ಗಿಲ್‌ ಗೆಲುವಿನ ರೂವಾರಿ: ದಿನೇಶ್‌ ಕಾರ್ತಿಕ್‌

Team Udayavani, May 5, 2019, 6:25 AM IST

ಮೊಹಾಲಿ: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಜೇಯ 65 ರನ್‌ ಬಾರಿಸಿದ ಶುಭಮನ್‌ ಗಿಲ್‌ ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡರಲ್ಲದೇ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು ಎಂಬುದಾಗಿ ಕೆಕೆಆರ್‌ ತಂಡದ ನಾಯಕ ದಿನೇಶ್‌ ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಅನಂತರ ಕಾರ್ತಿಕ್‌ ಈ ಹೇಳಿಕೆ ನೀಡಿದರು.

“ಶುಭಮನ್‌ ಗಿಲ್‌ಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಅವಕಾಶ ನೀಡಿದ್ದು ನ್ಯಾಯೋಚಿತ ನಿರ್ಧಾರವಾಗಿದೆ. ಈ ಅವಕಾಶವನ್ನು ಗಿಲ್‌ ಎರಡು ಕೈಗಳಲ್ಲೂ ಬಾಚಿಕೊಂಡರು. ಗಿಲ್‌ ಮತ್ತು ಲಿನ್‌ ಅವರ ಅತ್ಯುತ್ತಮ ಆರಂಭದಿಂದಾಗಿ ತಂಡ ಗೆಲುವಿಗೆ ಹತ್ತಿರವಾಯಿತು. ಎಲ್ಲ ಬ್ಯಾಟ್ಸ್‌ಮೆನ್‌ ಉತ್ತಮ ಪ್ರದರ್ಶನ ನೀಡಿದ್ದಾರೆ’ ಎಂದು ಕಾರ್ತಿಕ್‌ ಹೇಳಿದ್ದಾರೆ.

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 183 ರನ್‌ ದಾಖಲಿಸಿತು. ಈ ಗುರಿಯನ್ನು ಕೆಕೆಆರ್‌ 18 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ ತಲುಪಿ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಮತ್ತೆ ಜೀವಂತವಾಗಿರಿಸಿದೆ.

ಪಂಜಾಬ್‌ ಇನ್ನಿಂಗ್ಸ್‌ ವೇಳೆ ಬಿಗ್‌ ಹಿಟ್ಟರ್‌ಗಳಾದ ಕ್ರಿಸ್‌ ಗೇಲ್‌ ಮತ್ತು ಕೆ.ಎಲ್‌. ರಾಹುಲ್‌ ಅವರ ವಿಕೆಟನ್ನು ಬೇಗನೇ ಕಿತ್ತ ಕೆಕೆಆರ್‌ನ ಬೌಲರ್‌ಗಳು ಆನಂತರ ಘಾತಕವಾಗಿ ಕಾಡಲಿಲ್ಲ. ಅಗರ್ವಾಲ್‌ (36), ನಿಕೋಲಸ್‌ ಪೂರನ್‌ (48), ಮನ್‌ದೀಪ್‌ ಸಿಂಗ್‌ (25) ಮತ್ತು ಸ್ಯಾಮ್‌ ಕರನ್‌ (ಅಜೇಯ 55) ಕೆಕೆಆರ್‌ ಬೌಲರ್‌ಗಳ ಬೆಂಡೆತ್ತುವಲ್ಲಿ ಯಶಸ್ವಿಯಾದರು.

ಕೆಕೆಆರ್‌ ಇನ್ನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌-ಕ್ರಿಸ್‌ ಲೀನ್‌ 62 ರನ್‌ಗಳ ಜತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಜೇಯರಾಗಿ ಉಳಿದ ಶುಭಮನ್‌ ಗಿಲ್‌ 49 ಎಸೆತಗಳಲ್ಲಿ 65 ರನ್‌ ಬಾರಿಸಿದರು (2 ಸಿಕ್ಸರ್‌, 5 ಬೌಂಡರಿ). ಉಳಿದಂತೆ ಲಿನ್‌ (46), ಉತ್ತಪ್ಪ (22), ರಸೆಲ್‌ (24), ಕಾರ್ತಿಕ್‌ (ಅಜೇಯ 21) ಉತ್ತಮವಾಗಿ ಆಡಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ಸಲ್ಲಿಸಿದರು.

ಪಂಜಾಬ್‌ ಇನ್ನಿಂಗ್‌ ವೇಳೆ ಕೆಕೆಆರ್‌ ತಂಡದ ಕಪ್ತಾನ ಕಾರ್ತಿಕ್‌ ಕೋಪಗೊಂಡು ಬೌಲರ್‌ ಮತ್ತು ಫೀಲ್ಡರ್ಗಳ ಮೇಲೆ ಕಿರು ಚಾಡುತ್ತಿರುವುದು ಕಂಡು ಬಂದಿತ್ತು.

ಬೌಲಿಂಗ್‌ ಬಗ್ಗೆ ಕಾರ್ತಿಕ್‌ ಅಸಮಾಧಾನ
ಕೆಕೆಆರ್‌ನ ಬೌಲಿಂಗ್ಸ್‌ ಮತ್ತು ಫೀಲ್ಡಿಂಗ್‌ ಕುರಿತು ಕಾರ್ತಿಕ್‌ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಇದುವೇ ಪಂದ್ಯ ವೇಳೆ ಅವರು ಕೋಪ ಗೊಳ್ಳಲು ಕಾರಣವಾಗಿದೆ.

“ಬೌಲರ್‌ಗಳು ಮತ್ತು ಫೀಲ್ಡರ್‌ಗಳ ಪ್ರದರ್ಶನದಿಂದ ನನಗೆ ಖುಷಿಯಾಗಿಲ್ಲ. ಆ ಸಂದರ್ಭ ನನ್ನ ಭಾವನೆ ಏನಾಗಿತ್ತು ಎಂಬುದು ಆಟಗಾರರಾಗಿ ಗೊತ್ತಾಗಬೇಕು ಎಂಬ ಕಾರಣಕ್ಕೆ ಕಿರುಚಾಡುತ್ತಿದ್ದೆ. ಹೆಚ್ಚಿನ ಆಟಗಾರರು ನನ್ನ ಕೋಪ ಎಷ್ಟಿದೆ ಎಂಬುದನ್ನು ನೋಡಿಲ್ಲ. ನಮ್ಮ ಆಟಗಾರರಿಂದ ಉತ್ತಮ ಪ್ರದರ್ಶನ ಬರಲು ನಾನು ಕೋಪ ಮಾಡಬೇಕಾದರೆ ಮಾಡುವೆ’ ಎಂದು ಕಾರ್ತಿಕ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌- 6 ವಿಕೆಟಿಗೆ 183. ಕೆಕೆಆರ್‌ 18 ಓವರ್‌ಗಳಲ್ಲಿ 3 ವಿಕೆಟಿಗೆ 185 (ಗಿಲ್‌ ಔಟಾಗದೆ 65, ಲಿನ್‌ 46, ರಸೆಲ್‌ 24, ಅಶ್ವಿ‌ನ್‌ 38ಕ್ಕೆ1, ಟೈ 41ಕ್ಕೆ1)
ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಕೆಕೆಆರ್‌ 184 ರನ್‌ ಚೇಸ್‌ ಮಾಡಿರುವುದು ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಎರಡನೇ ಅತ್ಯಧಿಕ ಮೊತ್ತದ ಚೇಸಿಂಗ್‌ ಆಗಿದೆ. 2017ರ ಆವೃತ್ತಿಯಲ್ಲಿ ಗುಜರಾತ್‌ ಲಯನ್ಸ್‌ ತಂಡವು 190 ರನ್‌ ಗುರಿಯನ್ನು 4 ವಿಕೆಟ್‌ ನಷ್ಟದಲ್ಲಿ ಸಾಧಿಸಿತ್ತು.

– ಕೆಕೆಆರ್‌ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಪಂಜಾಬ್‌ ತಂಡವನ್ನು 4 ಬಾರಿ ಸೋಲಿಸಿದೆ. ಇದು ಪಂಜಾಬ್‌ ವಿರುದ್ಧದ ಜಯದಲ್ಲಿ ಜಂಟಿ ದಾಖಲೆಯಾಗಿದೆ. ಮುಂಬೈ ಇಂಡಿಯನ್ಸ್‌, ಸನ್‌ರೈಸರ್ ಹೈದರಾಬಾದ್‌ ಮತ್ತು ಆರ್‌ಸಿಬಿ ತಂಡಗಳು ಈ ಹಿಂದೆ ಪಂಜಾಬ್‌ ತಂಡವನ್ನು ಮೊಹಾಲಿಯಲ್ಲಿ 4 ಬಾರಿ ಸೋಲಿಸಿದ್ದವು.

– ಪಂಜಾಬ್‌-ಕೆಕೆಆರ್‌ ನಡುವಿನ ಈ ಪಂದ್ಯ ಆ್ಯಂಡ್ರೆ ರಸೆಲ್‌ಗೆ 300ನೇ ಟಿ20 ಪಂದ್ಯವಾಗಿತ್ತು. ಅವರು 300 ಟಿ20 ಪಂದ್ಯಗಳನ್ನಾಡಿದ ಪಟ್ಟಿಯಲ್ಲಿ ವಿಶ್ವದ 18ನೇ ಮತ್ತು ವೆಸ್ಟ್‌ಇಂಡೀಸ್‌ನ 6ನೇ ಆಟಗಾರ ಆಗಿದ್ದಾರೆ. 300 ಪ್ಲಸ್‌ ಟಿ20 ಪಂದ್ಯಗಳನ್ನಾಡಿದ 6 ಕೆರೆಬಿಯನ್‌ ಆಟಗಾರರಲ್ಲಿ ಮೂವರು (ಕ್ರಿಸ್‌ ಗೇಲ್‌, ಸುನೀಲ್‌ ನಾರಾಯಣ್‌ ಮತ್ತು ರಸೆಲ್‌) ಈ ಐಪಿಎಲ್‌ನಲ್ಲಿ ಆಡಿದ್ದಾರೆ.

– ಶುಭ್‌ಮನ್‌ ಗಿಲ್‌ ಐಪಿಎಲ್‌ನಲ್ಲಿ 4ನೇ ಅರ್ಧಶತಕ ಬಾರಿಸಿದರು. 20 ವರ್ಷಕ್ಕಿಂತ ಮುಂಚಿತವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ. ಈ ಮೊದಲು ನಾಲ್ಕು ಆಟಗಾರರು ಐಪಿಎಲ್‌ನಲ್ಲಿ 3 ಫಿಫ್ಟಿ ಪ್ಲಸ್‌ ರನ್‌ ಹೊಡೆದಿದ್ದಾರೆ. ಇವರೆಂದರೆ ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ರಿಷಬ್‌ ಪಂತ್‌ ಮತ್ತು ಪೃಥ್ವಿ ಶಾ.

– ಶುಭ್‌ಮನ್‌ ಗಿಲ್‌ ಅವರ ಅಜೇಯ 65 ರನ್‌ ಗಳಿಕೆ ಸ್ಥಳೀಯ ತಂಡದ ಆಟಗಾರನೋರ್ವ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ವಿರುದ್ಧ ತವರಿನಲ್ಲಿ ಹೊಡೆದ ವೈಯಕ್ತಿಕ ಗರಿಷ್ಠ ರನ್‌ ಆಗಿದೆ. 2016ರಲ್ಲಿ ಸನ್‌ರೈಸರ್ ಪರ ಯುವರಾಜ್‌ ಸಿಂಗ್‌ ಅವರ ಅಜೇಯ 42 ರನ್‌ ಹಿಂದಿನ ಗರಿಷ್ಠ ಗಳಿಕೆಯಾಗಿತ್ತು. 2013ರಲ್ಲಿ ದಿಲ್ಲಿಯಲ್ಲಿ ವಿರಾಟ್‌ ಕೊಹ್ಲಿ ಡೆಲ್ಲಿ ಡೇರ್‌ಡೇವಿಲ್ಸ್‌ ವಿರುದ್ಧ 99 ರನ್‌ ಬಾರಿಸಿದ್ದರು. ಇದು ತವರಿನ ಮೈದಾನದಲ್ಲಿ ತವರಿನ ರಾಜ್ಯ ತಂಡದವೊಂದರ ಫ್ರಾಂಚೈಸಿ ವಿರುದ್ಧ ಆಟಗಾರನೊಬ್ಬ ಹೊಡೆದ ಅತೀ ಹೆಚ್ಚು ರನ್‌ ಆಗಿದೆ.

– ರವಿಚಂದ್ರನ್‌ ಅಶ್ವಿ‌ನ್‌ ಈ ಬಾರಿಯ ಐಪಿಎಲ್‌ನಲ್ಲಿ 2ನೇ ಬಾರಿಗೆ ಶೂನ್ಯಕ್ಕೆ ಔಟಾದರು. ಒಟ್ಟು 52 ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಅಶ್ವಿ‌ನ್‌ 9 ಬಾರಿ ಸೊನ್ನೆ ಸುತ್ತಿದ್ದಾರೆ. 50 ಅಥವಾ ಅದಕ್ಕಿಂತ ಹೆಚ್ಚು ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಅಶ್ವಿ‌ನ್‌ಗೆ 2ನೇ ಸ್ಥಾನ. ಅಮಿತ್‌ ಮಿಶ್ರಾ ಈ ಪಟ್ಟಿಯಲ್ಲಿ ಮೊದಲಿಗರು. ಅವರು 54 ಇನ್ನಿಂಗ್ಸ್‌ನಲ್ಲಿ 10 ಬಾರಿ ಡಕ್‌ಔಟ್‌ ಆಗಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ