ಭಾರತಕ್ಕೆ ಟೆಸ್ಟ್‌ ಸರಣಿ ಗೆಲುವಿನ ಉಜ್ವಲ ಅವಕಾಶ: ಇಂಜಿನಿಯರ್‌

Team Udayavani, Nov 29, 2018, 6:40 AM IST

ಮುಂಬಯಿ: ಈ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಉಜ್ವಲ ಅವಕಾಶವೊಂದು ಭಾರತದ ಮುಂದಿದೆ ಎಂಬುದಾಗಿ ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್‌ ಹೇಳಿದ್ದಾರೆ. ಪ್ರಮುಖ ಆಟಗಾರರಾದ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ.

“ಆಸ್ಟ್ರೇಲಿಯ ತಂಡದಲ್ಲಿ 2 ದೊಡ್ಡ ಹೆಸರುಗಳು ಕಾಣೆಯಾಗಿವೆ, ಸ್ಮಿತ್‌ ಮತ್ತು ವಾರ್ನರ್‌. ಪ್ರಮುಖ ಆಟಗಾರರ ಗೈರು ಎನ್ನುವುದು ಒಂದು ತಂಡವನ್ನು ಯಾವತ್ತೂ ದುರ್ಬಲಗೊಳಿಸುತ್ತದೆ. ಹೀಗಾಗಿ ಆಸ್ಟ್ರೇಲಿಯದಲ್ಲಿ ಸರಣಿ ಗೆಲ್ಲಲು ಭಾರತಕ್ಕೆ ಇದಕ್ಕಿಂತ ಉತ್ತಮ ಅವಕಾಶ ಸಿಗದು’ ಎಂದು ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.

“ಭಾರತವೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ನಾವು ವಿರಾಟ್‌ ಕೊಹ್ಲಿ ರೂಪದಲ್ಲಿ ಗ್ರೇಟ್‌ ಕ್ಯಾಪ್ಟನ್‌ನನ್ನು ಹೊಂದಿದ್ದೇವೆ. ಉತ್ತಮ ಆಲ್‌ರೌಂಡ್‌ ಹಾಗೂ ಸಮತೋಲಿತ ತಂಡ ನಮ್ಮದಾಗಿದೆ. ಉತ್ತಮ ದರ್ಜೆಯ ಪೇಸ್‌ ಹಾಗೂ ಸ್ಪಿನ್‌ ಬೌಲರ್‌ಗಳನ್ನು ನಮ್ಮಲಿದ್ದಾರೆ. ಇವೆಲ್ಲದರ ಲಾಭವನ್ನೆತ್ತಿದರೆ ಆಸ್ಟ್ರೇಲಿಯವನ್ನು ಅವರದೇ ಅಂಗಳದಲ್ಲಿ ಮಣಿಸಲು ಸಾಧ್ಯವಿದೆ’ ಎಂದರು.

ಪಾರ್ಥಿವ್‌ ಮೊದಲ ಆಯ್ಕೆ
ತಂಡದಲ್ಲಿರುವ ಇಬ್ಬರು ವಿಕೆಟ್‌ ಕೀಪರ್‌ಗಳ ಕುರಿತು ಪ್ರತಿಕ್ರಿಯಿಸಿದ ಮಾಜಿ ಸ್ಟಂಪರ್‌, “35ರ ಪ್ರಾಯದವರಾದರೂ ಪಾರ್ಥಿವ್‌ ಪಟೇಲ್‌ ಟೆಸ್ಟ್‌ ತಂಡದ ಮೊದಲ ಆಯ್ಕೆಯಾಗಬೇಕು. ರಿಷಬ್‌ ಪಂತ್‌ ಅವರನ್ನು ಸೀಮಿತ ಓವರ್‌ಗಳ ಪಂದ್ಯಗಳಿಗೆ ಮೀಸಲಿಡಬೇಕು. ಪಂತ್‌ ಚೆಂಡಿನ ಮೇಲೆ ಕಣ್ಣಿಡುವ ಮೊದಲೇ ರಿವರ್ ಸ್ವೀಪ್‌ಗೆ ಮುಂದಾಗಿ ವಿಕೆಟ್‌ ಕೈಚೆಲ್ಲುತ್ತಿದ್ದಾರೆ’ ಎಂದರು.

“ದುರದೃಷ್ಟವಶಾತ್‌ ನಾವಿಂದು ಬ್ಯಾಟ್ಸ್‌ಮನ್‌-ಕೀಪರ್‌ಗಳನ್ನು ಕಾಣುತ್ತಿದ್ದೇವೆಯೇ ಹೊರತು ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ಗಳನ್ನಲ್ಲ. ನನ್ನ ಕಾಲದಲ್ಲಿ, ನೀವು ಮೊದಲು ಪರಿಪೂರ್ಣ ವಿಕೆಟ್‌ ಕೀಪರ್‌ ಆಗಬೇಕಿತ್ತು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ನೀವು ದೊಡ್ಡ ಸ್ಕೋರ್‌ ಗಳಿಸಿಯೂ ವಿಕೆಟ್‌ ಹಿಂದುಗಡೆ ಕ್ಯಾಚ್‌ಗಳನ್ನು ಕೈಚೆಲ್ಲಿದರೆ ಅದರಿಂದ ತಂಡಕ್ಕೆ ಭಾರೀ ನಷ್ಟ ಖಚಿತ. ಹೀಗಾಗಿ ನೀವು ಮೊದಲು ವಿಕೆಟ್‌ ಕೀಪರ್‌ ಆಗಬೇಕು’ ಎಂಬ ಸಲಹೆ ನೀಡಿದರು.

ಈಗಿನ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಅವರ ಕಾರ್ಯವೈಖರಿ ಬಗ್ಗೆ ಅಪಸ್ವರವೆತ್ತಿದ ಇಂಜಿನಿಯರ್‌, ದಿಲೀಪ್‌ ವೆಂಗಸರ್ಕಾರ್‌ ಅವರಂಥವರು ಈ ಹುದ್ದೆಗೆ ಮರಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ