ್ನ ಟೀಮ್ ಇಂಡಿಯಾ ಸದಸ್ಯರು ಬ್ರಿಸ್ಬೇನ್ ಹೊಟೇಲ್‌ನಲ್ಲಿ ಕಠಿನ ಕ್ವಾರಂಟೈನ್‌ಗೆ ಒಳಗಾಗಿದ್ದರು. ಪಕ್ಕದ ಹೊಟೇಲಿನಲ್ಲಿ “ಬ್ರಿಟನ್ ಕೊರೊನಾ’ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗರಿಗೆ ರೂಮ್ ಸಿಬಂದಿಯನ್ನೂ ನೀಡಿರಲಿಲ್ಲ. ಇದಕ್ಕೆ ತಂಡದ ಆಡಳಿತ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಆದರೆ ಬುಧವಾರ ಈ ಸಮಸ್ಯೆ ಪರಿಹಾರ ಕಂಡಿತು. ಜಿಮ್, ಸ್ವಿಮ್ಮಿಂಗ್ ಪೂಲ್‌ಗಳೂ ಭಾರತದ ಕ್ರಿಕೆಟಿಗರಿಗೆ ತೆರೆಯಲ್ಪಟ್ಟವು.
ಸುಂದರ್ ಹೆಸರೂ ಚಾಲ್ತಿಗೆ :
ಟಿ20 ತಂಡದಲ್ಲಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹೆಸರು ಕೂಡ ಚಾಲ್ತಿಯಲ್ಲಿದೆ. ಇವರನ್ನು ರವೀಂದ್ರ ಜಡೇಜ ಜಾಗಕ್ಕೆ ಆರಿಸುವುದು ಸೂಕ್ತ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸುಂದರ್ ಟೆಸ್ಟ್ ತಂಡದ ಅಧಿಕೃತ ಸದಸ್ಯರಲ್ಲ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಇನ್ನೂ ಕಾಲಾವಕಾಶವಿದೆ. ಆದರೆ ಸುಂದರ್ ಅನಿವಾರ್ಯರೇ ಎಂಬುದಷ್ಟೇ ಇಲ್ಲಿನ ಪ್ರಶ್ನೆ.
ಬ್ರಿಸ್ಬೇನ್ ದಾಖಲೆಗಳೆಲ್ಲ ಆಸೀಸ್ ಪರ :
ಬ್ರಿಸ್ಬೇನ್‌ನ “ವೂಲೂಂಗಬ್ಟಾ’ದಲ್ಲಿ ಭಾರತದ ಟೆಸ್ಟ್ ದಾಖಲೆ ಉಲ್ಲೇಖನೀಯವಾಗಿಲ್ಲ. 1947-2014ರ ಅವಧಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿದ 6 ಟೆಸ್ಟ್‌ಗಳಲ್ಲಿ ಐದನ್ನು ಕಳೆದುಕೊಂಡಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇನ್ನೂ ಗೆಲುವಿನ ಮುಖ ಕಂಡಿಲ್ಲ.
ಬ್ರಿಸ್ಬೇನ್‌ನಲ್ಲಿ ಭಾರತದ ಅತ್ಯುತ್ತಮ ಸಾಧನೆಯೆಂದರೆ 2003ರಲ್ಲಿ ಡ್ರಾ ಸಾಧಿಸಿದ್ದು. ಇದು ಸ್ಟೀವ್ ವೋ-ಸೌರವ್ ಗಂಗೂಲಿ ತಂಡಗಳ ಸೆಣಸಾಟವಾಗಿತ್ತು. ಕಾಂಗರೂ ತಂಡದ ಈಗಿನ ಕೋಚ್ ಜಸ್ಟಿನ್ ಲ್ಯಾಂಗರ್ (121), ಸೌರವ್ ಗಂಗೂಲಿ (144) ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. ದ್ವಿತೀಯ ಸರದಿಯಲ್ಲಿ ಮ್ಯಾಥ್ಯೂ ಹೇಡನ್ ಕೇವಲ ಒಂದು ರನ್ ಕೊರತೆಯಿಂದ ಸೆಂಚುರಿ ತಪ್ಪಿಸಿಕೊಂಡರು. 199 ರನ್ ಗುರಿ ಪಡೆದ ಭಾರತ 16 ಓವರ್‌ಗಳಲ್ಲಿ 2 ವಿಕೆಟಿಗೆ 72 ರನ್ ಮಾಡಿ ಪಂದ್ಯವನ್ನು ಡ್ರಾಗೊಳಿಸಿತು. ಗಂಗೂಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಭಾರತ-ಆಸ್ಟ್ರೇಲಿಯ 2014ರ ಬಳಿಕ ಬ್ರಿಸ್ಬೇನ್‌ನಲ್ಲಿ ಮುಖಾಮುಖೀ ಆಗಿಲ್ಲ.
ಬ್ರಿಸ್ಬೇನ್ ಅಂಕಿಅಂಶ :
l 1931ರಿಂದ ಇಲ್ಲಿಯ ತನಕ ಬ್ರಿಸ್ಬೇನ್‌ನಲ್ಲಿ 62 ಟೆಸ್ಟ್ ಆಡಿರುವ ಆಸ್ಟ್ರೇಲಿಯ 40 ಗೆಲುವು ದಾಖಲಿಸಿದೆ. 8ರಲ್ಲಿ ಸೋಲು ಎದುರಾಗಿದೆ. 13 ಟೆಸ್ಟ್ ಡ್ರಾಗೊಂಡರೆ, ಒಂದು ಪಂದ್ಯ ಟೈ ಆಗಿದೆ.
l 1960ರಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯ ರೋಚಕ ಟೈ ಆಗಿತ್ತು. 233 ರನ್ ಗುರಿ ಪಡೆದ ವೆಸ್ಟ್ ಇಂಡೀಸ್ 8ಕ್ಕೆ 232 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಇದೇ ಮೊತ್ತದಲ್ಲಿ ಕೊನೆಯ ಇಬ್ಬರು ಆಟಗಾರರು ರನೌಟಾದರು!
l 2012ರ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯ ಡ್ರಾಗೊಂಡ ಬಳಿಕ ಇಲ್ಲಿ ಆಡಲಾದ ಕಳೆದ 7 ಟೆಸ್ಟ್‌ಗಳಲ್ಲೂ ಆಸ್ಟ್ರೇಲಿಯ ಜಯ ಸಾಧಿಸಿದೆ.
l 1988ರ ಬಳಿಕ ಆಸ್ಟ್ರೇಲಿಯ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಸೋಲನ್ನೇ ಕಂಡಿಲ್ಲ. ಅಂದು ವೆಸ್ಟ್ ಇಂಡೀಸ್ 9 ವಿಕೆಟ್‌ಗಳಿಂದ ಕಾಂಗರೂ ಪಡೆಯನ್ನು ಮಗುಚಿತ್ತು. ಅಂದಿನಿಂದ ಇಂದಿನ ತನಕ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯ 31 ಟೆಸ್ಟ್ ಆಡಿದ್ದು, 24ರಲ್ಲಿ ಜಯ ಸಾಧಿಸಿದೆ. 7 ಟೆಸ್ಟ್ ಡ್ರಾಗೊಂಡಿದೆ.
l ಬ್ರಿಸ್ಬೇನ್‌ನಲ್ಲಿ ಆಸೀಸ್ 4 ಸಲ 600 ಪ್ಲಸ್ ರನ್ ಪೇರಿಸಿದೆ. 1946ರ ಆ್ಯಶಸ್ ಸರಣಿಯಲ್ಲಿ 645 ರನ್ ಗಳಿಸಿದ್ದು ದಾಖಲೆ.
l 2012ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ಅಜೇಯ 259 ರನ್ ಗಳಿಸಿದ್ದು ಸರ್ವಾಧಿಕ ವೈಯಕ್ತಿಕ ಮೊತ್ತವಾಗಿದೆ.
l 2003 ಮತ್ತು 2014ರ ಟೆಸ್ಟ್‌ಗಳಲ್ಲಿ ಕ್ರಮವಾಗಿ ಸೌರವ್ ಗಂಗೂಲಿ ಹಾಗೂ ಮುರಳಿ ವಿಜಯ್ 144 ರನ್ ಬಾರಿಸಿದ್ದು ಭಾರತೀಯರ ಅತ್ಯುತ್ತಮ ಸಾಧನೆಯಾಗಿದೆ.
l ಶೇನ್ ವಾರ್ನ್ 11 ಟೆಸ್ಟ್‌ಗಳಿಂದ ಅತ್ಯಧಿಕ 68 ವಿಕೆಟ್ ಉರುಳಿಸಿದ್ದಾರೆ.
l 1985ರಲ್ಲಿ ರಿಚರ್ಡ್ ಹ್ಯಾಡ್ಲಿ 52ಕ್ಕೆ 9 ವಿಕೆಟ್ ಉಡಾಯಿಸಿದ್ದು ಇನ್ನಿಂಗ್ಸ್ ಒಂದರ ಅತ್ಯುತ್ತಮ ಬೌಲಿಂಗ್ ಸಾಧನೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು
2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ
ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ
ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ
ಹೊಸ ಜೋಶ್ನಲ್ಲಿ ಚಿತ್ರರಂಗ ಸಾಲು ಸಾಲು ಸಿನಿಮಾಗಳಿಗೆ ಪೂಜೆ