ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಸೇಡಿನ ಪಂದ್ಯ
Team Udayavani, Jan 29, 2022, 3:13 PM IST
ಓಸ್ಟರ್ನ್ (ಆಂಟಿಗಾ): ಏಶ್ಯದ ಪ್ರಮುಖ ತಂಡಗಳಾದ ಭಾರತ ಮತ್ತು ಬಾಂಗ್ಲಾದೇಶ ಶನಿವಾರದ ಬಹು ನಿರೀಕ್ಷೆಯ ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿವೆ.
ಟೀಮ್ ಇಂಡಿಯಾ ಕಡೆಯಿಂದ ಬಂದ ಶುಭ ಸಮಾಚಾರವೆಂದರೆ ಕೋವಿಡ್ ಸೋಂಕಿಗೊಳಗಾದ ಆಟಗಾರರೆಲ್ಲ ಚೇತರಿಸಿ ಕೊಂಡಿರುವುದು. ನಾಯಕ ಯಶ್ ಧುಲ್ ಸೇರಿದಂತೆ 5 ಮಂದಿ ಆಟಗಾರರಿಗೆ ಲೀಗ್ ಹಂತದ ದ್ವಿತೀಯ ಪಂದ್ಯಕ್ಕೂ ಮುನ್ನ ಕೋವಿಡ್ ಪಾಸಿಟಿವ್ ಅಂಟಿಕೊಂಡಿತ್ತು.
ಮೊದಲ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 45 ರನ್ನುಗಳಿಂದ ಉರುಳಿಸಿದ ಭಾರತ “ಸುರಕ್ಷಿತ ವಲಯ’ದಲ್ಲಿತ್ತು. ಬಳಿಕ ಮೀಸಲು ಸಾಮರ್ಥ್ಯದ ತಂಡ ಕಣಕ್ಕಿಳಿಯಿತು. ನಿಶಾಂತ್ ಸಿಂಧು ನೇತೃತ್ವ ವಹಿಸಿದರು. ಐರ್ಲೆಂಡ್ ಮತ್ತು ಉಗಾಂಡವನ್ನು ಕ್ರಮವಾಗಿ 174 ರನ್ ಹಾಗೂ 326 ರನ್ನುಗಳಿಂದ ಅಧಿಕಾರಯುತವಾಗಿಯೇ ಮಣಿಸಿದ ಭಾರತ ಅಜೇಯವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿತು. ಇನ್ನೀಗ ಬಾಂಗ್ಲಾ ಸರದಿ.
2020ರ ಫೈನಲ್ ಸೋಲು… ಭಾರತದ ಪಾಲಿಗೆ ಇದು ಸೇಡಿನ ಪಂದ್ಯ.: 2020ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತಕ್ಕೆ ಬಾಂಗ್ಲಾದೇಶ ಆಘಾತಕಾರಿ ಸೋಲುಣಿಸಿತ್ತು; ಮೊದಲ ಸಲ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಸೋಲಿಗೆ ಟೀಮ್ ಇಂಡಿಯಾದ ಕಿರಿಯರು ತಿರುಗೇಟು ನೀಡಬೇಕಿದೆ. ಇದಕ್ಕೂ ಮೊದಲು ಯುಎಇಯಲ್ಲಿ ನಡೆದ ಏಶ್ಯ ಕಪ್ ಸೆಮಿಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತ ಒಂದು ಹಂತದ ಸೇಡು ತೀರಿಸಿಕೊಂಡಿದ್ದನ್ನು ಮರೆಯುವಂತಿಲ್ಲ.
ಇದನ್ನೂ ಓದಿ:ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್
ನಾಯಕ ಧುಲ್ ಮತ್ತು ಉಪನಾಯಕ ರಶೀದ್ ಆಡುವುದರಿಂದ ಭಾರತದ ಬ್ಯಾಟಿಂಗ್ ವಿಭಾಗ ಹೆಚ್ಚು ಬಲಿಷ್ಠಗೊಳ್ಳಲಿದೆ. ಆರಂಭಿಕರಾದ ರಘುವಂಶಿ -ಹರ್ನೂರ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ರಾಜ್ ಬಾವಾ, ಎಡಗೈ ಸ್ಪಿನ್ನರ್ ವಿಕ್ಕಿ ಓಸ್ತವಾಲ್, ರಾಜ್ಯವರ್ಧನ್ ಅವರೆಲ್ಲ ಭಾರತ ತಂಡದ ಇನ್‌ಫಾರ್ಮ್ ಆಟಗಾರರು. ಲೀಗ್ ಹಂತದಲ್ಲಿ ಇಂಗ್ಲೆಂಡಿಗೆ ಸೋತಿದ್ದ ಬಾಂಗ್ಲಾದೇಶ, ಬಳಿಕ ಕೆನಡಾ ಮತ್ತು ಯುಎಇ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ನಿಶಾಂತ್ ಸಿಂಧುಗೆ ಕೊರೊನಾ: ಭಾರತದ ಅಂಡರ್-19 ತಂಡದ ಕೊರೊನಾ ಬಾಧಿತ ಕ್ರಿಕೆಟಿಗರೆಲ್ಲ ಚೇತರಿಸಿಕೊಂಡರೇನೋ ಸರಿ, ಆದರೆ ಕ್ವಾರ್ಟರ್ ಫೈನಲ್ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಭಾರತ ತಂಡದಲ್ಲಿ ಮತ್ತೂಂದು ಕೊರೊನಾ ಕೇಸ್ ಕಂಡುಬಂದಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿಶಾಂತ್ ಸಿಂಧು ಕೊರೊನಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಬಾಂಗ್ಲಾದೇಶ ವಿರುದ್ಧ ಆಡಲಿಳಿಯುವುದಿಲ್ಲ ಎಂದು ತಂಡದ ಪ್ರಕಟನೆ ತಿಳಿಸಿದೆ. ನಿಶಾಂತ್ ಬದಲು ಎಡಗೈ ಸ್ಪಿನ್ನರ್ ಅನೀಶ್ವರ್ ಗೌತಮ್ ಆಡುವ ಸಾಧ್ಯತೆ ಇದೆ.
ಆರಂಭ: ಸಂಜೆ 6.30
ಪ್ರಸಾರ: ಸ್ಟಾರ್ ಸ್ಪೋಟ್ಸ್