ಡೆಲ್ಲಿ ಕಪ್ತಾನನಿಗೆ ಕಪ್‌ ಎತ್ತುವ ವಿಶ್ವಾಸ

Team Udayavani, Apr 16, 2019, 9:36 AM IST

ಹೈದರಾಬಾದ್‌: ರವಿವಾರ ರಾತ್ರಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಅವರದೇ ಅಂಗಳದಲ್ಲಿ ಊಹಿಸಲೂ ಆಗದ ರೀತಿಯಲ್ಲಿ ಕೆಡವಿದ ಡೆಲ್ಲಿ ಕ್ಯಾಪಿಟಲ್ಸ್‌ ಈಗ ಅಂಕಪಟ್ಟಿಯಲ್ಲಿ ಒಮ್ಮೆಲೇ ದ್ವಿತೀಯ ಸ್ಥಾನಕ್ಕೆ ನೆಗೆದಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡೆಲ್ಲಿ ಕಪ್ತಾನ ಶ್ರೇಯಸ್‌ ಅಯ್ಯರ್‌, ಈ ಬಾರಿ ತಮಗೆ ಐಪಿಎಲ್‌ ಚಾಂಪಿಯನ್‌ ಆಗುವ ವಿಶ್ವಾಸವಿದೆ ಎಂದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ 7 ವಿಕೆಟಿಗೆ 155 ರನ್‌ ಗಳಿಸಿದರೆ, ಹೈದರಾಬಾದ್‌ ನಾಟಕೀಯ ಕುಸಿತ ಕಂಡು 18.5 ಓವರ್‌ಗಳಲ್ಲಿ 116 ರನ್ನಿಗೆ ಕುಸಿಯಿತು. ವೇಗಿಗಳಾದ ಕಾಗಿಸೊ ರಬಾಡ (22ಕ್ಕೆ 4), ಕ್ರಿಸ್‌ ಮಾರಿಸ್‌ (22ಕ್ಕೆ 3) ಮತ್ತು ಕೀಮೊ ಪೌಲ್‌ (17ಕ್ಕೆ 3) ಸೇರಿಕೊಂಡು ಸನ್‌ರೈಸರ್ ಕತೆ ಮುಗಿಸಿದರು.

2ಕ್ಕೆ 101; ಆಲೌಟ್‌ 116
ಡೇವಿಡ್‌ ವಾರ್ನರ್‌ (51) ಮತ್ತು ಜಾನಿ ಬೇರ್‌ಸ್ಟೊ (41) ಆರಂಭ ಕಂಡಾಗ ಈ ಪಂದ್ಯವನ್ನು ಹೈದರಾಬಾದ್‌ ದೊಡ್ಡ ಅಂತರದಿಂದ ಬಹಳ ಸುಲಭದಲ್ಲಿ ಗೆಲ್ಲುತ್ತದೆಂದು ಭಾವಿಸಲಾಗಿತ್ತು. ಆದರೆ ಮುಂದಿನದ್ದೆಲ್ಲ ಕ್ರಿಕೆಟಿನ ನಂಬಲಾಗದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸ್ವತಃ ಡೆಲ್ಲಿ ಕೂಡ ನಿರೀಕ್ಷಿಸದ ರೀತಿಯಲ್ಲಿ ವಿಲಿಯಮ್ಸನ್‌ ಪಡೆ ಬಡಬಡನೆ ವಿಕೆಟ್‌ ಕಳೆದುಕೊಂಡು ವಿಲವಿಲ ಒದ್ದಾಡಿತು. 16ನೇ ಓವರಿನಲ್ಲಿ 2 ವಿಕೆಟಿಗೆ 101 ರನ್‌ ಬಾರಿಸಿ ಗೆಲುವಿನತ್ತ ಮುಖ ಮಾಡಿದ್ದ ಹೈದರಾಬಾದ್‌ 116ಕ್ಕೆ ತಲಪುವಷ್ಟರಲ್ಲಿ ಆಲೌಟ್‌ ಆಗಿತ್ತು!
ವಾರ್ನರ್‌, ಬೇರ್‌ಸ್ಟೊ ಹೊರತುಪಡಿಸಿ ಉಳಿದವರೆಲ್ಲ ಸೇರಿ ಪೇರಿಸಿದ ರನ್‌ ಬರೀ 19. ಆರಂಭಿಕರನ್ನು ಬಿಟ್ಟು ಉಳಿದವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ; ಒಂದೇ ಒಂದು ಬೌಂಡರಿ ಕೂಡ ಹೊಡೆಯಲಿಲ್ಲ. ಇಬ್ಬರು ಖಾತೆಯನ್ನೇ ತೆರೆಯಲಿಲ್ಲ. ಕೂಟದ ಆರಂಭದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕ ರಿಸಿದ್ದ ಹೈದರಾಬಾದ್‌ ಈ ಆಘಾತಕಾರಿ ಸೋಲಿನಿಂದ 6ನೇ ಸ್ಥಾನಕ್ಕೆ ಕುಸಿದಿದೆ.

ಕನಸು ನನಸಾದ ಕ್ಷಣ…
ಈ ಸಂದರ್ಭದಲ್ಲಿ ಮಾತಾಡಿದ ಪಂದ್ಯಶ್ರೇಷ್ಠ ಕ್ರಿಕೆಟಿಗ ಕೀಮೊ ಪೌಲ್‌, “ಇದು ಕನಸು ನನಸಾದ ಕ್ಷಣ’ ಎಂದು ಸಂಭ್ರಮಿಸಿದ್ದಾರೆ.
“ಐಪಿಎಲ್‌ ಜಗತ್ತಿನ ಅತೀ ದೊಡ್ಡ ಕ್ರಿಕೆಟ್‌ ಲೀಗ್‌. ಇಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬುದು ನನ್ನ ಕನಸಾಗಿತ್ತು. ಇದು ಇಂದು ನಿಜವಾಗಿದೆ’ ಎಂದರು.
ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ 4 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರೂ ಕೀಮೊ ಪೌಲ್‌ ಹೈದರಾಬಾದ್‌ನ ಅಗ್ರ ಕ್ರಮಾಂಕದ 3 ಪ್ರಮುಖ ವಿಕೆಟ್‌ಗಳನ್ನು ಕಿತ್ತು ಮಿಂಚಿದರು. ಬೇರ್‌ಸ್ಟೊ ವಿಕೆಟ್‌ ಕಿತ್ತು ಮೊದಲ ಬ್ರೇಕ್‌ ಒದಗಿಸಿದ ಪೌಲ್‌, ಬಳಿಕ ಕೇನ್‌ ವಿಲಿಯಮ್ಸನ್‌ ಮತ್ತು ರಿಕ್ಕಿ ಭುಯಿ ವಿಕೆಟ್‌ಗಳನ್ನೂ ಹಾರಿಸಿದರು.

ವಿಲಿಯಮ್ಸನ್‌ಗೆ ನಿರಾಸೆ
ಮರಳಿ ತಂಡವನ್ನು ಸೇರಿಕೊಂಡ ಕೇನ್‌ ವಿಲಿಯಮ್ಸನ್‌ ಈ ಸೋಲಿಗೆ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. “ಡೆಲ್ಲಿಯನ್ನು ನಿಯಂತ್ರಿಸಿದ್ದು ನಿಜಕ್ಕೂ ಒಳ್ಳೆಯ ಪ್ರಯತ್ನ. ಆದರೆ ಚೇಸಿಂಗ್‌ ವೇಳೆ ನಾವು ಅಮೋಘ ಆರಂಭ ಸಾಧಿಸಿಯೂ ಸೋಲು ಕಾಣುವಂತಾದದ್ದು ಬೇಸರದ ಸಂಗತಿ. ಜತೆಯಾಟವನ್ನು ಕಟ್ಟಲು ನಾವು ವಿಫ‌ಲರಾದೆವು. ಎಲ್ಲ ಶ್ರೇಯಸ್ಸು ಡೆಲ್ಲಿ ಬೌಲರ್‌ಗಳಿಗೆ ಸಲ್ಲಬೇಕು. ಈ ಕೂಟವೀಗ ಮತ್ತೂಂದು ಮಜಲನ್ನು ಕಾಣುತ್ತಿದೆ. ಇಲ್ಲಿ ಯಾರೂ ಯಾರನ್ನು ಬೇಕಾದರೂ ಸೋಲಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಜ ಹೈದರಾಬಾದ್‌ ವಿರುದ್ಧ ಡೆಲ್ಲಿ ಕೇವಲ 2ನೇ ಸಲ ತನ್ನ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಕ್ಕೂ ಮುನ್ನ 2015ರ ವಿಶಾಖಪಟ್ಟಣ ಪಂದ್ಯದಲ್ಲಿ 4 ರನ್ನುಗಳ ಜಯ ಸಾಧಿಸಿತ್ತು. ಇದಕ್ಕೂ ಹಿಂದಿನ, ಕಳೆದ 7 ಚೇಸಿಂಗ್‌ನಲ್ಲಿ ಹೈದರಾಬಾದ್‌ ಆರರಲ್ಲಿ ಜಯ ಸಾಧಿಸಿತ್ತು.
ಜ ಹೈದರಾಬಾದ್‌ ವಿರುದ್ಧ ಅವರದೇ ಅಂಗಳದಲ್ಲಿ ಡೆಲ್ಲಿ ಕೇವಲ 2ನೇ ಜಯ ಸಾಧಿಸಿತು. ಡೆಲ್ಲಿ ವಿರುದ್ಧ ಇಲ್ಲಿ ಆಡಲಾದ ಹಿಂದಿನ 4 ಪಂದ್ಯಗಳಲ್ಲಿ ಹೈದರಾಬಾದ್‌ ಮೂರನ್ನು ಗೆದ್ದಿತ್ತು.
ಜ ಸನ್‌ರೈಸರ್ ಹೈದರಾಬಾದ್‌ 100 ಐಪಿಎಲ್‌ ಪಂದ್ಯಗಳನ್ನಾಡಿದ 8ನೇ ತಂಡವಾಗಿ ಹೊರಹೊಮ್ಮಿತು. 2013ರಲ್ಲಿ ಸನ್‌ರೈಸರ್ ಐಪಿಎಲ್‌ಗೆ ಪದಾರ್ಪಣೆ ಮಾಡಿತ್ತು.
ಜ ಹೈದರಾಬಾದ್‌ ಕೊನೆಯ 8 ವಿಕೆಟ್‌ಗಳಿಂದ ಕೇವಲ 15 ರನ್‌ ಗಳಿಸಿತು. ಇದು ಐಪಿಎಲ್‌ನಲ್ಲಿ ಕೊನೆಯ 8 ವಿಕೆಟ್‌ಗಳಿಂದ ದಾಖಲಾದ ಅತೀ ಕಡಿಮೆ ಮೊತ್ತವಾಗಿದೆ. ಇದಕ್ಕೂ ಮುನ್ನ 2008ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 29 ರನ್‌ ಅಂತರದಲ್ಲಿ ಕೊನೆಯ 8 ವಿಕೆಟ್‌ ಉದುರಿಸಿಕೊಂಡದ್ದು ದಾಖಲೆಯಾಗಿತ್ತು.
ಜ ಭುವನೇಶ್ವರ್‌ ಕುಮಾರ್‌ ಹೈದರಾಬಾದ್‌ ಪರ 100 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ಒಂದೇ ತಂಡದ ಪರ 100 ವಿಕೆಟ್‌ ಉರುಳಿಸಿದ 5ನೇ ಬೌಲರ್‌ ಎನಿಸಿದರು. ಉಳಿದವರೆಂದರೆ ಲಸಿತ ಮಾಲಿಂಗ (ಮುಂಬೈ ಪರ 157), ಹರ್ಭಜನ್‌ ಸಿಂಗ್‌ (ಮುಂಬೈ ಪರ 127), ಸುನೀಲ್‌ ನಾರಾಯಣ್‌ (ಕೆಕೆಆರ್‌ ಪರ 117) ಮತ್ತು ಡ್ವೇನ್‌ ಬ್ರಾವೊ (ಚೆನ್ನೈ ಪರ 100).
ಜ ಭುವನೇಶ್ವರ್‌ ಕುಮಾರ್‌ ಇಲ್ಲಿನ “ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಅತ್ಯಧಿಕ 34 ವಿಕೆಟ್‌ ಕಿತ್ತ ಬೌಲರ್‌ ಎಂಬ ದಾಖಲೆ ಬರೆದರು. ಭುವನೇಶ್ವರ್‌ ಮತ್ತು ಅಮಿತ್‌ ಮಿಶ್ರಾ ಇಲ್ಲಿ ಒಟ್ಟು 32 ವಿಕೆಟ್‌ಗಳೊಂದಿಗೆ ರವಿವಾರದ ಪಂದ್ಯ ಆರಂಭಿಸಿದ್ದರು. ಆದರೆ ಮಿಶ್ರಾಗೆ ವಿಕೆಟ್‌ ಸಿಗಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

 • ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ....

 • ಹೊಸದಿಲ್ಲಿ: ಆತಿಥೇಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಎರಡನೇ ಮುಖಾಮುಖೀ ಕೋಟ್ಲಾದಲ್ಲಿ ನಡೆಯಲಿದೆ. ಶನಿವಾರದ ಎರಡನೇ ಪಂದ್ಯದಲ್ಲಿ...

 • ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ ತಂಡದ ಅಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ತನ್ನ ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯ ಕ್ರಿಕೆಟ್‌ನಿಂದ ದೂರವಿದ್ದ ಸಮಯ ಉತ್ತಮ ಕ್ರಿಕೆಟಗನಾಗಿಸಲು...

 • ಕೋಲ್ಕತಾ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗದೆ ಕೂಟದಿಂದ ಬಹುತೇಕ ಹೊರಬಿದ್ದ ಮೇಲೆ ಅಬ್ಬರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು...

 • ಕೋಲ್ಕತಾ: ಪ್ಲೇ ಆಫ್ ನಿಂದ ಬಹುತೇಕ ದೂರವಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ. "ಈಡನ್‌...

ಹೊಸ ಸೇರ್ಪಡೆ

 • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

 • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

 • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

 • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

 • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

 • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...