ಮಾಸಲಿ 70 ರನ್ನಿನ ಕಹಿ

Team Udayavani, Apr 21, 2019, 6:00 AM IST

ಬೆಂಗಳೂರು: ಕೋಲ್ಕತಾ ವಿರುದ್ಧ ಗೆದ್ದು ಪ್ಲೇ ಆಫ್ ಬೆಳಕನ್ನು ಇನ್ನೂ ಸಣ್ಣಗೆ ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿ ರವಿವಾರ ಉದ್ಯಾನ ನಗರಿಯಲ್ಲಿ ನಡೆಯಲಿರುವ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಇವೆರಡೂ ತಂಡಗಳು ಚೆನ್ನೈಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀ ಯಾಗಿದ್ದವು. ಕೊಹ್ಲಿ ಪಡೆ 70 ರನ್ನಿಗೆ ದಿಂಡುರುಳಿ ಆಘಾತಕಾರಿ ಸೋಲನುಭವಿಸಿತ್ತು. ಇದಕ್ಕೆ ತವರಿನಂಗಳದಲ್ಲಿ ಕೊಹ್ಲಿ ಟೀಮ್‌ ಸೇಡು ತೀರಿಸಬೇಕಿದೆ. ಎಪ್ಪತ್ತರ ಆ ಕಹಿ ನೆನಪು ಮಾಸಿಹೋಗಬೇಕಿದೆ.

ಹಾಲಿ ಚಾಂಪಿಯನ್‌ ಚೆನ್ನೈ ಕಳೆದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಸೋಲು ಕಂಡಿದೆ. ಇದರಲ್ಲಿ ನಾಯಕ ಧೋನಿ ಆಡಿರಲಿಲ್ಲ. ಆರ್‌ಸಿಬಿ ವಿರುದ್ಧ ಮರಳಿ ತಂಡ ಸೇರಿಕೊಳ್ಳಲಿದ್ದಾರೆ. ಇನ್ನೊಂದೆಡೆ ಆರ್‌ಸಿಬಿ ಶುಕ್ರವಾರ ರಾತ್ರಿಯಷ್ಟೇ ಈಡನ್‌ ಅಂಗಳದಲ್ಲಿ ಕೆಕೆಆರ್‌ಗೆ ಸೋಲುಣಿಸಿದ ಹುಮ್ಮಸ್ಸಿನಲ್ಲಿದೆ. ಈ ಉತ್ಸಾಹ ತವರಿನ ಅಂಗಳದಲ್ಲೂ ಮರುಕಳಿಸಬೇಕಿದೆ. ಗೆದ್ದರಷ್ಟೇ ಬೆಂಗಳೂರು ತಂಡ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಹೀಗಾಗಿ ಕೊಹ್ಲಿ ತಂಡದ ಪಾಲಿಗೆ ಮಾಡು-ಮಡಿ ಪಂದ್ಯವಾಗಿದೆ.

ಕೊಹ್ಲಿ, ಅಲಿ ಪ್ರಚಂಡ ಫಾರ್ಮ್
ಬೆಂಗಳೂರು ತಂಡದ ಬ್ಯಾಟಿಂಗ್‌ ವಿಭಾಗ ಸದೃಢವಾಗಿದೆ. ಎಬಿಡಿ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮೆರೆದಿದ್ದರು. ಮೊಯಿನ್‌ ಅಲಿ ಬಿರುಸಿನ ಅರ್ಧ ಶತಕ ಸಿಡಿಸಿದ್ದರು. ಬೌಲಿಂಗ್‌ನಲ್ಲೂ ಪರಿಣಾಮಕಾರಿಯಾಗಿದ್ದರು.

ಬೌಲಿಂಗ್‌ ತೀರಾ ದುರ್ಬಲ
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್‌ ತಂಡವನ್ನು ಕೂಡಿಕೊಂಡಿದ್ದರೂ ಬೆಂಗಳೂರು ತಂಡದ ಬೌಲಿಂಗ್‌ ವಿಭಾಗ ಮಾತ್ರ ಸುಧಾರಿಸಿಲ್ಲ. ಇದು ಕ್ಯಾಪ್ಟನ್‌ ಕೊಹ್ಲಿಯ ಚಿಂತೆಯನ್ನು ಹೆಚ್ಚಿಸಿದೆ. ಬ್ಯಾಟ್ಸ್‌ಮನ್‌ಗಳು 200 ರನ್‌ ಪೇರಿಸಿದರು. ಇದನ್ನು ಉಳಿಸಿ ಕೊಳ್ಳುವಲ್ಲಿ ಬೌಲರ್‌ಗಳು ವಿಫ‌ಲ ವಾಗುತ್ತಿರುವುದು ಬೆಂಗಳೂರು ತಂಡದ ದೊಡ್ಡ ದುರಂತ!

ಇಂದು ಆರ್‌ಸಿಬಿ-ಚೆನ್ನೈ ಮರು ಪಂದ್ಯ
ಮೊದಲ ಪಂದ್ಯದಲ್ಲಿ 70ಕ್ಕೆ ಕುಸಿದಿದ್ದ ಬೆಂಗಳೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ