ಅಷ್ಟೊಂದು ಕೆಟ್ಟ ಆವೃತ್ತಿಯಾಗಿಲ್ಲ: ವಿರಾಟ್‌ ಕೊಹ್ಲಿ

Team Udayavani, May 6, 2019, 10:26 AM IST

ಬೆಂಗಳೂರು: ಈ ಬಾರಿಯ ಐಪಿಎಲ್‌ ಕೂಟವನ್ನು ರಾಯಲ್‌ ಚಾಲೆಂಜರ್ ಬೆಂಗಳೂರು 8ನೇ ಸ್ಥಾನದಲ್ಲಿ ಕೊನೆಗೊಳಿಸಿದ್ದರೂ ತಂಡಕ್ಕೆ ಇದು ಅಷ್ಟೊಂದು ಕೆಟ್ಟ ಆವೃತ್ತಿಯಾಗಿಲ್ಲ ಎಂದು ಕಪ್ತಾನ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

“ದ್ವಿತೀಯಾರ್ಧದಂತೆ ಮೊದಲಾರ್ಧದಲ್ಲಿ ನಾವು ಆಡುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 6ರಲ್ಲಿ 2 ಪಂದ್ಯಗಳನ್ನೂ ಗೆದ್ದಿದ್ದರೂ ನಾವು ಪ್ಲೇ ಆಫ್ ಪ್ರವೇಶಿಸುತ್ತಿದ್ದೆವು. ಮೊದಲ 6 ಪಂದ್ಯಗಳನ್ನು ಸೋತಿದ್ದೆ ನಮಗೆ ಮುಳುವಾಯಿತು. ಈ ಬಾರಿ ಬಯಸಿದ ಸ್ಥಾನದಲ್ಲಿ ನಾವು ಈ ಕೂಟವನ್ನು ಮುಗಿಸಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ನಮ್ಮ ಆಟ ಉತ್ತಮವಾಗಿತ್ತು. ಹೀಗಾಗಿ ತಂಡಕ್ಕೆ ಇದು ಕೆಟ್ಟ ಆವೃತ್ತಿ ಎಂದು ಹೇಳಲಾಗದು. ಕೊನೆಯ 7 ಪಂದ್ಯಗಳಲ್ಲಿ ಐದರಲ್ಲಿ ನಾವು ಜಯಸಿದೆವು ಮತ್ತು ಒಂದು ಪಂದ್ಯ ಫ‌ಲಿತಾಂಶವಿಲ್ಲದೇ ಕೊನೆ ಗೊಂಡಿತು. ಇದು ಹೆಮ್ಮೆ ಪಡಬೇಕಾದ ವಿಷಯ’ ಎಂದು ಕೊಹ್ಲಿ ಹೇಳಿದ್ದಾರೆ.

ಶನಿವಾರ ಈ ಕೂಟದ ಕೊನೆಯ ಪಂದ್ಯವ ನ್ನಾಡಿದ ಬೆಂಗಳೂರು ತಂಡ ಹೈದರಾಬಾದ್‌ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿ ಕೂಟಕ್ಕೆ ಗುಡ್‌ಬೈ ಹೇಳಿತು.
ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 7 ವಿಕೆಟಿಗೆ 175 ರನ್‌ ಗಳಿಸಿದರೆ, ಆರ್‌ಸಿಬಿ 19.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 178 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಈ ಸೋಲು ಹೈದರಾಬಾದ್‌ ಪ್ಲೇ ಆಫ್ ಪ್ರವೇಶ ದಾರಿಯನ್ನು ಇನ್ನಷ್ಟು ಕಠಿನಗೊಳಿಸಿದೆ.

ವಿಲಿಯಮ್ಸನ್‌ ಸಾಹಸ
ನಾಯಕ ಕೇನ್‌ ವಿಲಿಯಮ್ಸನ್‌ ಅವರ ಸಾಹಸಮಯ ಆಟದಿಂದ ಹೈದರಾಬಾದ್‌ 150 ರನ್‌ಗಳ ಗಡಿದಾಟುವಲ್ಲಿ ಯಶಸ್ವಿಯಾಗಿತ್ತು. ಅವರು 43 ಎಸೆತಗಳಲ್ಲಿ 70 ರನ್‌ (4 ಸಿಕ್ಸರ್‌, 5 ಬೌಂಡರಿ) ಮಾಡಿದರು. ಹೈದರಾಬಾದ್‌ ಪರ ಎರಡಂಕೆಯ ರನ್‌ ಗಳಿಸಿದ ಉಳಿದ ಆಟಗಾರರೆಂದರೆ ವೃದ್ಧಿಮಾನ್‌ ಸಾಹಾ (20), ಮಾರ್ಟಿನ್‌ ಗಪ್ಟಿಲ್‌ (30), ವಿಜಯ್‌ ಶಂಕರ್‌ (27). ಉಳಿದೆಲ್ಲ ಆಟಗಾರರು ಒಂದಂಕಿಗೆ ಔಟಾದ ಕಾರಣ ಹೈದರಾಬಾದ್‌ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫ‌ಲವಾಯಿತು.

ಅಮೋಘ 144 ರನ್‌ ಜತೆಯಾಟ
175 ರನ್‌ಗಳ ಗುರಿ ಬೆನ್ನತ್ತಿ ಹೊರಟ ಆರ್‌ಸಿಬಿ ಆರಂಭಿಕ ಆಘಾತ ಅನುಭವಿಸಿತು. 20 ರನ್‌ಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು. ಅನಂತರ ಜತೆಯಾದ ಶಿಮ್ರಾನ್‌ ಹೆಟ್‌ಮೈರ್‌-ಗುರುಕೀರತ್‌ ಸಿಂಗ್‌ ಅಮೋಘ 144 ರನ್‌ಗಳ ಜತೆಯಾಟ ಆಡಿ ತಂಡವನ್ನು ಗೆಲುವಿನ ದಡಕ್ಕೆ ಸಾಗಿಸಿದರು. ಈ ಜೋಡಿ ಬೇರ್ಪಡುವ ವೇಳೆ 164 ರನ್‌ ಗಳಿಸಿದ್ದ ಆರ್‌ಸಿಬಿ ಗೆಲುವಿಗೆ ಹತ್ತಿರವಾಗಿತ್ತು. ಕೊನೆಯ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿದ ಉಮೇಶ್‌ ಯಾದವ್‌ ತಂಡಕ್ಕೆ ಗೆಲುವು ತಂದುಕೊಟ್ಟರು. 47 ಎಸೆತಗಳಲ್ಲಿ 75 ರನ್‌ ಬಾರಿಸಿದ ಹೆಟ್‌ಮೈರ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಅವಕಾಶ ಬಾಚಿಕೊಳ್ಳುವ ಸಂಕಲ್ಪ
ಕಳೆದ ವರ್ಷದ ಐಪಿಎಲ್‌ನಲ್ಲಿ ಆಡದೇ ಇದ್ದ ಗುರುಕೀರತ್‌ ಸಿಂಗ್‌ ಮಾನ್‌ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಲು ಸಂಕಲ್ಪ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಹೆಟ್‌ಮೈರ್‌ಗೆ ಜತೆಯಾದ ಗುರುಕೀರತ್‌ 48 ಎಸೆತಗಳಲ್ಲಿ 65 ರನ್‌ ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದರು.
ಸನ್‌ರೈಸರ್ ವಿರುದ್ಧದ ಪಂದ್ಯ ನನ್ನಲ್ಲಿ ಒತ್ತಡವನ್ನು ಉಂಟು ಮಾಡಿಲ್ಲ. ಅದು ನನಗೆ ದೊರಕಿದ ಉತ್ತಮ ಅವಕಾಶ. ಎರಡು ವರ್ಷಗಳ ಅನಂತರ ಐಪಿಎಲ್‌ನಲ್ಲಿ ಆಡುತ್ತಿದ್ದೇನೆ. ಅವಕಾಶಕ್ಕಾಗಿ ಕಾದು ಕುಳಿತಿದ್ದ ನಾನು ಮ್ಯಾಚ್‌ವಿನ್ನಿಂಗ್‌ ಪ್ರದರ್ಶನ ನೀಡಲು ಬಯಸಿದ್ದೆ ಅದನ್ನು ಸಾಧಿಸಿದ್ದೇನೆ ಕೂಡ ಎಂದು ಗುರುಕೀರತ್‌ ಹೇಳಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 8 ಪಂದ್ಯಗಳನ್ನಾಡಿರುವ ಸನ್‌ರೈಸರ್ ಹೈದರಾಬಾದ್‌ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಆರ್‌ಸಿಬಿ ವಿರುದ್ಧ 7 ಪಂದ್ಯಗಳನ್ನಾಡಿರುವ ಹೈದರಾಬಾದ್‌ 5 ಪಂದ್ಯಗಳಲ್ಲಿ ಸೋತಿದೆ. ಕೆಕೆಆರ್‌ ವಿರುದ್ಧ ಚೆನ್ನಸ್ವಾಮಿಯಲ್ಲಿ ಆಡಿದ ಏಕೈಕ ಪಂದ್ಯವನ್ನು ಕೂಡ ಹೈದರಾಬಾದ್‌ ಸೋತಿತ್ತು.
* ಶಿಮ್ರಾನ್‌ ಹೆಟ್‌ಮೈರ್‌-ಗುರುಕೀರತ್‌ ಸಿಂಗ್‌ ಜೋಡಿ ಗಳಿಸಿದ 144 ರನ್‌ ಐಪಿಎಲ್‌ನಲ್ಲಿ ನಾಲ್ಕನೇ ವಿಕೆಟಿಗೆ ಪೇರಿಸಿದ ಅತ್ಯಧಿಕ ಜತೆಯಾಟವಾಗಿದೆ. ಈ ಜೋಡಿ 2014ರಲ್ಲಿ ಆರ್‌ಸಿಬಿ ಪರ ಡಿ’ ವಿಲಿಯರ್-ಯುವರಾಜ್‌ ಸಿಂಗ್‌ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಪೇರಿಸಿದ 132 ರನ್‌ ದಾಖಲೆಯನ್ನು ಮುರಿದಿದೆ.
* ಇದು ಐಪಿಎಲ್‌ನಲ್ಲಿ 4ನೇ ವಿಕೆಟಿಗೆ ಅಥವಾ ಅದಕ್ಕಿಂತ ಕೆಳಗಿನ ವಿಕೆಟಿಗೆ ಪೇರಿಸಿದ ಅತ್ಯಧಿಕ ಜತೆಯಾಟವಾಗಿದೆ. ಈ ಮೂಲಕ 2016ರಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧ ಕೆಕೆಆರ್‌ನ ಯೂಸುಫ್ ಪಠಾಣ್‌-ಶಕಿಬ್‌ ಅಲ್‌ ಹಸನ್‌ ಜೋಡಿಯ 134 ರನ್‌ ಜತೆಯಾಟದ ದಾಖಲೆ ಪತನಗೊಂಡಿತು.
* ಹೆಟ್‌ಮೈರ್‌-ಗುರುಕೀರತ್‌ ಅವರ ಜತೆಯಾಟ ಐಪಿಎಲ್‌ನ 200ನೇ ಶತಕದ ಜತೆಯಾಟವಾಗಿದೆ. 200 ಶತಕದ ಜತೆಯಾಟದಲ್ಲಿ 32 ಶತಕ ಜತೆಯಾಟದ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ. ಇದು ಉಳಿದ ತಂಡಕ್ಕಿಂತ 7 ಶತಕ ಜತೆಯಾಟ ಹೆಚ್ಚಾಗಿದೆ.
* ಯಜುವೇಂದ್ರ ಚಹಲ್‌ ಐಪಿಎಲ್‌ನಲ್ಲಿ 100 ವಿಕೆಟ್‌ ಕಿತ್ತ 14ನೇ ಆಟಗಾರ ಎಂದೆನಿಸಿಕೊಂಡರು. ಆರ್‌ಸಿಬಿ ಪರ 100 ವಿಕೆಟ್‌ ಕಿತ್ತ ಮೊದಲ ಆಟಗಾರ ಆಗಿದ್ದಾರೆ. ಯೂಸುಫ್ ಪಠಾಣ್‌ ಅವರ ವಿಕೆಟ್‌ ಕೀಳುವ ಮೂಲಕ ಚಹಲ್‌ ಈ ಮೈಲುಗಲ್ಲು ತಲುಪಿದರು.
* ಪಾರ್ಥಿವ್‌ ಪಟೇಲ್‌ ಐಪಿಎಲ್‌ನಲ್ಲಿ 13ನೇ ಬಾರಿ ಶೂನ್ಯಕ್ಕೆ ಔಟಾಗಿ ಹರ್ಭಜನ್‌ ಸಾಲಿಗೆ ಸೇರಿಕೊಂಡರು. ಹರ್ಭಜನ್‌ ಕೂಡ ಐಪಿಎಲ್‌ನಲ್ಲಿ ಇಲ್ಲಿಯ ವರೆಗೆ 13 ಬಾರಿ ಶೂನ್ಯಕ್ಕೆ ಔಟಾಗಿದ್ದರು.
* ವಿರಾಟ್‌ ಕೊಹ್ಲಿ ನಾಯಕನಾಗಿ ಐಪಿಎಲ್‌ನಲ್ಲಿ 4,000 ರನ್‌ ಪೂರೈಸಿದ 2ನೇ ಆಟಗಾರ ಎಂದೆನಿಸಿಕೊಂಡರು. ಆರು ರನ್‌ ಗಳಿಸಿದಾಗ ಈ ಮೈಲುಗಲ್ಲನ್ನು ಕೊಹ್ಲಿ ತಲುಪಿದರು. ನಾಯಕನಾಗಿ 4,000 ರನ್‌ ಪೂರೈಸಿದ ಆಟಗಾರರಲ್ಲಿ ಎಂ.ಎಸ್‌. ಧೋನಿ ಮೊದಲಿಗರು (4084).

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ