ಶಮಿ ಸದೃಢ; ರೋಹಿತ್, ಪೂಜಾರ ಅನುಮಾನ
Team Udayavani, Sep 9, 2021, 6:35 AM IST
ನವದೆಹಲಿ: ಗಾಯಾಳಾಗಿ ಓವೆಲ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಈಗ ದೈಹಿಕ ಸಾಮರ್ಥ್ಯ ಮರಳಿ ಗಳಿಸಿದ್ದಾರೆ. ಹೀಗಾಗಿ ಅವರು ಅಂತಿಮ ಟೆಸ್ಟ್ನಲ್ಲಿ ಆಡುವ ಬಳಗಕ್ಕೆ ಮರಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಶಮಿಗಾಗಿ ಮೊಹಮ್ಮದ್ ಸಿರಾಜ್ ಜಾಗ ಬಿಡಬೇಕಾಗಬಹುದು. ಇಲ್ಲವೇ ಸತತವಾಗಿ ಆಡುತ್ತಿಲೇ ಇರುವ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆದರೆ ಇದೇ ವೇಳೆ ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್ ಶರ್ಮ ಮತ್ತು ಚೇತೇಶ್ವರ ಪೂಜಾರ ಕ್ರಮವಾಗಿ ಮಂಡಿ ಹಾಗೂ ಪಾದದ ನೋವಿಗೆ ಸಿಲುಕಿದ್ದು, ವೈದ್ಯಕೀಯ ತಂಡ ಇವರ ಮೇಲೆ ತೀವ್ರ ನಿಗಾ ಇರಿಸಿದೆ.
ಅಕಸ್ಮಾತ್ ರೋಹಿತ್ ಫಿಟ್ ಆಗದೇ ಹೋದರೆ ಮಾಯಾಂಕ್ ಅಗರ್ವಾಲ್ ಅಥವಾ ಪೃಥ್ವಿ ಶಾ ಅವಕಾಶ ಪಡೆಯಬಹುದು. ಪೂಜಾರ ಲಭ್ಯರಾಗದಿದ್ದಲ್ಲಿ ಹನುಮ ವಿಹಾರಿ ಮತ್ತು ಸೂರ್ಯಕುಮಾರ್ ಯಾದವ್ ಆಯ್ಕೆ ರೇಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.