ಚೆನ್ನೈ ಸೂಪರ್‌ ಚೇಸಿಂಗ್‌

Team Udayavani, Apr 15, 2019, 9:38 AM IST

ಕೋಲ್ಕತಾ: ಇಮ್ರಾನ್‌ ತಾಹಿರ್‌ ಅವರ ಘಾತಕ ಸ್ಪಿನ್‌ ದಾಳಿ, ಸುರೇಶ್‌ ರೈನಾ-ರವೀಂದ್ರ ಜಡೇಜ ಜೋಡಿಯ ಜವಾಬ್ದಾರಿಯುತ ಜತೆಯಾಟದ ನೆರವಿನಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ರವಿವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ ತಂಡಕ್ಕೆ 5 ವಿಕೆಟ್‌ಗಳ ಸೋಲುಣಿಸಿದೆ.

ಇದು 8 ಪಂದ್ಯಗಳಲ್ಲಿ ಚೆನ್ನೈ ಮೊಳಗಿಸಿದ 7ನೇ ಜಯಭೇರಿ. ಇದರೊಂದಿಗೆ ಹಾಲಿ ಚಾಂಪಿಯನ್‌ ಚೆನ್ನೈ ಮುಂದಿನ ಸುತ್ತಿಗೆ ಲಗ್ಗೆ ಇಡುವುದು ಖಚಿತಗೊಂಡಿದೆ. ಇನ್ನೊಂದೆಡೆ ಕೆಕೆಆರ್‌ 8 ಪಂದ್ಯಗಳಲ್ಲಿ ಅನುಭವಿಸಿದ ಸತತ 4ನೇ ಸೋಲು ಇದಾಗಿದೆ. ಜತೆಗೆ ಕಾರ್ತಿಕ್‌ ಪಡೆಗೆ ಎದುರಾದ ಹ್ಯಾಟ್ರಿಕ್‌ ಆಘಾತವೂ ಆಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 8 ವಿಕೆಟಿಗೆ 161 ರನ್‌ ಗಳಿಸಿದರೆ, ಚೆನ್ನೈ 19.4 ಓವರ್‌ಗಳಲ್ಲಿ 5 ವಿಕೆಟಿಗೆ 162 ರನ್‌ ಬಾರಿಸಿ ಗೆಲುವು ಸಾಧಿಸಿತು. 5 ದಿನಗಳ ಹಿಂದಷ್ಟೇ ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲೂ ಧೋನಿ ಪಡೆ ಕೆಕೆಆರ್‌ಗೆ ಸೋಲುಣಿಸಿತ್ತು (7 ವಿಕೆಟ್‌). ಸೇಡು ತೀರಿಸುವ ಯೋಜನೆ ಹಾಕಿಕೊಂಡಿದ್ದ ಕೆಕೆಆರ್‌ ನಿರಾಸೆ ಅನುಭವಿಸಿತು. ಹಾಗೆಯೇ ಈ ಫ‌ಲಿತಾಂಶದೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ಚೇಸಿಂಗ್‌ ಮಾಡಿದ ತಂಡಗಳೇ ಸತತ 10ನೇ ಗೆಲುವನ್ನು ದಾಖಲಿಸಿದಂತಾಯಿತು.

ಇಮ್ರಾನ್‌ ತಾಹಿರ್‌ ಕಡಿವಾಣ
ಕ್ರಿಸ್‌ ಲಿನ್‌ ಅವರ ಸ್ಫೋಟಕ ಆರಂಭದಿಂದ ದೊಡ್ಡ ಮೊತ್ತದ ಸೂಚನೆ ನೀಡಿದ್ದ ಕೆಕೆಆರ್‌ಗೆ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಭರ್ಜರಿ ಕಡಿವಾಣ ಹಾಕಿದರು. ತಾಹಿರ್‌ ಸಾಧನೆ 27ಕ್ಕೆ 4 ವಿಕೆಟ್‌. ಅವರು ಲಿನ್‌, ರಾಣಾ, ಉತ್ತಪ್ಪ ಮತ್ತು ಅಪಾಯಕಾರಿ ರಸೆಲ್‌ ವಿಕೆಟ್‌ ಉಡಾಯಿಸುವಲ್ಲಿ ಯಶಸ್ವಿಯಾದರು.

ಕೆಕೆಆರ್‌ನ ಮೊತ್ತದಲ್ಲಿ ಅರ್ಧದಷ್ಟು ರನ್ನನ್ನು ಲಿನ್‌ ಒಬ್ಬರೇ ಬಾರಿಸಿದರು. ಈ ಕಾಂಗರೂ ನಾಡಿನ ಕ್ರಿಕೆಟಿಗನ ಕೊಡುಗೆ 51 ಎಸೆತಗಳಿಂದ 82 ರನ್‌. ಇದರಲ್ಲಿ 6 ಭರ್ಜರಿ ಸಿಕ್ಸರ್‌, 7 ಬೌಂಡರಿ ಸೇರಿತ್ತು. ಲಿನ್‌ ಮತ್ತು ರಸೆಲ್‌ (10) ಅವರನ್ನು ಒಂದೇ ಓವರಿನಲ್ಲಿ ಉರುಳಿಸಿದ ತಾಹಿರ್‌ ಕೆಕೆಆರ್‌ನ ದೊಡ್ಡ ಮೊತ್ತದ ಕನಸನ್ನು ಛಿದ್ರಗೊಳಿಸಿದರು. ರಸೆಲ್‌ ಈ ಐಪಿಎಲ್‌ನಲ್ಲಿ 40ರ ಒಳಗೆ ಔಟಾದದ್ದು ಇದೇ ಮೊದಲು.

ದಡ ಮುಟ್ಟಿಸಿದ ರೈನಾ-ಜಡೇಜ
ಚೆನ್ನೈ ಚೇಸಿಂಗ್‌ ಆಶಾದಾಯಕವಾಗೇನೂ ಇರಲಿಲ್ಲ. ವಾಟ್ಸನ್‌ (6) ಮತ್ತೆ ವಿಫ‌ಲರಾದರು. ಡು ಪ್ಲೆಸಿಸ್‌ ಪಟಪಟನೆ 5 ಬೌಂಡರಿ ಸಿಡಿಸಿದರೂ 24ರ ಗಡಿ ದಾಟಲಿಲ್ಲ. ರಾಯುಡು, ಜಾಧವ್‌, ಧೋನಿ ಕೂಡ ವಿಫ‌ಲರಾದರು. 15.4 ಓವರ್‌ಗಳಲ್ಲಿ 121ಕ್ಕೆ 5 ವಿಕೆಟ್‌ ಬಿತ್ತು. ಈ ಹಂತದಲ್ಲಿ ಕೆಕೆಆರ್‌ ಮೇಲುಗೈ ಸಾಧಿಸುವ ಸೂಚನೆ ನೀಡಿತು. ಆದರೆ ರೈನಾ-ಜಡೇಜ ಅಜೇಯರಾಗಿ ಉಳಿದು ಚೆನ್ನೈಯನ್ನು ದಡ ಮುಟ್ಟಿಸಿದರು. ರೈನಾ 42 ಎಸೆತಗಳಿಂದ 58 ರನ್‌ (7 ಬೌಂಡರಿ, 1 ಸಿಕ್ಸರ್‌), ಜಡೇಜ 17 ಎಸೆತಗಳಿಂದ 31 ರನ್‌ (5 ಬೌಂಡರಿ) ಬಾರಿಸಿದರು.

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಸಿ ಠಾಕೂರ್‌ ಬಿ ತಾಹಿರ್‌ 82
ಸುನೀಲ್‌ ನಾರಾಯಣ್‌ ಸಿ ಡು ಪ್ಲೆಸಿಸ್‌ ಬಿ ಸ್ಯಾಂಟ್ನರ್‌ 2
ನಿತೀಶ್‌ ರಾಣಾ ಸಿ ಡು ಪ್ಲೆಸಿಸ್‌ ಬಿ ತಾಹಿರ್‌ 21
ರಾಬಿನ್‌ ಉತ್ತಪ್ಪ ಸಿ ಡು ಪ್ಲೆಸಿಸ್‌ ಬಿ ತಾಹಿರ್‌ 0
ದಿನೇಶ್‌ ಕಾರ್ತಿಕ್‌ ಸಿ ಡು ಪ್ಲೆಸಿಸ್‌ ಬಿ ಠಾಕೂರ್‌ 18
ಆ್ಯಂಡ್ರೆ ರಸೆಲ್‌ ಸಿ ಶೋರಿ ಬಿ ತಾಹಿರ್‌ 10
ಶುಭಮನ್‌ ಗಿಲ್‌ ಸಿ ಜಡೇಜ ಬಿ ಠಾಕೂರ್‌ 15
ಪೀಯೂಷ್‌ ಚಾವ್ಲಾ ಔಟಾಗದೆ 4
ಕುಲದೀಪ್‌ ಯಾದವ್‌ ರನೌಟ್‌ 0
ಇತರ 9
ಒಟ್ಟು (8 ವಿಕೆಟಿಗೆ) 161
ವಿಕೆಟ್‌ ಪತನ: 1-38, 2-79, 3-80, 4-122, 5-132, 6-150, 7-161, 8-161.
ಬೌಲಿಂಗ್‌: ದೀಪಕ್‌ ಚಹರ್‌ 4-0-36-0
ಶಾದೂìಲ್‌ ಠಾಕೂರ್‌ 4-0-18-2
ಮಿಚೆಲ್‌ ಸ್ಯಾಂಟ್ನರ್‌ 4-0-30-1
ರವೀಂದ್ರ ಜಡೇಜ 4-0-49-0
ಇಮ್ರಾನ್‌ ತಾಹಿರ್‌ 4-0-27-4

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಎಲ್‌ಬಿಡಬ್ಲ್ಯು ಗರ್ನಿ 6
ಫಾ ಡು ಪ್ಲೆಸಿಸ್‌ ಬಿ ನಾರಾಯಣ್‌ 24
ಸುರೇಶ್‌ ರೈನಾ ಔಟಾಗದೆ 58
ಅಂಬಾಟಿ ರಾಯುಡು ಸಿ ಉತ್ತಪ್ಪ ಬಿ ಚಾವ್ಲಾ 5
ಕೇದಾರ್‌ ಜಾಧವ್‌ ಎಲ್‌ಬಿಡಬ್ಲ್ಯು ಚಾವ್ಲಾ 20
ಎಂ.ಎಸ್‌. ಧೋನಿ ಎಲ್‌ಬಿಡಬ್ಲ್ಯು ನಾರಾಯಣ್‌ 16
ರವೀಂದ್ರ ಜಡೇಜ ಔಟಾಗದೆ 31
ಇತರ 2
ಒಟ್ಟು (19. 4 ಓವರ್‌ಗಳಲ್ಲಿ 5 ವಿಕೆಟಿಗೆ) 162
ವಿಕೆಟ್‌ ಪತನ: 1-29, 2-44, 3-61, 4-81, 5-121.
ಬೌಲಿಂಗ್‌: ಪ್ರಸಿದ್ಧ್ ಕೃಷ್ಣ 4-0-30-0
ಹ್ಯಾರಿ ಗರ್ನಿ 4-0-37-1
ಆ್ಯಂಡ್ರೆ ರಸೆಲ್‌ 1-0-16-0
ಸುನೀಲ್‌ ನಾರಾಯಣ್‌ 4-1-19-2
ಕುಲದೀಪ್‌ ಯಾದವ್‌ 3-0-28-0
ಪೀಯೂಷ್‌ ಚಾವ್ಲಾ 3.4-0-32-2


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ