ಸತತ 3ನೇ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ

ಇಂದು ಆರ್‌ಸಿಬಿ- ಪಂಜಾಬ್‌ ದ್ವಿತೀಯ ಹಣಾಹಣಿ

Team Udayavani, Apr 24, 2019, 6:30 AM IST

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಘೋರವಾದ ಆರಂಭ ಪಡೆದು ಈಗ ಸತತ 2 ಪಂದ್ಯ ಗೆದ್ದು ಸಂಭ್ರಮಿಸುತ್ತಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಬುಧವಾರ ನಡೆಯುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಮರು ಪಂದ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಇತ್ತಂಡಗಳು ಸೆಣೆಸಲಿವೆ.

ರವಿವಾರವಷ್ಟೇ ತವರಿನಲ್ಲಿ ಅಗ್ರಸ್ಥಾನದಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರೋಚಕ 1 ರನ್ನಿನ ಗೆಲುವು ಸಾಧಿಸಿದ ಆರ್‌ಸಿಬಿಗೆ ಈ ಪಂದ್ಯವೂ ತವರಿನ ಪಂದ್ಯವಾಗಿರುವುದರಿಂದ ಹೆಚ್ಚಿನ ಅವಕಾಶ ಎನ್ನಲಡ್ಡಿಯಿಲ್ಲ. ಪಂಜಾಬ್‌ ವಿರುದ್ಧ ದ್ವಿತೀಯ ಪಂದ್ಯದಲ್ಲೂ ಗೆಲುವು ದಾಖಲಿಸಿ ಆರ್‌ಸಿಬಿ ಸತತ 3ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಪಂಜಾಬ್‌ ವಿರುದ್ಧ ಮೊದಲ ಪಂದ್ಯದಲ್ಲಿ ಬೆಂಗಳೂರು 8 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಆದರೆ ಗೇಲ್‌, ರಾಹುಲ್‌ ಅಬ್ಬರದ ಮುಂದೆ ಆರ್‌ಸಿಬಿಗೆ ಗೆಲುವು ಅಷ್ಟೂ ಸುಲಭದ ಮಾತಲ್ಲ.

3ನೇ ಜಯದ ನಿರೀಕ್ಷೆ
ಬಹುತೇಕ ಫ್ಲೇ ಆಫ್ನಿಂದ ಹೊರಬೀಳಲಿದೆ ಎನ್ನುವಾಗಲೇ ಮತ್ತೆ ಚಿಗುರಿರುವ ಆರ್‌ಸಿಬಿ ಕಳೆದೆರಡು ಪಂದ್ಯಗಳಲ್ಲೂ ಅತ್ಯುತ್ತಮ ಆಟವಾಡಿ ಗೆಲುವು ದಾಖಲಿಸಿದೆ. ಫ್ಲೇ ಆಫ್ ತಲುಪಲು ಉಳಿದಿರುವ ಪಂದ್ಯಗಳಲ್ಲಿ ಗೆಲುವಿಗಾಗಿ ಹಾತೊರೆಯುತ್ತಿರುವ ಬೆಂಗಳೂರು ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದೆ. ಮೊಯಿನ್‌ ಅಲಿ, ಮಾರ್ಕಸ್‌ ಸ್ಟೋಯಿನಿಸ್‌, ನಾಯಕ ವಿರಾಟ್‌ ಕೊಹ್ಲಿ, ಎಬಿ ಡಿ’ವಿಲಿಯರ್, ಪಾರ್ಥಿವ್‌ ಪಟೇಲ್‌ ಉತ್ತಮ ಫಾರ್ಮ್ನಲ್ಲಿರುವುದೂ ತಂಡಕ್ಕೆ ಪ್ಲಸ್‌ ಪಾಯಿಂಟ್‌.

ಬೌಲಿಂಗ್‌ ಸಮಸ್ಯೆ
ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ಕೊಹ್ಲಿ ಪಡೆಗೆ ಹಿನ್ನಡೆಯಾಗಿರುವುದು ಬೌಲಿಂಗ್‌ ವಿಭಾಗ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕಷ್ಟಪಟ್ಟು ಗೆಲ್ಲುವ ಸ್ಥಿತಿ ಎದುರಾದದ್ದು ಆರ್‌ಸಿಬಿ ಕಳಪೆ ಬೌಲಿಂಗ್‌ ವಿಭಾಗದ ಪ್ರದರ್ಶನಕ್ಕೆ ಉತ್ತಮ ಸಾಕ್ಷಿ. ಉಮೇಶ್‌ ಯಾದವ್‌ ಪಾಲಾದ ಅಂತಿಮ ಓವರ್‌ನಲ್ಲಿ ಚೆನ್ನೈಗೆಲುವಿಗೆ 26 ರನ್‌ ಬೇಕಿತ್ತು. 24 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದ್ದರು. ಹೀಗಾಗಿ ಆರ್‌ಸಿಬಿಯ ಬೌಲಿಂಗ್‌ ವಿಭಾಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ.

ಗೇಲ್‌, ರಾಹುಲ್‌ ಬಲ
ಪಂಜಾಬ್‌ಗ ಹೆಚ್ಚಿನ ಬಲವಿರುವುದು ಗೇಲ್‌ ಮತ್ತು ರಾಹುಲ್‌ ಬ್ಯಾಟಿಂಗ್‌ ಫಾರ್ಮ್. ಪ್ರತಿ ಪಂದ್ಯದಲ್ಲಿ ಸಿಡಿಯುತ್ತಿರುವ ಇವರಿಬ್ಬರು ತಂಡಕ್ಕೆ ಉತ್ತಮ ಆರಂಭ ನೀಡಬಲ್ಲ ಆಟಗಾರರು. ಇವರಿಗೆ ಮಧ್ಯಮ ಕ್ರಮಾಂಕದ ಆಟಗಾರರಾದ ಮಾಯಾಂಕ್‌ ಅಗರ್ವಾಲ್‌, ಡೇವಿಡ್‌ ಮಿಲ್ಲರ್‌, ನಿಕೋಲಸ್‌ ಪೂರಣ್‌ ಸಾಥ್‌ ಸಿಕ್ಕರೇ ಪಂಜಾಬ್‌ ಬೃಹತ್‌ ಮೊತ್ತ ಪೇರಿಸುವಲ್ಲಿ ಅನುಮಾನವಿಲ್ಲ.

ಬೌಲಿಂಗ್‌ ವೈಫ‌ಲ್ಯ
ತಂಡಕ್ಕೆ ದೊಡ್ಡ ತಲೆನೋವಾಗಿರುವುದು ದುಬಾರಿ ಬೌಲರ್. ಅಶ್ವಿ‌ನ್‌ದ್ವಯರನ್ನು ಹೊರತುಪಡಿಸಿ ಯಾವ ಬೌಲರ್‌ಗಳು ಲಯ ಕಂಡುಕೊಂಡಿಲ್ಲ. ಇದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಆರ್‌ಸಿಬಿ ವಿರುದ್ಧ ಮೊದಲ ಮುಖಾಮುಖೀ ಯಲ್ಲಿ ತವರಿನಲ್ಲೇ ಹೀನಾಯವಾಗಿ ಸೋತಿರುವ ಪಂಜಾಬ್‌ಗ ಇದು ಸೇಡಿನ ಪಂದ್ಯ ವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ