ಆರ್‌ಸಿಬಿ ಮೇಲೆ ಇನ್ನೂ ಆಸೆ!

Team Udayavani, Apr 30, 2019, 10:21 AM IST

ಬೆಂಗಳೂರು: ಆಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಸೋಲಿನ ನಂಟು, ಅಂಕಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನ, ರನ್‌ರೇಟ್‌ ಮೈನಸ್‌ ಬಿಟ್ಟು ಕದಲಲಿಲ್ಲ, ಇದಕ್ಕೂ ಮಿಗಿಲಾಗಿ ಕೂಟದಿಂದ ಬಹುತೇಕ ಹೊರಬಿದ್ದಾಗಿದೆ.. ಇದು ಆರ್‌ಸಿಬಿಯ ಸದ್ಯದ ಸ್ಥಿತಿ. ಹಾಗೆಯೇ ಈಗಾಗಲೇ 2 ತಂಡಗಳು ಪ್ಲೇ ಆಫ್ ತಲುಪಿವೆ, 14 ಅಂಕ ಹೊಂದಿರುವ ಮುಂಬೈ ಒಂದೇ ಹೆಜ್ಜೆ ದೂರದಲ್ಲಿದೆ. ಆದರೂ ಆರ್‌ಸಿಬಿ ಮೇಲಿನ ಪ್ಲೇ ಆಫ್ ನಿರೀಕ್ಷೆ ಕಮರಿ ಹೋಗಿಲ್ಲ!

ಪವಾಡದ ನಿರೀಕ್ಷೆಯಲ್ಲಿ…
ಮಂಗಳವಾರ ತನಗಿಂತ ಒಂದು ಸ್ಥಾನ ಮೇಲಿ ರುವ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕೊಹ್ಲಿ ಪಡೆ ತವರಿನಂಗಳದಲ್ಲಿ ಆಡಲಿಳಿಯಲಿದೆ. ಅಭಿಮಾನಿ ಗಳೆಲ್ಲ ಪವಾಡದ ನಿರೀಕ್ಷೆಯಲ್ಲಿದ್ದಾರೆ. ಆರ್‌ಸಿಬಿ 4ನೇ ಸ್ಥಾನಿಯಾಗಿ ಹೇಗೆ ಮೇಲೇರಬಹುದೆಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಲೆಕ್ಕಾಚಾರಗಳು ಹರಿದು ಬರುತ್ತಿವೆ. ಇದೇ ಕಾಳಜಿ, ಬದ್ಧತೆ, ಆಸಕ್ತಿ ಆರ್‌ಸಿಬಿ ಆಟಗಾರರಲ್ಲೂ ಇದ್ದಿದ್ದರೆ ಬಹುಶಃ ಕರ್ನಾಟಕದ ಐಪಿಎಲ್‌ ತಂಡಕ್ಕೆ ಈ ಸ್ಥಿತಿ ಒದಗಿಬರುತ್ತಿರಲಿಲ್ಲ!

ರಾಜಸ್ಥಾನಕ್ಕೆ ಕ್ಷೀಣ ಅವಕಾಶ
ಆದರೆ ರಾಜಸ್ಥಾನ್‌ ಮುಂದೆ ಪ್ಲೇ ಆಫ್ಗೆ ಏರುವ ಕ್ಷೀಣ ಅವಕಾಶವೊಂದಿದೆ. ಉಳಿದೆರಡೂ ಪಂದ್ಯ ಗಳನ್ನು ಗೆದ್ದರೆ ಅಂಕ 14ಕ್ಕೆ ಏರುವುದರಿಂದ ಆರ್‌ಸಿಬಿ ಎದುರಿನ ಪಂದ್ಯ ಸ್ಮಿತ್‌ ಪಡೆಗೆ ನಿರ್ಣಾಯಕ. ಬದಲಾದ ನಾಯಕತ್ವ ರಾಜಸ್ಥಾನಕ್ಕೆ ಲಾಭ ತರುತ್ತಿದ್ದರೂ ಜಾಸ್‌ ಬಟ್ಲರ್‌, ಜೋಫ‌ ಆರ್ಚರ್‌, ಬೆನ್‌ ಸ್ಟೋಕ್ಸ್‌ ನಿರ್ಗಮನ ತಂಡದ ಕಾರ್ಯತಂತ್ರ ವನ್ನು ತಲೆಕೆಳಗಾಗಿಸುವ ಸಾಧ್ಯತೆ ಇದ್ದೇ ಇದೆ.  ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಸ್ಟುವರ್ಟ್‌ ಬಿನ್ನಿ ಅವರಿಗೆ ಇದು ತವರಿನಂಗಳದ ಪಂದ್ಯ ವಾಗಿರುವುದು ರಾಜಸ್ಥಾನಕ್ಕೆ ಲಾಭ ತಂದೀತು ಎಂಬುದೊಂದು ನಿರೀಕ್ಷೆ.

ಇತ್ತ ಆರ್‌ಸಿಬಿಯಲ್ಲಿ ರಾಜ್ಯದ ಯಾವ ಸ್ಟಾರ್‌ ಆಟಗಾರನೂ ಇಲ್ಲ. ಕರ್ನಾಟಕದ ಏಕೈಕ ಆಟಗಾರ ದೇವದತ್ತ ಪಡಿಕ್ಕಲ್‌ ಅವರಿಗೆ ಇನ್ನೂ ಅವಕಾಶ ಕೊಟ್ಟಿಲ್ಲ. ಸದ್ಯದ ಸ್ಥಿತಿಯಲ್ಲಿ ಆರ್‌ಸಿಬಿ ಪಾಲಿಗೆ ಇದು ಕೇವಲ ಲೆಕ್ಕದ ಭರ್ತಿಯ ಪಂದ್ಯ!

ಆರ್‌ಸಿಬಿ ಸೋಲಿನ ಶತಕ!
ಡೆಲ್ಲಿ ಎದುರಿನ ರವಿವಾರದ ಪಂದ್ಯದಲ್ಲಿ ಎಡವಿದ ಆರ್‌ಸಿಬಿ ಟಿ20 ಕ್ರಿಕೆಟ್‌ನಲ್ಲಿ ನೂರನೇ ಸೋಲನುಭಸಿತು. ಆರ್‌ಸಿಬಿ 100 ಸೋಲನ್ನು ಹೊತ್ತುಕೊಂಡ ಭಾರತದ ಮೊದಲ ಹಾಗೂ ವಿಶ್ವದ 3ನೇ ಕ್ರಿಕೆಟ್‌ ತಂಡವಾಗಿದೆ. ಇಂಗ್ಲೆಂಡಿನ ಮಿಡ್ಲ್ಸೆಕ್ಸ್‌ 112 ಮತ್ತು ಡರ್ಬಿಶೈರ್‌ 101 ಸೋಲನುಭವಿಸಿ ಮೊದಲೆರಡು ಸ್ಥಾನದಲ್ಲಿವೆ.

ಕೊಹ್ಲಿ 5 ಸಾವಿರ ರನ್‌
ಡೆಲ್ಲಿ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ, ಭಾರತದ ನೆಲದಲ್ಲಿ ಆಡಲಾದ ಐಪಿಎಲ್‌ ಪಂದ್ಯಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಿದರು (5,020). ಅವರು ಈ ಸಾಧನೆಗೈದ ಮೊದಲ ಭಾರತೀಯ ಆಟಗಾರ. ಸುರೇಶ್‌ ರೈನಾ ದ್ವಿತೀಯ ಸ್ಥಾನದಲ್ಲಿದ್ದಾರೆ (4,699). ಕೊಹ್ಲಿ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆಡಲಾದ ಐಪಿಎಲ್‌ ಪಂದ್ಯಗಳಲ್ಲಿ ಕ್ರಮವಾಗಿ 105 ಮತ್ತು 246 ರನ್‌ ಮಾಡಿದ್ದಾರೆ.

ಅರ್ಧ ಗಂಟೆ ಮೊದಲೇ ಪ್ಲೇ ಆಫ್
ತಡರಾತ್ರಿ ತನಕ ನಡೆಯುವ ಪಂದ್ಯಗಳಿಂದ ಬಹಳಷ್ಟು ಟೀಕೆಗಳು ಕೇಳಿಬಂದ ಬಳಿಕ ಐಪಿಎಲ್‌ ಪ್ಲೇ ಆಫ್ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಆರಂಭಿಸಲು ನಿರ್ಧರಿಸಲಾಗಿದೆ. ಇದರ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದೆ. ಸಮಯ ಬದಲಾವಣೆ ಕುರಿತು ಬಿಸಿಸಿಐ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಂತೆ ರಾತ್ರಿ 8ಕ್ಕೆ ಆಯೋಜನೆಗೊಂಡಿದ್ದ ಪಂದ್ಯಗಳು 7.30ಕ್ಕೇ ಶುರುವಾಗಲಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ