4ನೇ ಐಪಿಎಲ್‌ ಕಿರೀಟಕ್ಕೆ ಮುಂಬೈ-ಚೆನ್ನೈ ಫೈಟ್‌

8ನೇ ಬಾರಿ ಫೈನಲ್‌ ತಲುಪಿದ ಚೆನ್ನೈ; 3 ಬಾರಿ ಚಾಂಪಿಯನ್‌ ಸಾಧನೆ;5ನೇ ಬಾರಿ ಮುಂಬೈ ಫೈನಲ್‌ಗೆ ; 3 ಬಾರಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ

Team Udayavani, May 12, 2019, 6:00 AM IST

ಹೈದರಾಬಾದ್: ಐಪಿಎಲ್‌ ಲೀಗ್‌ನ ಯಶಸ್ವಿ ಹಾಗೂ ಬಲಿಷ್ಠ ತಂಡಗಳು ಎಂದು ಕರೆಸಿಕೊಂಡಿರುವ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ರವಿವಾರ ಫೈನಲ್‌ ಹಣಾಹಣಿ ನಡೆಯಲಿದೆ. 4ನೇ ಬಾರಿಗೆ ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖೀಯಾಗು ತ್ತಿದ್ದು, ಚಾಂಪಿಯನ್‌ ಪಟ್ಟ ಯಾರಿಗೆ ದೊರೆಯ ಲಿದೆ ಎಂಬುದು ಸದ್ಯದ ಕುತೂಹಲ.

ಹೈದರಾಬಾದ್‌ನ “ರಾಜೀವ್‌ ಗಾಂಧಿ’ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದ ಮೂಲಕ 12ನೇ ವರ್ಣರಂಜಿತ ಐಪಿಎಲ್‌ ಆವೃತ್ತಿಗೆ ತೆರೆಬೀಳಲಿದೆ. 8ನೇ ಬಾರಿಗೆ ಫೈನಲ್‌ ಪ್ರವೇಶಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ 3 ಬಾರಿ ಚಾಂಪಿಯನ್‌ ಆಗಿದ್ದರೆ, 5ನೇ ಬಾರಿ ಫೈನಲ್‌ ಪ್ರವೇಶಿಸಿರುವ ಮುಂಬೈ ಕೂಡ 3 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಬಾರಿ ಫೈನಲ್‌ನಲ್ಲಿ ಬಲಿಷ್ಠ ತಂಡಗಳೇ ಕಾದಾಟ ನಡೆಸುವುದರಿಂದ ವಿಜಯಲಕ್ಷ್ಮೀ ಯಾರ ಪಾಲಾಗುವುದು ಎಂದು ಹೇಳುವುದು ಕಷ್ಟ.

ಇತ್ತಂಡಗಳು 3 ಬಾರಿ ಚಾಂಪಿಯನ್‌ ಆಗಿರುವುದರಿಂದ ಈ ಬಾರಿಯ ಫೈನಲ್ಸ್‌ ಇನ್ನಷ್ಟು ರೋಚಕವಾಗಿರುವುದರಲ್ಲಿ ಸಂಶಯವಿಲ್ಲ. ಎರಡು ತಂಡಗಳಿಗೂ 4ನೇ ಬಾರಿಗೆ ಪ್ರಶಸ್ತಿ ಎತ್ತುವ ಅವಕಾಶ. ಹೀಗಾಗಿ ನಿರೀಕ್ಷೆ, ಉತ್ಸಾಹ ಬೆಟ್ಟದಷ್ಟಿದೆ. ಈ ಬಾರಿಯ ಐಪಿಎಲ್‌ ಕೂಟದ ಪ್ರದರ್ಶನ ಗಮನಿಸಿದಾಗ ಚೆನ್ನೈ ವಿರುದ್ಧದ 3 ಪಂದ್ಯಗಳಲ್ಲೂ ಮುಂಬೈ ಮೇಲುಗೈ ಸಾಧಿಸಿ ಮೆರೆದಾಡಿದೆ. ಈ 3 ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ಫೈನಲ್‌ನಲ್ಲೂ ಚೆನ್ನೈ ಮೇಲೆ ಸವಾರಿ ಮಾಡಲು ಮುಂದಾಗಿದೆ. ಆದರೆ ಚೆನ್ನೈ ತಂಡವನ್ನು ಅಲ್ಲಗಳೆಯುವಂತಿಲ್ಲ. ಅನುಭವಿ ಆಟಗಾರರನ್ನೇ ಹೊಂದಿ ರುವ ಚೆನ್ನೈ ಮುಂಬೈ ತಂಡದಷ್ಟೇ ಬಲಿಷ್ಠ. ಪಂದ್ಯಕ್ಕೆ ತಕ್ಕಂತೆ ಸಿಡಿಯಬಲ್ಲ ಆಟಗಾರರು, ಅತ್ಯುತ್ತಮ ನಾಯಕತ್ವವನ್ನು ಹೊಂದಿರುವ ಚೆನ್ನೈ ಫೈನಲ್‌ನಲ್ಲಿ ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ. ಕಳೆದ ವರ್ಷ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಸೋಲಿಸಿ ಚಾಂಪಿಯನ್‌ ಆಗಿ ಮೂಡಿ ಬಂದಿರುವ ಚೆನ್ನೈ ಮತ್ತೂಮ್ಮೆ ಚಾಂಪಿ ಯನ್‌ ಆಗಲು ಕಾದುಕುಳಿತಿದೆ.

ಚೆನ್ನೈಗೆ ಧೋನಿ ಬಲ
ಚೆನ್ನೈ ತಂಡಕ್ಕೆ ಧೋನಿ ಉಪಸ್ಥಿತಿಯೇ ಪ್ರಮುಖ ಬಲ. ತಂಡದ ಸದಸ್ಯರಲ್ಲಿ ಧೋನಿ ಹುಟ್ಟಿಸುವ ಆತ್ಮವಿಶ್ವಾಸವೇ ತಂಡದ ಪ್ರಮುಖ ಅಸ್ತ್ರ. ಎದುರಾಳಿಗಳು ಎಷ್ಟೇ ಬಲಶಾಲಿಯಾದರೂ ಧೋನಿ ಲೆಕ್ಕಾಚಾರದ ಮುಂದೆ ಮಂಕಾಗಿಬಿಡುತ್ತಾರೆ. ಇನ್ನು ಮತ್ತೆ ಪಾರ್ಮ್ ಗೆ ಮರಳಿರುವ ಫಾ ಡು ಪ್ಲೆಸಿಸ್‌, ವಾಟ್ಸನ್‌ ಭರ್ಜರಿ ಆರಂಭಿಕ ಜತೆಯಾಟ ತಂಡಕ್ಕೆ ದೊಡ್ಡ ಬಲ ತುಂಬಿದೆ. ಡೆಲ್ಲಿ ವಿರುದ್ದದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯವೇ ಇದಕ್ಕೆ ಉತ್ತಮ ಉದಾಹರಣೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವ ಅಂಬಾಟಿ ರಾಯುಡು, ಸುರೇಶ್‌ ರೈನಾ ಟಿ20 ಜೋಶ್‌ ತೋರದಿರುವುದು ಕೊಂಚ ಹಿನ್ನಡೆಯಾಗಿದೆ. ಭುಜದ ನೋವಿನಿಂದ ತಂಡದಿಂದ ಹೊರಗುಳಿದಿರುವ ಜಾಧವ್‌ ಈ ಪಂದ್ಯದಲ್ಲಿ ಮತ್ತೆ ವಾಪಸಾಗುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿ ಚಹಾರ್‌, ಬ್ರಾವೊ, ತಾಹಿರ್‌, ಜಡೇಜಾ, ಹರ್ಭಜನ್‌ ಉತ್ತಮ ಲಯದಲ್ಲಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌.

ಬಲಿಷ್ಠ ಮುಂಬೈ
ಮುಂಬೈ ತಂಡ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲೂ ಸಶಕ್ತವಾಗಿದೆ. ಬ್ಯಾಟಿಂಗ್‌ನಲ್ಲಿ ಆರಂಭ ಕಾರ ರೋಹಿತ್‌ ಶರ್ಮ ಮತ್ತು ಕ್ವಿಂಟಾನ್‌ ಡಿ ಕಾಕ್‌ ಉತ್ತಮ

ಫಾರ್ಮ್ನಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌, ಪಾಂಡ್ಯ ಬ್ರದರ್ , ಕೈರಾನ್‌ ಪೊಲಾರ್ಡ್‌ ಯಾವ ಪರಿಸ್ಥಿತಿಯಲ್ಲಿಯೂ ಸಿಡಿಯಬಲ್ಲರು.
ಈ ಪಂದ್ಯದಲ್ಲೂ ಇವರ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದುವರಿದರೆ ಮುಂಬೈ ಬೃಹತ್‌ ರನ್‌ ಪೇರಿಸುವಲ್ಲಿ ಅಥವಾ ದೊಡ್ಡ ಮೊತ್ತ ಬೆನ್ನಟ್ಟುವುದರಲ್ಲಿ ಅನುಮಾನವಿಲ್ಲ. ಉಳಿದ ತಂಡಗಳ ಬ್ಯಾಟ್ಸ್‌ಮನ್‌ಗಳು ಚೆನ್ನೈನ ಬೌಲರ್‌ಗಳಾದ ಇಮ್ರಾನ್‌ ತಾಹಿರ್‌, ಹರ್ಭಜನ್‌ ಹಾಗೂ ಜಡೇಜ ಅವರ ಬೌಲಿಂಗ್‌ಗೆ ಪರದಾಡಿದರೆ ರೋಹಿತ್‌ ಪಡೆ ಸ್ಪಿನ್‌ ಬೆದರಿಕೆಯನ್ನು ಉತ್ತಮವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿರುವುದು ತಂಡದ ಬಲ. ಮುಂಬೈನದು ಘಾತಕ ಬೌಲಿಂಗ್‌. ಲಸಿತ ಮಾಲಿಂಗ, ಜಸ್‌ ಪ್ರೀತ್‌ ಬುಮ್ರಾ, ಪಾಂಡ್ಯ ಬ್ರದರ್, ರಾಹುಲ್‌ ಚಹರ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ