ಎಲ್ಲರೂ ಹೊಣೆಗಾರಿಕೆ ಹೊತ್ತುಕೊಂಡರು: ಶ್ರೇಯಸ್‌ ಅಯ್ಯರ್‌

Team Udayavani, May 12, 2019, 6:00 AM IST

ವಿಶಾಖಪಟ್ಟಣ: ಈ ಬಾರಿಯ ಆವೃತ್ತಿಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಮುಂದಾಳತ್ವ ವಹಿಸಿಕೊಂಡು ಜವಾಬ್ದಾರಿಯುತ ಆಟವಾಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರದರ್ಶನದ ಸಾರಾಂಶವನ್ನು ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

ಈ ಆವೃತ್ತಿಯನ್ನು ಹೊಸ ಹೆಸರಿನೊಂದಿಗೆ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ನೂತನ ಕೋಚ್‌ ರಿಕಿ ಪಾಂಟಿಂಗ್‌ ಮತ್ತು ಸಲಹೆಗಾರ ಸೌರವ್‌ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ತನ್ನ ಅದೃಷ್ಟವನ್ನು ಬದಲಾಯಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ
“ಮುಂಬೈ ವಿರುದ್ಧದ ಪಂದ್ಯದಿಂದ ನಾವು ಈ ಕೂಟ ಆರಂಭಿಸಿದ ರೀತಿ… ರಿಷಭ್‌ ಪಂತ್‌ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಉತ್ತಮ ಆರಂಭ ಪಡೆದಿದ್ದರು. ಅಲ್ಲಿಂದ ಪ್ರತಿ ಪಂದ್ಯದಲ್ಲೂ ಪ್ರತಿಯೊಬ್ಬ ಆಟಗಾರ ಕೂಡ ಜವಾಬ್ದಾರಿ ವಹಿಸಿಕೊಂಡರು. ಲೀಗ್‌ ಹಂತದಲ್ಲಿ ನಮ್ಮ ಪ್ರದರ್ಶನ ಅತ್ಯುತ್ತಮವಾಗಿತ್ತು. ಕಳೆದ ಆವೃತ್ತಿ ನಮಗೆ ನಿರಾಶಾದಾಯಕವಾಗಿತ್ತು. ಆದರೆ ಈ ಬಾರಿಯ ಪ್ರದರ್ಶನ ತೃಪ್ತಿ ನೀಡಿದೆ. ಪ್ರತಿಯೊಬ್ಬ ಆಟಗಾರನು ಮುಂದಾಳತ್ವ ವಹಿಸಿಕೊಂಡು ಈ ಋತುವಿನ ಕೊನೆಯ ಪಂದ್ಯದವರೆಗೂ ಜವಾಬ್ದಾರಿಯುತ ಆಟ ವಾಡಿರುವುದು ತಂಡದ ಯಶಸ್ಸಿಗೆ ಕಾರಣ’ ಎಂದು ಶ್ರೇಯಸ್‌ ಹೇಳಿದ್ದಾರೆ.

ಈ ಬಾರಿಯ ಲೀಗ್‌ ಅನ್ನು ಮುಂಬೈ ಮತ್ತು ಚೆನ್ನೈ ತಂಡದೊಂದಿಗೆ 18 ಅಂಕಗಳಿಂದ ಕೊನೆಗೊಳಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 7 ವರ್ಷಗಳ ಅನಂತರ ನಾಕೌಟ್‌ ಹಂತ ಪ್ರವೇಶಿಸಿತ್ತು. ನಾಕೌಟ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ಗೆ ಸೋಲುಣಿಸಿತ್ತು. ಆದರೆ ಶುಕ್ರವಾರ ನಡೆದ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ 6 ವಿಕೆಟ್‌ಗಳ ಸೋಲು ಅನುಭವಿಸಿ ಕೂಟದಿಂದ ಹೊರನಡೆದಿದೆ.

ಚೆನ್ನೈ ವಿರುದ್ಧ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟಿಗೆ 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ 19 ಓವರ್‌ಗಳಲ್ಲಿ 4 ವಿಕೆಟಿಗೆ 151 ರನ್‌ ಬಾರಿಸಿ ಗುರಿ ತಲುಪಿ 8ನೇ ಬಾರಿಗೆ ಲೀಗ್‌ನ ಫೈನಲ್‌ ಪ್ರವೇಶಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ (5), ಧವನ್‌ (18), ಅಯ್ಯರ್‌ (13) ಅವರ ವಿಕೆಟ್‌ಗಳನ್ನು ಬೇಗನೇ ಕಳೆದು ಸಂಕಷ್ಟಕ್ಕೆ ಸಿಲುಕಿದ ಡೆಲ್ಲಿ 100 ರನ್‌ಗಳ ಗಡಿ ದಾಟುವುದು ಅನುಮಾನವಾಗಿತ್ತು. ಆದರೆ ಕಾಲಿನ್‌ ಮುನ್ರೊ (27), ರಿಷಭ್‌ ಪಂತ್‌ (38) ತಾಳ್ಮೆಯ ಆಟವಾಡಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ ಇವರಿಬ್ಬರ ನಿರ್ಗಮನದ ಅನಂತರ ಬಂದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ಡೆಲ್ಲಿ ಕೇವಲ 147 ರನ್‌ಗೆ ಇನ್ನಿಂಗ್ಸ್‌ ಕೊನೆಗೊಳಿಸಿತು.

ಚೆನ್ನೈ ಇನ್ನಿಂಗ್ಸ್‌ ವೇಳೆ ಆರಂಭಕಾರರಾದ ಫಾ ಡು ಪ್ಲೆಸಿಸ್‌ (50), ಶೇನ್‌ ವಾಟ್ಸನ್‌ (50) ಅತ್ಯುತ್ತಮ ಆಟ ವಾಡಿದ ಕಾರಣ ತಂಡ ಸುಲಭವಾಗಿ ಗುರಿ ತಲುಪಿತು. ಉಳಿದ ಆಟಗಾರರಲ್ಲಿ ಸುರೇಶ್‌ ರೈನಾ (11), ಅಂಬಾಟಿ ರಾಯುಡು (ಅಜೇಯ 20), ಧೋನಿ (9), ಅಲ್ಪ ಕಾಣಿಕೆ ನೀಡಿ ತಂಡದ ಗೆಲುವಿಗೆ ಕಾರಣರಾದರು. ಫಾ ಡು ಪ್ಲೆಸಿಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಡೆಲ್ಲಿ ಕ್ಯಾಪಿಟಲ್ಸ್‌-9 ವಿಕೆಟಿಗೆ 147, ಚೆನ್ನೈ ಸೂಪರ್‌ ಕಿಂಗ್ಸ್‌ – 19 ಓವರ್‌ಗಳಲ್ಲಿ 4 ವಿಕೆಟಿಗೆ 151 (ಫಾ ಡು ಪ್ಲೆಸಿಸ್‌ 50, ಶೇನ್‌ ವಾಟ್ಸನ್‌ 50, ಅಂಬಾಟಿ ರಾಯುಡು ಔಟಾಗದೆ 20, ಟ್ರೆಂಟ್‌ ಬೌಲ್ಟ್ 20ಕ್ಕೆ1, ಅಮಿತ್‌ ಮಿಶ್ರಾ 21ಕ್ಕೆ1).
ಪಂದ್ಯಶ್ರೇಷ್ಠ: ಫಾ ಡು ಪ್ಲೆಸಿಸ್‌.

ಎಲ್ಲ ಕ್ರೆಡಿಟ್‌ ಬೌಲರ್‌ಗಳಿಗೆ ಸಲ್ಲಬೇಕು: ಧೋನಿ
ಡೆಲ್ಲಿ ವಿರುದ್ಧ ಅಲ್‌ರೌಂಡ್‌ ಪ್ರದರ್ಶನ ನೀಡಿ 8ನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌. ಧೋನಿ ಸಂತಸ ವ್ಯಕ್ತಪಡಿಸಿದ್ದಾರೆ.
“ಇಂದು ತಂಡದಿಂದ ಬಂದ ಪ್ರತಿಕ್ರಿಯೆ ಅದ್ಭುತವಾಗಿತ್ತು. 148 ರನ್‌ಗಳ ಗುರಿ ತಲುಪಲು ನಮ್ಮ ಬ್ಯಾಟಿಂಗ್‌ ಶೈಲಿ ಉತ್ತಮವಾಗಿತ್ತು. ಪಂದ್ಯಕ್ಕೆ ತಿರುವು ನೀಡಿದ್ದು ಸ್ಪಿನ್ನರ್‌ಗಳು. ಬೇಕಾದ ಸಂದರ್ಭದಲ್ಲೇ ಅವರು ವಿಕೆಟ್‌ ಕೀಳಲಾರಂಭಿಸಿದರು. ಎಲ್ಲ ಕ್ರೆಡಿಟ್‌ಗಳು ಬೌಲರ್‌ಗಳಿಗೆ ಸಲ್ಲಬೇಕು. ನಾಯಕನಾಗಿ ನನಗೆ ಏನು ಬೇಕೆಂದು ಅವರ ಬಳಿ ಹೇಳಬಹುದಷ್ಟೇ. ಹೇಗೆ ಬೌಲ್‌ ಮಾಡಬೇಕು ಎಂಬುದು ಅವರಿಗೆ ತಿಳಿದಿರಬೇಕು. ಈ ಆವೃತ್ತಿಯಲ್ಲಿ ನಾವು ಎಲ್ಲಿದ್ದೇವೆಯೇ ಅದಕ್ಕೆ ಕಾರಣ ನಮ್ಮ ಬೌಲಿಂಗ್‌ ವಿಭಾಗ. ಈ ವಿಭಾಗಕ್ಕೆ ನನ್ನ ಧನ್ಯವಾದಗಳು’ ಎಂದು ಧೋನಿ ಹೇಳಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
-ಚೆನ್ನೈ ಸೂಪರ್‌ಕಿಂಗ್ಸ್‌ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ ಪ್ರವೇಶಿಸಿದ ತಂಡವೆನಿಸಿದೆ (8). ಈ ಆವೃತ್ತಿ ಸೇರಿದಂತೆ ಮುಂಬೈ ಇಂಡಿಯನ್ಸ್‌ ವಿವಿಧ ಆವೃತ್ತಿಗಳಲ್ಲಿ 5 ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ವಾಸ್ತವವಾಗಿ ಚೆನ್ನೈ ಆಡಿರುವ 10 ಆವೃತ್ತಿಗಳಲ್ಲೂ ಫ್ಲೇ ಆಫ್/ನಾಕೌಟ್‌ ಹಂತವನ್ನು ತಲುಪಿದೆ.
– ಡೆಲ್ಲಿ ಕ್ಯಾಪಿಟಲ್ಸ್‌/ಡೇರ್‌ಡೇವಿಲ್ಸ್‌ ಐಪಿಎಲ್‌ನಲ್ಲಿ ಪ್ರತಿಯೊಂದು ಆವೃತ್ತಿಗಳಲ್ಲೂ ಆಡಿದ್ದರೂ ಇಲ್ಲಿಯವರೆಗೆ ಫೈನಲ್‌ನಲ್ಲಿ ಕಾಣಿಸಿಕೊಂಡಿಲ್ಲ. 5 ಅಥವಾ ಅದಕ್ಕಿಂತ ಹೆಚ್ಚು ಆವೃತ್ತಿಗಳಲ್ಲಿ ಆಡಿರುವ ಉಳಿದ 8 ತಂಡಗಳು ಒಂದು ಬಾರಿಯಾದರೂ ಫೈನಲ್‌ ಪ್ರವೇಶಿಸಿವೆ.
– ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ನಲ್ಲಿ 100ನೇ ಜಯ ಸಾಧಿಸಿತು. ಈ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ 2ನೇ ತಂಡ ಎಂದು ಅನಿಸಿಕೊಂಡಿತು. ಇದೇ ಆವೃತ್ತಿಯ ಆರಂಭದಲ್ಲಿ ಮುಂಬೈ ಇಂಡಿಯನ್ಸ್‌ ಈ ಮೈಲುಗಲ್ಲು ಸಾಧಿಸಿತ್ತು.
– ಡೆಲ್ಲಿ ಕ್ಯಾಪಿಟಲ್ಸ್‌ಗೆ ಐಪಿಎಲ್‌ನಲ್ಲಿ 93 ಸೋಲು ಸೇರಿ ಟಿ20 ವಿಭಾಗದಲ್ಲಿ 100ನೇ ಸೋಲಾಗಿದೆ. ಡೆಲ್ಲಿ 100ನೇ ಸೋಲು ಕಂಡ ವಿಶ್ವದ 4ನೇ ಮತ್ತು ಭಾರತದ 2ನೇ ತಂಡವಾಗಿದೆ. ರಾಯಲ್ಸ್‌ ಚಾಲೆಂಜರ್ ಬೆಂಗಳೂರು ಕೂಡ ಟಿ20 ವಿಭಾಗದಲ್ಲಿ 100 ಪಂದ್ಯಗಳಲ್ಲಿ ಸೋತಿದೆ.
– ಹರ್ಭಜನ್‌ ಸಿಂಗ್‌ ಶೆಫೇìನ್‌ ರುದರ್‌ಫೋರ್ಡ್‌ ಅವರ ವಿಕೆಟ್‌ ಕೀಳುವ ಮೂಲಕ ಐಪಿಎಲ್‌ನಲ್ಲಿ 150 ವಿಕೆಟ್‌ ಸಂಪಾದಿಸಿದರು. ಈ ಮೂಲಕ ಈ ಲೀಗ್‌ನಲ್ಲಿ 150 ವಿಕೆಟ್‌ ಕಿತ್ತ ವಿಶ್ವದ 4ನೇ ಮತ್ತು ಭಾರತದ 3ನೇ ಕ್ರಿಕೆಟಿಗ ಎಂದು ಎನಿಸಿಕೊಂಡರು.
-ಹರ್ಭಜನ್‌ ಸಿಂಗ್‌ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅತೀ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡರು (24). ಈ ಪಂದ್ಯಕ್ಕೂ ಮುನ್ನ ಹರ್ಭಜನ್‌ 22 ವಿಕೆಟ್‌ಗಳಿಂದ ಲಸಿತ ಮಾಲಿಂಗ್‌ ಅವರೊಂದಿಗೆ ಜಂಟಿ ಸ್ಥಾನ ಪಡೆದಿದ್ದರು.
– ಟ್ರೆಂಟ್‌ ಬೌಲ್ಟ್ ರವೀಂದ್ರ ಜಡೇಜಾ ಅವರ ಅಂತಿಮ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಟಿ20 ಕ್ರಿಕೆಟಿನಲ್ಲಿ ಚೊಚ್ಚಲ ಬೌಂಡರಿ ಹೊಡೆದರು. ಟಿ20ರಲ್ಲಿ 60 ಎಸೆತಗಳನ್ನು ಎದುರಿಸಿರುವ ಬೌಲ್ಟ್ ಇಲ್ಲಿಯವರೆಗೆ ಒಂದೂ ಸಿಕ್ಸರ್‌ ಅಥವಾ ಬೌಂಡರಿ ಹೊಡೆದಿರಲಿಲ್ಲ.
– ಡೆಲ್ಲಿ ಕ್ಯಾಪಿಟಲ್ಸ್‌ ತಂಡದ 9 ಆಟಗಾರರು ಈ ಪಂದ್ಯದಲ್ಲಿ ಕನಿಷ್ಠ ಒಂದು ಬೌಂಡರಿಯನ್ನು ಸಿಡಿಸಿದ್ದಾರೆ. ಇದು ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ ಅತೀ ಹೆಚ್ಚು ಆಟಗಾರರು ಬೌಂಡರಿ ಬಾರಿಸಿದ ಜಂಟಿ ದಾಖಲೆಯಾಗಿದೆ. ಐಪಿಎಲ್‌ನಲ್ಲಿ ಇದು 8ನೇ ನಿದರ್ಶನವಾಗಿದೆ. ಇದಕ್ಕೂ ಮುನ್ನ ರಾಜಸ್ಥಾನ್‌ ರಾಯಲ್ಸ್‌ ತವರಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಈ ಸಾಧನೆ ಮಾಡಿತ್ತು.
– ದೀಪಕ್‌ ಚಹರ್‌ ಐಪಿಎಲ್‌ನ 4 ಮುಖಾಮುಖೀಯಲ್ಲೂ ಪೃಥ್ವಿ ಶಾ ಅವರನ್ನು ಔಟ್‌ ಮಾಡಿದ್ದಾರೆ. ದೀಪಕ್‌ ಅವರ 29 ಎಸೆತಗಳಲ್ಲಿ 27 ರನ್‌ ಗಳಿಸಿರುವ ಪೃಥ್ವಿ 4 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ