ಸೌರವ್‌ ಎತ್ತಿಕೊಂಡಿದ್ದು ವಿಶೇಷ: ರಿಷಬ್‌ ಪಂತ್‌

Team Udayavani, Apr 24, 2019, 1:20 AM IST

ಜೈಪುರ: ರಿಷಬ್‌ ಪಂತ್‌ ಸಿಕ್ಸರ್‌ ಬಾರಿಸಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಾಗ ಮೈದಾನಕ್ಕೆ ಓಡೋಡಿ ಬಂದ ತಂಡದ ಮಾರ್ಗದರ್ಶಿ ಸೌರವ್‌ ಗಂಗೂಲಿ ಯುವ ಬ್ಯಾಟ್ಸ್‌ಮನ್‌ ಅನ್ನು ಎತ್ತಿಕೊಂಡು ಜಯವನ್ನು ಸಂಭ್ರಮಿಸಿದ್ದಾರೆ. ಸೋಮವಾರ ರಾತ್ರಿ ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿದ ಅನಂತರ ಈ ಕುರಿತು ಪ್ರತಿಕ್ರಿಯಿಸಿದ ರಿಷಬ್‌ ಪಂತ್‌ ಅವರು ಗಂಗೂಲಿ ಎತ್ತಿಕೊಂಡ ಆ ಕ್ಷಣ ವಿಶೇಷ ಭಾವನೆ ಮೂಡಿಸಿತ್ತು ಎಂದು ಹೇಳಿದ್ದಾರೆ.

ಮೊದಲ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ 6 ವಿಕೆಟಿಗೆ 191 ರನ್‌ ಹೊಡೆದರೆ, ಡೆಲ್ಲಿ 19. 2 ಓವರ್‌ಗಳಲ್ಲಿ 4 ವಿಕೆಟಿಗೆ 192 ರನ್‌ ಬಾರಿಸಿ 7ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂತ್‌ ಅಜೇಯ 78 ರನ್‌ ಬಾರಿಸಿದರು. “ಪಂದ್ಯವನ್ನು ಮುಗಿಸಿ ಮೈದಾನ ದಿಂದ ಹಿಂದಿರುಗುತ್ತಿದ್ದಾಗ ಪ್ರತಿ ಯೊಬ್ಬರೂ ಪ್ರೀತಿ, ಗೌರವದಿಂದ ನೋಡಿಕೊಂಡರು. ಸೌರವ್‌ ಸರ್‌ ನನ್ನನ್ನು ಎತ್ತಿಕೊಂಡಾಗ ಒಂದು ರೀತಿಯ ವಿಶೇಷ ಭಾವನೆ ಮೂಡಿತು. ಅದೊಂದು ವಿಭಿನ್ನ ಅನುಭವ’ ಎಂದು ಪಂತ್‌ ಹೇಳಿದ್ದಾರೆ.

ಆರಂಭಕಾರ ಪೃಥ್ವಿ ಶಾ (42) ಮತ್ತು ರಿಷಬ್‌ ಪಂತ್‌ 3 ವಿಕೆಟ್‌ ಜತೆಯಾಟದಲ್ಲಿ 82 ರನ್‌ ಪೇರಿಸಿದ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ 192 ಗುರಿಯನ್ನು ಸುಲಭವಾಗಿ ತಲುಪುವಂತಾಯಿತು. ಮತ್ತೋರ್ವ ಆರಂಭಕಾರ ಶಿಖರ್‌ ಧವನ್‌ 27 ಎಸೆತಗಳಲ್ಲಿ 54 ರನ್‌ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು (8 ಬೌಂಡರಿ, 2 ಸಿಕ್ಸರ್‌). ಧವನ್‌ ಔಟಾದ ಬಳಿಕ ನಾಯಕ ಶ್ರೇಯಸ್‌ ಅಯ್ಯರ್‌ ಬೇಗನೆ ಪೆವಿಲಿಯನ್‌ ಸೇರಿದರು. ಅನಂತರ ಬಂದ ಯುವ ಆಟಗಾರ ರಿಷಬ್‌ ಪಂತ್‌ 36 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 78 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಆಟದಿಂದ ಪಂತ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಯೂ ಆರ್‌ ವಾವ್‌
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಜಯ ತಂದುಕೊಟ್ಟು ತಂಡವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದ ಪಂತ್‌ ಅವರನ್ನು ಗಂಗೂಲಿ “ಯೂ ಆರ್‌ ವಾವ್‌’ ಎಂದು ಹೊಗಳಿದ್ದಾರೆ.
ಪಂತ್‌ ಅವರ ಫಿನಿಷಿಂಗ್‌ ಶಾಟ್‌ ಅನಂತರ ಮೈದಾನಕ್ಕೆ ಬಂದ ಗಂಗೂಲಿ ಪಂತ್‌ ಅವರನ್ನು ಎತ್ತಿಕೊಂಡಿದ್ದರು. ಅನಂತರ ಟ್ವಿಟರ್‌ನಲ್ಲಿ ಪಂತ್‌ ಅವರನ್ನು ಹೊಗಳಿರುವ ಗಂಗೂಲಿ “ನೀನು ಅರ್ಹ ಆಟಗಾರ. ಯೂ ಆರ್‌ ವಾವ್‌’ ಎಂದು ಬರೆದುಕೊಂಡಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಜೈಪುರದಲ್ಲಿ ಡೆಲ್ಲಿ ವಿರುದ್ಧ 6 ಪಂದ್ಯಗಳನ್ನಾಡಿರುವ ರಾಜಸ್ಥಾನ್‌ 2ನೇ ಬಾರಿಗೆ ಸೋತಿದೆ. 2012ರ ಆವೃತ್ತಿಯ ಜೈಪುರ ಪಂದ್ಯದಲ್ಲಿ ಡೆಲ್ಲಿ 142 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿ ಜಯ ಸಾಧಿಸಿತ್ತು.

– ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ್‌ ವಿರುದ್ಧ 192 ರನ್‌ ಚೇಸ್‌ ಮಾಡಿರು ವುದು ಜಂಟಿ ದಾಖಲೆಯಾಗಿದೆ. ಈ ಋತುವಿನ ಆರಂಭದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 199 ರನ್‌ ಚೇಸ್‌ ಮಾಡಿತ್ತು. 2014ರ ಶಾರ್ಜಾದಲ್ಲಿ ನಡೆದ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 192 ರನ್‌ಗಳ ಗುರಿ ತಲುಪಿತ್ತು.

– ಆ್ಯಶrನ್‌ ಟರ್ನರ್‌ ಟಿ20 ಕ್ರಿಕೆಟಿನಲ್ಲಿ ಸತತ 5ನೇ ಬಾರಿ ಶೂನ್ಯಕ್ಕೆ ಔಟಾದ ಮೊದಲ ಆಟಗಾರ ಎಂದೆನಿಸಿಕೊಂಡರು.

– ಟರ್ನರ್‌ ಐಪಿಎಲ್‌ನ ಸತತ 3 ಇನ್ನಿಂಗ್‌ನಲ್ಲಿ ಶೂನ್ಯಕ್ಕೆ ಔಟಾದ 6ನೇ ಮತ್ತು ಮೊದಲ ವಿದೇಶಿ ಆಟಗಾರ.

– ರಾಜಸ್ಥಾನ್‌ ಪರ ರಹಾನೆ ಟಿ20 ಕ್ರಿಕೆಟ್‌ನಲ್ಲಿ 3 ಸಾವಿರ ರನ್‌ ಪೂರೈಸಿದರು (3023).


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ