ಆರ್‌ಸಿಬಿಗೆ ಪ್ಲೇ-ಆಫ್ ಚಾನ್ಸ್‌ ಇದೆಯೇ?

ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು

Team Udayavani, Apr 26, 2019, 6:05 AM IST

ಬೆಂಗಳೂರು: ಪಂಜಾಬ್‌ ವಿರುದ್ಧ ಗೆಲುವಿನ ಓಟ ಮುಂದುವರಿಸಿದ ಆರ್‌ಸಿಬಿ ತನ್ನ 4ನೇ ಜಯವನ್ನು ಒಲಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಏಳಕ್ಕೆ ತಲುಪಿದೆ. ಉಳಿದ ಮೂರೂ ಪಂದ್ಯ ಗೆದ್ದರೆ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ಚಾನ್ಸ್‌ ಇದೆಯೇ ಎಂಬುದು ಮುಂದಿನ ಕುತೂಹಲ!

ಬುಧವಾರ ರಾತ್ರಿ ಪಂಜಾಬ್‌ ವಿರುದ್ಧ 17 ರನ್ನಿನಿಂದ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಕಪ್ತಾನ ವಿರಾಟ್‌ ಕೊಹ್ಲಿ, ಕಳೆದ 5 ಪಂದ್ಯಗಳಲ್ಲಿ ನಾವು ನಾಲ್ಕನ್ನು ಗೆದ್ದಿದ್ದೇವೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ ಮುಂದಿನ ಸುತ್ತು ತಲಪುವ ಅವಕಾಶ ನಮಗೂ ಇದೆ ಎಂದಿದ್ದಾರೆ.

ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 202 ರನ್‌ ಪೇರಿಸಿ ಸವಾಲೊಡ್ಡಿದರೆ, ಪಂಜಾಬ್‌ 7 ವಿಕೆಟಿಗೆ 185 ರನ್‌ಗಳನ್ನಷ್ಟೇ ಗಳಿಸಿತು. ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಅಶ್ವಿ‌ನ್‌ ಪಡೆ ಸೋಲನುಭವಿಸಿತು.

ಸದ್ಯದ ಲೆಕ್ಕಾಚಾರ….
ಆರ್‌ಸಿಬಿ-ಪಂಜಾಬ್‌ ಪಂದ್ಯದ ಬಳಿಕ ಕಂಡುಬಂದ ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ (11 ಪಂದ್ಯ, 16 ಅಂಕ) ಮತ್ತು ಡೆಲ್ಲಿ (11 ಪಂದ್ಯ, 14 ಅಂಕ) ತಂಡಗಳ ಮುಂದಿನ ಸುತ್ತಿನ ಪಯಣ ಬಹುತೇಕ ಖಚಿತವಾಗಿದೆ. ಮುಂಬೈ 3ನೇ ಸ್ಥಾನದಲ್ಲಿದೆ (10 ಪಂದ್ಯ, 12 ಅಂಕ). ತಲಾ 10 ಅಂಕ ಹೊಂದಿರುವ ಹೈದರಾಬಾದ್‌ ಮತ್ತು ಪಂಜಾಬ್‌ 3ನೇ ಹಾಗೂ 4ನೇ ಸ್ಥಾನದಲ್ಲಿವೆ. ಕೆಕೆಆರ್‌ 10ರಲ್ಲಿ 4 ಪಂದ್ಯ ಜಯಿಸಿ ಆರರಲ್ಲಿ ಉಳಿದುಕೊಂಡಿದೆ. ಹೀಗಾಗಿ ಕೊನೆಯ 2 ಸ್ಥಾನಗಳ ಪ್ಲೇ-ಆಫ್ ಸ್ಥಾನಕ್ಕಾಗಿ 4 ತಂಡಗಳ ಸ್ಪರ್ಧೆ ಕಂಡುಬಂದಿದೆ. ಈ ತಂಡಗಳನ್ನೆಲ್ಲ ಮೀರಿಸಿ ಆರ್‌ಸಿಬಿ ಮೇಲೆ ಬಂದಿತೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಸತತ 6 ಸೋಲು ಹೊಸತಲ್ಲ!
ಸತತ 6 ಪಂದ್ಯಗಳನ್ನು ಸೋತ ಬಳಿಕ ಪ್ಲೇ ಆಫ್ಗೆ ನೆಗೆದ ನಿದರ್ಶನ ಈಗಾಗಲೇ ಆರ್‌ಸಿಬಿ ಮುಂದಿದೆ. 2016ರ ಋತುವಿನಲ್ಲಿ ಆರ್‌ಸಿಬಿ ಇಂಥದೇ ಸಂಕಟದಿಂದ ಪಾರಾಗಿ ಲೀಗ್‌ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಇಲ್ಲಿಂದ ಮುಂದುವರಿದು ಫೈನಲಿಗೂ ಲಗ್ಗೆ ಹಾಕಿತ್ತು. ಆದರೆ ಇಲ್ಲಿ ಮಾತ್ರ ಸನ್‌ರೈಸರ್ ಹೈದರಾಬಾದ್‌ಗೆ 8 ರನ್ನುಗಳಿಂದ ಶರಣಾಗಿ ಕಪ್‌ ಕಳೆದುಕೊಂಡಿತ್ತು.

ಈ ಸಲವೂ ಕೊನೆಯ ಹಂತದಲ್ಲಿ ಅದೃಷ್ಟ ಕೈಹಿಡಿದರೆ ಆರ್‌ಸಿಬಿಯಿಂದ ಪವಾಡ ನಡೆಯಬಾರದೆಂದೇನೂ ಇಲ್ಲ. ಉಳಿದ ತಂಡಗಳ ಫ‌ಲಿತಾಂಶವನ್ನು ಗಮನಿಸದೆ, ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್‌ ಏರಿಸಿಕೊಂಡರೆ ಕೊಹ್ಲಿ ಪಡೆಗೆ ಪ್ಲೇ ಆಫ್ ಅಸಾಧ್ಯವೇನಲ್ಲ. ಆದರೆ ಈ ಮೂರರಲ್ಲಿ ಒಂದು ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಹೊರಬೀಳಲಿದೆ!

ನಮ್ಮದು ಒತ್ತಡ ರಹಿತ ಆಟ
ಆರಂಭದಲ್ಲಿ ನಮಗೆ ಅದೃಷ್ಟ ಕೈಕೊಟ್ಟಿತ್ತು. ಗೆಲ್ಲಬಹುದಾಗಿದ್ದ ಪಂದ್ಯಗಳನ್ನೂ ಕಳೆದುಕೊಂಡೆವು. ಸತತ 6 ಪಂದ್ಯಗಳನ್ನು ಸೋತ ನೋವು ಎಲ್ಲರಲ್ಲೂ ಆವರಿಸಿತ್ತು. ಮೊಹಾಲಿಯಲ್ಲಿ ನಮ್ಮ ಲಕ್‌ ತಿರುಗಿತು. ನಾವು ಒತ್ತಡವನ್ನು ಹೇರಿಕೊಳ್ಳದೆ ಪ್ರತಿಯೊಂದು ಪಂದ್ಯವನ್ನೂ ಎಂಜಾಯ್‌ ಮಾಡುತ್ತಲೇ ಆಡುತ್ತಿದ್ದೇವೆ. ನಮ್ಮ ಫೀಲ್ಡಿಂಗ್‌, ಬೌಲಿಂಗ್‌ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂದು ಕೊಹ್ಲಿ ಹೇಳಿದರು.

ಪಂಜಾಬ್‌ ವಿರುದ್ಧ 175 ರನ್‌ ನಿರೀಕ್ಷೆಯಲ್ಲಿದ್ದೆವು. ಆದರೆ ಎಬಿಡಿ ಮತ್ತು ಸ್ಟೋಯಿನಿಸ್‌ ಅಮೋಘ ಆಟವಾಡಿ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಇದರಿಂದ ಲಾಭವಾಯಿತು ಎಂದರು.

ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ರವಿವಾರ ಡೆಲ್ಲಿ ವಿರುದ್ಧ ಕೋಟ್ಲಾದಲ್ಲಿ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-4 ವಿಕೆಟಿಗೆ 202. ಪಂಜಾಬ್‌-7 ವಿಕೆಟಿಗೆ 185 (ರಾಹುಲ್‌ 42, ಗೇಲ್‌ 23, ಅಗರ್ವಾಲ್‌ 35, ಮಿಲ್ಲರ್‌ 24, ಪೂರಣ್‌ 46, ಯಾದವ್‌ 36ಕ್ಕೆ 3, ಸೈನಿ 33ಕ್ಕೆ 2, ಸ್ಟೋಯಿನಿಸ್‌ 13ಕ್ಕೆ 1, ಅಲಿ 22ಕ್ಕೆ 1).

ಪಂದ್ಯಶ್ರೇಷ್ಠ: ಎಬಿ ಡಿ ವಿಲಿಯರ್.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ