ಮಾಲಿಂಗ ಮ್ಯಾಜಿಕ್‌; ಮುಂಬೈಗೆ ಲಕ್‌

ವಿಲನ್‌ ಆಗಿದ್ದ ಮಾಲಿಂಗ ಒಂದೇ ಎಸೆತದಲ್ಲಿ ಬಿಗ್‌ ಹೀರೋ!

Team Udayavani, May 14, 2019, 6:00 AM IST

ಮುಂಬಯಿ: ಎಲ್ಲವೂ ಎಣಿಸಿದಂತೆ ಸಾಗಿದ್ದರೆ ಚೆನ್ನೈಗೆ ಐಪಿಎಲ್‌ ಟ್ರೋಫಿ ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಿರಲಿಲ್ಲ. ಮಾಲಿಂಗ ಅವರ 16ನೇ ಓವರಿನಲ್ಲಿ 20 ರನ್‌ ಸೂರೆಗೈದ ಚೆನ್ನೈಗೆ ಅವರದೇ ಅಂತಿಮ ಓವರಿನಲ್ಲಿ 9 ರನ್‌ ಬಾರಿಸುವುದು ಅಸಾಧ್ಯವೇನೂ ಆಗಿರಲಿಲ್ಲ. ದೈತ್ಯ ಶೇನ್‌ ವಾಟ್ಸನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಎಲ್ಲರೂ ಚೆನ್ನೈಯೇ ಚಾಂಪಿಯನ್‌ ಎಂದು ತೀರ್ಮಾನಿಸಿ ಹೆಡ್‌ಲೈನ್‌ ಕೊಟ್ಟಾಗಿತ್ತು.

ಆದರೆ ಕ್ರಿಕೆಟ್‌ ಫ‌ಲಿತಾಂಶ ಯಾವತ್ತೂ ನಿಗೂಢ. ಅದರಲ್ಲೂ ಟಿ20ಗೆ ಎಲ್ಲರ ನಿರೀಕ್ಷೆಯನ್ನು ತಲೆ ಕೆಳಗಾಗಿಸುವ ಪವರ್‌ ಇರುತ್ತದೆ. ಹಾಗೆಯೇ ಇಂಥ ಕ್ಯಾಶ್‌ ರಿಚ್‌ ಟೂರ್ನಿಗಳಲ್ಲಿ ನಾನಾ “ಲೆಕ್ಕಾಚಾರ’ಗಳೂ ಇರುವುದುಂಟು. ಇರಲಿ, ಧೋನಿ ಪಡೆಗೆ ನಸೀಬು ಕೈಕೊಟ್ಟಿತು; ಮುಂಬೈ ಒಂದು ರನ್ನಿನಿಂದ ಗೆದ್ದು ಇತಿಹಾಸ ಬರೆಯಿತು. ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಲಿಲ್ಲ!

ಮುಂಬೈ ಕೈಯಲ್ಲಿ 4 ಹೊಡೆತ!
ಕಳೆದ ವರ್ಷ ನಿಷೇಧ ಮುಗಿಸಿ ಐಪಿಎಲ್‌ಗೆ ವಾಪಸಾಗಿ “ಕಪ್‌ ಎತ್ತಿದ ಅಪ್ಪಂದಿರ ತಂಡ’ ಎನಿಸಿಕೊಂಡು ಯುವ ಪಡೆಗೆ ಸವಾಲೆಸೆದಿದ್ದ ಚೆನ್ನೈ ಈ ಸಲವೂ ಅದೇ ಜೋಶ್‌ನಲ್ಲಿತ್ತು. ದುರಂತವೆಂದರೆ, ಉಳಿದೆಲ್ಲ ತಂಡಗಳ ವಿರುದ್ಧ ಗೆದ್ದು ಬಂದರೂ ಮುಂಬೈ ಹರ್ಡಲ್ಸ್‌ ಮಾತ್ರ ದಾಟಲಾಗಲಿಲ್ಲ. ಆಡಿದ ನಾಲ್ಕೂ ಪಂದ್ಯಗಳಲ್ಲಿ ಮುಗ್ಗರಿಸಿದ್ದು ಧೋನಿ ಹಾಗೂ ಚೆನ್ನೈ ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿ.

ಇನ್ನೊಂದೆಡೆ ಇದು ಮುಂಬೈಗೂ ಪ್ರತಿಷ್ಠೆಯ ಕಣವಾಗಿತ್ತು. ಚೆನ್ನೈ ವಿರುದ್ಧ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಫೈನಲ್‌ನಲ್ಲಿ ಸೋತರೆ ಮುಂಬೈ ತಂಡದ ಮರ್ಯಾದೆ ಏನಾಗಬೇಡ! ಕೊನೆಯಲ್ಲಿ ಮುಂಬೈಯವರೇ ಆದ ಶಾದೂìಲ್‌ ಠಾಕೂರ್‌ ಮಾಲಿಂಗ ಎಸೆತಕ್ಕೆ ಕಾಲು ಕೊಟ್ಟು ಮುಂಬೈ ಗೆಲುವನ್ನು ಸಾರುವಂತಾದದ್ದು ಈ ಕೂಟದ “ಆ್ಯಂಟಿ ಕ್ಲೈಮ್ಯಾಕ್ಸ್‌’ ಎನಿಸಿಕೊಂಡದ್ದು ಸುಳ್ಳಲ್ಲ. ಅಲ್ಲಿಯ ತನಕ ವಿಲನ್‌ ಆಗಿದ್ದ ಮಾಲಿಂಗ ಈ ಒಂದು ಎಸೆತದಿಂದ ದೊಡ್ಡ ಹೀರೋ ಆದರು. ಕೊನೆಯಲ್ಲಿ ಒಬ್ಬಂಟಿಯಾಗಬೇಕಿದ್ದ ಮಾಲಿಂಗ ಅವರನ್ನು ಎಲ್ಲರೂ ಎತ್ತಿಕೊಂಡು ಮೆರೆದಾಡಿದ ದೃಶ್ಯ ಕೂಟದ ಹೈಲೈಟ್‌ ಎನಿಸಿತು.

ಟೈ ಆಗುವ ಸಾಧ್ಯತೆ ಇತ್ತು…
3 ಓವರ್‌ಗಳಲ್ಲಿ 42 ರನ್‌ ಬಿಟ್ಟುಕೊಟ್ಟಿದ್ದ ಲಸಿತ ಮಾಲಿಂಗ ಕೈಗೇ ರೋಹಿತ್‌ ಮತ್ತೆ ಚೆಂಡು ಕೊಟ್ಟಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಆದರೆ ಮಾಲಿಂಗ ಇಲ್ಲಿ ಜಾಣ್ಮೆಯ ಪ್ರದರ್ಶನವಿತ್ತರು. ಮೊದಲ 3 ಎಸೆತಗಳಲ್ಲಿ ನಾಲ್ಕೇ ರನ್‌ ಬಂತು. 4ನೇ ಎಸೆತದಲ್ಲಿ ವಾಟ್ಸನ್‌ ವಿಕೆಟ್‌ ಬಿತ್ತು. ಅವರು 2ನೇ ರನ್‌ ಕದಿಯುವ ವೇಳೆ ರನೌಟಾದರು. ಬಳಿಕ ಶಾದೂìಲ್‌ ಠಾಕೂರ್‌ 2 ರನ್‌ ತೆಗೆದರು. ಕೊನೆಯ ಎಸೆತದಲ್ಲಿ 2 ರನ್‌ ಅಗತ್ಯ ಬಿತ್ತು.

ಚೆಂಡು ಬ್ಯಾಟಿಗೆ ತಾಗಲೀ, ತಾಗದಿರಲೀ… ಠಾಕೂರ್‌-ಜಡೇಜ ಸೇರಿಕೊಂಡು ಒಂದು ರನ್‌ ತೆಗೆಯುವ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ಪಂದ್ಯ ಟೈ ಆದರೂ ಸಾಕಿತ್ತು, ಸೂಪರ್‌ ಓವರ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬಹುದಿತ್ತು!

2017ರಲ್ಲಿ ಜಾನ್ಸನ್‌ ಹೀರೋ
2017ರ ಪುಣೆ ಎದುರಿನ ಫೈನಲ್‌ನಲ್ಲೂ ಮುಂಬೈ ಇದೇ ಸ್ಥಿತಿಯಲ್ಲಿತ್ತು. ಅಂತಿಮ ಓವರ್‌ನಲ್ಲಿ ಪುಣೆ ಗೆಲುವಿಗೆ 11 ರನ್‌ ಅಗತ್ಯವಿತ್ತು. ನಾಯಕ ಸ್ಟೀವನ್‌ ಸ್ಮಿತ್‌, ಮನೋಜ್‌ ತಿವಾರಿ ಕ್ರೀಸಿನಲ್ಲಿದ್ದರು. ಬೌಲರ್‌ ಮಿಚೆಲ್‌ ಜಾನ್ಸನ್‌. ಮೊದಲ ಎಸೆತಕ್ಕೇ ತಿವಾರಿಯಿಂದ ಫೋರ್‌ ಬಿತ್ತು. ಆದರೆ ಜಾನ್ಸನ್‌ ಮ್ಯಾಜಿಕ್‌ ಮಾಡಿಯೇ ಬಿಟ್ಟರು. ಸತತ ಎಸೆತಗಳಲ್ಲಿ ಇವರಿಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಅಂತಿಮ ಎಸೆತದಲ್ಲಿ 3ನೇ ರನ್‌ ಕದ್ದು ಮೊತ್ತವನ್ನು ಸರಿದೂಗಿಸುವ ಯತ್ನದಲ್ಲಿ ಡೇನಿಯಲ್‌ ಕ್ರಿಸ್ಟಿಯನ್‌ ರನೌಟ್‌ ಆಗಿದ್ದರು. ಜಾನ್ಸನ್‌ ಅಂದಿನ ಹೀರೋ ಆಗಿದ್ದರು.

ಅಂತಿಮ ಎಸೆತದ ಯೋಜನೆ
ಆ ಅಂತಿಮ ಎಸೆತದ ಯೋಜನೆ ಬಗ್ಗೆ ರೋಹಿತ್‌ ಶರ್ಮ ಪ್ರತಿಕ್ರಿಯಿಸಿದ್ದಾರೆ.
“ಬ್ಯಾಟ್ಸ್‌ಮನ್‌ನನ್ನು ಔಟ್‌ ಮಾಡುವುದೇ ನಮ್ಮ ಯೋಜನೆ ಆಗಿತ್ತು. ಮುಂಬೈಯವರೇ ಆದ ಶಾದೂìಲ್‌ ಬಗ್ಗೆ ನಮಗೆ ಚೆನ್ನಾಗಿ ತಿಳಿದಿತ್ತು. ಅವರು ಚೆಂಡನ್ನು ಎಲ್ಲಿ ಬಡಿದಟ್ಟಬಹುದು ಎಂದು ನಾನು, ಮಾಲಿಂಗ ಸೇರಿ ಲೆಕ್ಕಾಚಾರ ಹಾಕಿದೆವು. ಶಾದೂìಲ್‌ ಬಿಗ್‌ ಶಾಟ್‌ ಬಾರಿಸಲು ಶಕ್ತರಿದ್ದರು. ಹೀಗಾಗಿ ನಿಧಾನ ಗತಿಯ ಎಸೆತವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು. ಶಾದೂìಲ್‌ ಚೆಂಡನ್ನು ಆಗಸ ಕ್ಕೆತ್ತುತ್ತಾರೆ, ಆಗ ಕ್ಯಾಚ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದೆಣಿಸಿದೆವು. ಒಟ್ಟಾರೆ ಇದೊಂದು 50-50 ಸಾಧ್ಯತೆ ಆಗಿತ್ತು. ಅದೃಷ್ಟ ನಮ್ಮದಾಗಿತ್ತು. ಶಾದೂìಲ್‌ ಲೆಗ್‌ ಬಿಫೋರ್‌ ಆದರು’ ಎಂದು ರೋಹಿತ್‌ ಬಣ್ಣಿಸಿದರು.

ಮುಂದಿನ ಐಪಿಎಲ್‌ನಲ್ಲೂ ಧೋನಿ ಆಟ?
ಈ ಬಾರಿಯ ಐಪಿಎಲ್‌ ಆರಂಭವಾಗು ವಾಗಲೇ ಅಭಿಮಾನಿಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌. ಧೋನಿ 2020ರ ಐಪಿಎಲ್‌ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ರವಿವಾರ ಕ್ರಿಕೆಟ್‌ ಜಾತ್ರೆಗೆ ತೆರೆ ಬಿದ್ದೊಡನೆಯೇ ಅಭಿಮಾನಿಗಳ ಈ ಬಹು ನಿರೀಕ್ಷಿತ ಪ್ರಶ್ನೆಗೆ ಉತ್ತರ ದೊರಕಿದೆ.

ಫೈನಲ್‌ ಪಂದ್ಯ ಮುಗಿದ ಅನಂತರ ಧೋನಿ ಅವರನ್ನು ಮಾತಾಡಿಸಿದ ಸಂಜಯ್‌ ಮಾಂಜ್ರೆàಕರ್‌ ಅಭಿಮಾನಿಗಳ ಪ್ರಶ್ನೆಗೆ ಅವರಿಂದಲೇ ಉತ್ತರವನ್ನು ಪಡೆದಿದ್ದಾರೆ. ಮಾತುಕತೆಯ ವೇಳೆ ಸಂಜಯ್‌ “ಮುಂದಿನ ಐಪಿಎಲ್‌ನಲ್ಲಿ ನಿಮ್ಮನ್ನು ನೋಡಬಹುದೇ?’ ಎಂದು ಧೋನಿಗೆ ಪ್ರಶ್ನಿಸಿದ್ದು, ಇದಕ್ಕೆ ನಗುತ್ತಲೇ ಉತ್ತರಿಸಿದ ಧೋನಿ “ಹೋಪ್‌ಫ‌ುಲಿ ಯೆಸ್‌’ ಎಂದು ಉತ್ತರಿಸಿದ್ದಾರೆ.

ಮುಂದಿನ ಐಪಿಎಲ್‌ ವೇಳೆಗೆ 39ನೇ ವರ್ಷಕ್ಕೆ ಹತ್ತಿರವಾಗಲಿರುವ ಧೋನಿಗೆ ಈಗಾಗಲೇ ಬೆನ್ನು ನೋವು ಸಾಕಷ್ಟು ತೊಂದರೆ ನೀಡುತ್ತಿದೆ. ಹೀಗಾಗಿ ಅವರ ಫಿಟ್‌ನೆಸ್‌ ಹೇಗಿರುತ್ತದೆ ಎಂಬುದು ಅಭಿಮಾನಿಗಳಲ್ಲಿರುವ ಗೊಂದಲ.

ಕೊನೆಯ ಎಸೆತದ ವೇಳೆ ಕಣ್ಣು ಮುಚ್ಚಿಕೊಂಡಿದ್ದ ನೀತಾ ಅಂಬಾನಿ!
4ನೇ ಸಲ ಐಪಿಎಲ್‌ ಪ್ರಶಸ್ತಿ ಎತ್ತಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಪಂದ್ಯದ ಕೊನೆಯ ಎಸೆತವನ್ನು ತಾನು ನೋಡಲಿಲ್ಲ ಎಂಬುದಾಗಿ ಹೇಳಿದ್ದಾರೆ.

ಫೈನಲ್‌ ಪಂದ್ಯ ಕೊನೆಯ ಎಸೆತದ ವರೆಗೂ ಭಾರೀ ರೋಚಕತೆಯಿಂದ ಕೂಡಿತ್ತು. ಸ್ಟೇಡಿಯಂನಲ್ಲಿದ್ದ ನೀತಾ ಅಂಬಾನಿ ಕೂಡ ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.
“ಕೊನೆಯ ಓವರ್‌ನ ಕೊನೆಯ ಎಸೆತ! ಎಷ್ಟು ಕುತೂಹಲವಾಗಿತ್ತೆಂದರೆ, ನಾನಿದನ್ನು ನೋಡಲೇ ಇಲ್ಲ. ಏನಾಗುತ್ತದೋ ಏನೋ ಎಂಬ ಅವ್ಯಕ್ತ ಭೀತಿ ನನ್ನನ್ನು ಆವರಿಸಿತ್ತು. ಹೀಗಾಗಿ ಕಣ್ಣು ಮುಚ್ಚಿ ಕುಳಿತುಕೊಂಡಿದ್ದೆ. ಅಲ್ಲೇನಾಗುತ್ತಿದೆ ಎಂಬುದನ್ನು ವೀಕ್ಷಕರ ಬೊಬ್ಬೆಯಿಂದ ತಿಳಿದುಕೊಂಡೆ’ ಎಂದರು.

“ನಾಲ್ಕೂ ಸಲ ಮುಂಬೈ ಪ್ರಶಸ್ತಿ ಗೆದ್ದಾಗ ರೋಹಿತ್‌ ತಂಡದ ನಾಯಕನಾಗಿದ್ದಾರೆ. ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿರುವುದಕ್ಕೆ ರೋಹಿತ್‌ಗೆ ಧನ್ಯವಾದಗಳು’ ಎಂದು ನೀತಾ ಅಂಬಾನಿ ಹೇಳಿದರು.

ಕಂದಮ್ಮನ ಜತೆ ರೋಹಿತ್‌ ಸಂಭ್ರಮ
ಐಪಿಎಲ್‌ ಟ್ರೋಫಿಗೆ ಮುಂಬೈ ಇಂಡಿಯನ್ಸ್‌ 4ನೇ ಸಲ ಮುತ್ತಿಟ್ಟಿತು. ಈ ಬೆನ್ನಲ್ಲೇ ತಂಡದ ನಾಯಕ ರೋಹಿತ್‌ ಶರ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಗೆಲುವಿನ ಬಳಿಕ ನೇರವಾಗಿ ಪತ್ನಿ ರಿತಿಕಾ ಸಜೆª ಬಳಿಗೆ ಬಂದ ರೋಹಿತ್‌ ಶರ್ಮ, ಅವರನ್ನು ಅಪ್ಪಿಕೊಂಡು ಸಂತಸ ಹಂಚಿಕೊಂಡರು. ಇದೇ ವೇಳೆ ತನ್ನ ಮುದ್ದು ಮಗು ಸಮೈರಾಳನ್ನು ರೋಹಿತ್‌ ಮುದ್ದಾಡಿದರು. ರೋಹಿತ್‌ ಕ್ರೀಡಾಂಗಣದಲ್ಲೇ ಕುಳಿತುಕೊಂಡು ತನ್ನ ಮಗುವನ್ನು ಆಟವಾಡಿಸುವ ಮೂಲಕ ಸಂತಸ ಆಚರಿಸಿದ್ದು ವಿಶೇಷವಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರೋಹಿತ್‌-ಯುವಿ ಡ್ಯಾನ್ಸ್‌
4ನೇ ಸಲ ಐಪಿಎಲ್‌ ಪ್ರಶಸ್ತಿ ಗೆದ್ದ ಮುಂಬೈ ಕ್ರಿಕೆಟಿಗರ ಸಂಭ್ರಮಕ್ಕೆ ಪಾರವೇ ಇಲ್ಲ. ವಿಜೇತರು ಫೋಟೋ ಸೆಷನ್‌ನಲ್ಲಿ ಪಾಲ್ಗೊಂಡ ಬಳಿಕ ಹೊಟೇಲ್‌ನಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ನಾಯಕ ರೋಹಿತ್‌ ಶರ್ಮ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ ಸಿನಿಮಾ “ಗಲ್ಲಿ ಬಾಯ್‌’ನ “ಅಸ್ಲಿ ಹಿಪ್‌ ಹೋಪ್‌ ಸೇ ಮಿಲಾಯೆ ಹಿಂದೂಸ್ಥಾನ್‌ ಕೋ’ ಹಾಡಿಗೆ ಸ್ಟೆಪ್‌ ಹಾಕಿದರು. ಆದರೆ ಈ ಹಾಡು ಇಲ್ಲಿ “ಅಸ್ಲಿ ಹಿಟ್‌ಮ್ಯಾನ್‌…’ ಆಗಿ ರೂಪಾಂತರಗೊಂಡಿತ್ತು. ಇವರಿಗೆ ಯುವರಾಜ್‌ ಸಿಂಗ್‌ ಸಾಥ್‌ ನೀಡಿದರು. ಈ ವೀಡಿಯೋವನ್ನು ಸಾವಿರಾರು ಮಂದಿ ಲೈಕ್‌ ಮಾಡಿದ್ದಾರೆ.

ಅಶಿಸ್ತು: ಪೊಲಾರ್ಡ್‌ಗೆ ದಂಡ
ಫೈನಲ್‌ ಪಂದ್ಯದ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಮುಂಬೈ ಆಟಗಾರ ಕೈರನ್‌ ಪೊಲಾರ್ಡ್‌ಗೆ ಪಂದ್ಯ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ. ಬ್ರಾವೊ ಎಸೆತವೊಂದಕ್ಕೆ ವೈಡ್‌ ನೀಡದಿದ್ದಾಗ ಪೊಲಾರ್ಡ್‌ ಆಕ್ರೋಶಗೊಂಡಿದ್ದರು. ಬ್ರಾವೊ ಮುಂದಿನ ಎಸೆತವಿಕ್ಕಲು ಆಗಮಿಸುತ್ತಿದ್ದಂತೆ ಪೊಲಾರ್ಡ್‌ ಕ್ರೀಸ್‌ ಬಿಟ್ಟು ಹೊರನಡೆದು ಅಶಿಸ್ತಿನಿಂದ ವರ್ತಿಸಿದ್ದರು. ಇದನ್ನು ಗಮನಿಸಿದ ಅಂಪಾಯರ್‌ಗಳಿಬ್ಬರೂ ಕರೆದು ಪೊಲಾರ್ಡ್‌ಗೆ ಎಚ್ಚರಿಕೆ ನೀಡಿದರು. ಆದರೆ ಪೊಲಾರ್ಡ್‌ ಇದು ತನಗಲ್ಲ ಎಂಬ ರೀತಿಯಲ್ಲಿ ವರ್ತಿಸಿ ಮುಂದೆ ನಡೆದರು. ಇದರಿಂದ ಅವರ ವಿರುದ್ಧ ಅಶಿಸ್ತಿನ ಪ್ರಕರಣ ದಾಖಲಿಸಲಾಯಿತು.

“ಟ್ರೋಫಿಯನ್ನು ಪಾಸ್‌ ಮಾಡಿಕೊಂಡೆವು!’
ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲಿಗೆ ಧೋನಿ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. “ಇದು ಸೋಲಲ್ಲ, ನಾವು ಟ್ರೋಫಿಯನ್ನು ಪಾಸ್‌ ಮಾಡಿಕೊಂಡೆವು’ ಎಂದು ಹೇಳಿದ್ದಾರೆ.

2017ರಿಂದ ಐಪಿಎಲ್‌ ಟ್ರೋಫಿ ಮುಂಬೈ ಮತ್ತು ಚೆನ್ನೈ ತಂಡಗಳೆರಡರ ನಡುವೆಯೇ ಸಂಚಾರ ಮಾಡುತ್ತಿದೆ. 2017ರಲ್ಲಿ ಮುಂಬೈ ಗೆದ್ದರೆ, ಕಳೆದ ವರ್ಷ ಚೆನ್ನೈ ಪಾಲಾಯಿತು. ಈ ವರ್ಷ ಮತ್ತೆ ಮುಂಬೈ ಗೆದ್ದಿದೆ. ಈ ಅರ್ಥದಲ್ಲಿ ಧೋನಿ ನೀಡಿದ ಪ್ರತಿಕ್ರಿಯೆ ಅತ್ಯಂತ ಸೂಕ್ತವಾಗಿತ್ತು!

ಐಪಿಎಲ್‌ ಸಾಧಕರು
àಮ್‌ ಚೇಂಜರ್‌
(10 ಲಕ್ಷ ರೂ.)
ರಾಹುಲ್‌ ಚಹರ್‌
ಸ್ಟೈಲಿಶ್‌ ಪ್ಲೇಯರ್‌ (10 ಲಕ್ಷ ರೂ.)
ಕೆ.ಎಲ್‌. ರಾಹುಲ್‌
ಸೂಪರ್‌ ಸ್ಟ್ರೈಕರ್‌ (10 ಲಕ್ಷ ರೂ.)
ಆ್ಯಂಡ್ರೆ ರಸೆಲ್‌ (204.81)
ಬಹುಮೂಲ್ಯ ಆಟಗಾರ
ಆ್ಯಂಡ್ರೆ ರಸೆಲ್‌, 369 ಅಂಕ
(ಟಾಟಾ ಹ್ಯಾರಿಯರ್‌ ಎಸ್‌ಯುವಿ ಕಾರು)
ಪಫೆìಕ್ಟ್ ಕ್ಯಾಚ್‌ (10 ಲಕ್ಷ ರೂ.)
ಕೈರನ್‌ ಪೊಲಾರ್ಡ್‌
ಅತಿ ವೇಗದ ಅರ್ಧ ಶತಕ
(10 ಲಕ್ಷ ರೂ.)
ಹಾರ್ದಿಕ್‌ ಪಾಂಡ್ಯ
ಎಮರ್ಜಿಂಗ್‌ ಪ್ಲೇಯರ್‌ (10 ಲಕ್ಷ ರೂ.)
ಶುಭಮನ್‌ ಗಿಲ್‌
ಫೇರ್‌ಪ್ಲೇ ಅವಾರ್ಡ್‌ (ಟ್ರೋಫಿ)
ಸನ್‌ರೈಸರ್ ಹೈದರಾಬಾದ್‌

ನಾಯಕ ರೋಹಿತ್‌ ಶರ್ಮ ನನ್ನ ಮೇಲೆ ವಿಶ್ವಾಸವಿರಿಸಿದ್ದರಿಂದಲೇ ಅಂತಿಮ ಓವರ್‌ನಲ್ಲಿ 9 ರನ್‌ ಉಳಿಸಿಕೊಳ್ಳಲು ಸಾಧ್ಯ ವಾಯಿತು.
-ಲಸಿತ ಮಾಲಿಂಗ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ