ಮೊಯಿನ್‌ ಸಾಹಸದಿಂದ ವಿನ್‌: ಕೊಹ್ಲಿ

Team Udayavani, Apr 21, 2019, 6:00 AM IST

ಕೋಲ್ಕತಾ: ಬಿಗ್‌ ಹಿಟ್ಟರ್‌ ಎಬಿ ಡಿ ವಿಲಿಯರ್ ಗೈರಲ್ಲಿ ಮೊಯಿನ್‌ ಅಲಿ ಅಮೋಘ ಪ್ರದರ್ಶನ ನೀಡಿ ಆರ್‌ಸಿಬಿಗೆ ಮೇಲುಗೈ ಒದಗಿಸಿದರು ಎಂಬುದಾಗಿ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಜತೆಗೆ ಎಬಿಡಿ ಅನುಪಸ್ಥಿತಿಯಲ್ಲಿ ತಾನು ಕೊನೆಯ ವರೆಗೂ ಬ್ಯಾಟಿಂಗ್‌ ವಿಸ್ತರಿಸುವುದು ಅನಿವಾರ್ಯವಾಗಿತ್ತು ಎಂದೂ ಹೇಳಿದರು.

ಶುಕ್ರವಾರ ರಾತ್ತಿ ‘ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ದೊಡ್ಡ ಮೊತ್ತದ ರೋಚಕ ಹೋರಾಟದಲ್ಲಿ ಆರ್‌ಸಿಬಿ 10 ರನ್ನುಗಳಿಂದ ಕೆಕೆಆರ್‌ಗೆ ಸೋಲುಣಿಸಿ ತನ್ನ 2ನೇ ಜಯವನ್ನು ದಾಖಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 213 ರನ್‌ ಬಾರಿಸಿದರೆ, ಕೆಕೆಆರ್‌ 5 ವಿಕೆಟಿಗೆ 203ರ ತನಕ ಬಂದು ಶರಣಾಯಿತು. 9 ಪಂದ್ಯಗಳಲ್ಲಿ 6ನೇ ಸೋಲನುಭವಿಸಿದ ಕೆಕೆಆರ್‌ ಈಗ 6ನೇ ಸ್ಥಾನಕ್ಕೆ ಕುಸಿದಿದೆ.

‘ನನ್ನ ಆಟಕ್ಕೆ ಅಲಿಯೇ ಕಾರಣ’
‘ದ್ವಿತೀಯ ಟೈಮ್‌ ಔಟ್ ವೇಳೆ ನಮ್ಮದು 170-175 ರನ್ನುಗಳ ಗುರಿ ಆಗಿತ್ತು. ಸ್ಕೋರ್‌ ಇನ್ನೂರರ ಗಡಿ ದಾಟುತ್ತದೆಂದು ಭಾವಿಸಿರಲಿಲ್ಲ. ಮೊಯಿನ್‌ ಅಲಿ ಮುನ್ನುಗ್ಗಿ ಬಾರಿಸಿದ್ದರಿಂದ ನನ್ನಿಂದ ಇಂಥದೊಂದು ಆಟ ಸಾಧ್ಯವಾಯಿತು. ತಾನಿನ್ನು ಬಿರುಸಿನ ಆಟಕ್ಕೆ ಇಳಿಯುತ್ತೇನೆ ಎಂದು ಮೊಯಿನ್‌ ಹೇಳಿದಾಗ ನಾನು ಸಮ್ಮತಿಸಿದೆ. ಕೆಲವೇ ಓವರ್‌ಗಳಲ್ಲಿ ಅವರು ಪಂದ್ಯದ ಗತಿಯನ್ನೇ ಬದಲಿಸಿದರು’ ಎಂಬುದಾಗಿ ಕೊಹ್ಲಿ ಹೇಳಿದರು.

ಮೊಯಿನ್‌ಗೇ ಒಂದೇ ಓವರ್‌
ಬೌಲಿಂಗ್‌ ವೇಳೆ ಮೊಯಿನ್‌ಗೆ ಲಭಿಸಿದ್ದು ಒಂದು ಓವರ್‌ ಮಾತ್ರ. ಅದು ಪಂದ್ಯದ ಅಂತಿಮ ಓವರ್‌ ಆಗಿತ್ತು. ಕೆಕೆಆರ್‌ ಗೆಲುವಿಗೆ 24 ರನ್‌ ಅಗತ್ಯವಿತ್ತು. ರಸೆಲ್-ರಾಣಾ ಭಾರೀ ಜೋಶ್‌ನಲ್ಲಿದ್ದುದರಿಂದ ಇದೇನೂ ಅಸಾಧ್ಯ ಸವಾಲಾಗಿರಲಿಲ್ಲ. ‘ಚಿನ್ನಸ್ವಾಮಿ’ಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದ ವೇಳೆ ರಸೆಲ್ ಎತ್ತಿದ ರೌದ್ರಾವತಾರ ಮತ್ತೆ ಕಣ್ಮುಂದೆ ಸುಳಿಯಿತು!

ಆದರೆ ಮೊಯಿನ್‌ ಮೊದಲ ಎಸೆತ ಡಾಟ್ ಆಯಿತುಬಳಿಕ ಒಂದು ಸಿಂಗಲ್ ಮಾತ್ರ ಲಭಿಸಿತು. ಅನಂತರ ರಸೆಲ್ ಸಿಕ್ಸರ್‌ ಎತ್ತಿದರು. 4ನೆಯದು ಮತ್ತೆ ಡಾಟ್ ಎಸೆತ. ಬೆನ್ನಲ್ಲೇ ರಸೆಲ್ ರನೌಟ್. ರಾಣಾ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಎತ್ತಿದರೂ ಲಾಭವಾಗಲಿಲ್ಲ.

ಸ್ಟೇನ್‌ ಮೊದಲ ಪಂದ್ಯ
ಅನುಭವಿ ವೇಗಿ ಡೇಲ್ ಸ್ಟೇನ್‌ ಪ್ರಸಕ್ತ ಋತುವಿನ ಮೊದಲ ಪಂದ್ಯವಾಡಿದರು. ಅವರಿಗೆ ಮೊದಲ ಎಸೆತದಲ್ಲೇ ವಿಕೆಟ್ ಸಿಗುವ ಸಾಧ್ಯತೆ ಇತ್ತು. ಕ್ಯಾಚ್ ಡ್ರಾಪ್‌ ಆದ ಕಾರಣ ಇದು ಕೈತಪ್ಪಿತು. ಮೊದಲ ಸ್ಪೆಲ್ನ 3 ಓವರ್‌ಗಳಲ್ಲಿ ಕೇವಲ 22 ರನ್‌ ನೀಡಿದ ಸ್ಟೇನ್‌ಗೆ 18ನೇ ಓವರಿನಲ್ಲಿ ಹಿಡಿತ ಸಾಧಿಸಲಾಗಲಿಲ್ಲ. ರಾಣಾ 18 ರನ್‌ ಸಿಡಿಸಿದರು.

ಎಬಿಡಿಗೆ ಗೆಲುವಿನ ಅಪ್ಪುಗೆ
ಪಂದ್ಯಕ್ಕೂ ಮುನ್ನ ಎಬಿಡಿ ತುಸು ಅಸೌಖ್ಯಗೊಂಡಿದ್ದರಿಂದ ಅವರಿಗೆ ವಿಶ್ರಾಂತಿ ನೀಡಲು ಕೊಹ್ಲಿ ಬಯಸಿದರು. ‘ಈ ಪಂದ್ಯದಿಂದ ಹೊರಗುಳಿಯಬೇಕಾದದ್ದು ಎಬಿಡಿಗೆ ಬೇಸರವಾದರೂ ಗೆದ್ದರೆ ನಿಮ್ಮನ್ನು ಬಂದು ಅಪ್ಪಿಕೊಳ್ಳುತ್ತೇನೆ ಎಂಬುದಾಗಿಯೂ ಅವರಲ್ಲಿ ಹೇಳಿದ್ದೆ’ ಎಂದು ಕೊಹ್ಲಿ ತಿಳಿಸಿದರು. ಕೊನೆಗೆ ಈ ಗೆಲುವಿನ ಅಪ್ಪುಗೆಯೂ ಕಂಡುಬಂತು.ಈ ಪಂದ್ಯದಲ್ಲಿ ಕೊಹ್ಲಿ 58 ಎಸೆತಗಳಿಂದ 100 ರನ್‌ ಬಾರಿಸಿದರೆ (9 ಬೌಂಡರಿ, 4 ಸಿಕ್ಸ್‌), ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಮೊಯಿನ್‌ ಅಲಿ ಕೇವಲ 28 ಎಸೆತಗಳಿಂದ 66 ರನ್‌ ಸಿಡಿಸಿದರು. ಇದರಲ್ಲಿ 6 ಸಿಕ್ಸರ್‌, 5 ಬೌಂಡರಿ ಒಳಗೊಂಡಿತ್ತು.

ಕಣ್ಣೀರಿಟ್ಟ ಕುಲದೀಪ್‌
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ಸ್ಪಿನ್ನರ್‌ ಕುಲದೀಪ್‌ ಅವರ ಒಂದೇ ಓವರ್‌ನಲ್ಲಿ ಮೊಯಿನ್‌ ಅಲಿ 27 ರನ್‌ ಸಿಡಿಸುವ ಮೂಲಕ ಅಬ್ಬರಿಸಿದ್ದರು. ಆದರೆ ಓವರ್‌ನ ಕೊನೆಯ ಎಸೆತದಲ್ಲಿ ಮೊಯಿನ್‌ ಅಲಿಯನ್ನು ಔಟ್‌ ಮಾಡಿದ ಕುಲದೀಪ್‌ ಸಂತಸ ಆಚರಿಸಲಿಲ್ಲ. ಬದಲಿಗೆ ಚಚ್ಚಿಸಿಕೊಂಡಿದ್ದ ಸಿಕ್ಸರ್‌ಗಳಿಂದ ನೋವು ತಡೆಯಲಾಗದೆ ಕಣ್ಣೀರಾದರು. ಒಂದು ಕ್ಷಣ ಕುಳಿತಲ್ಲಿಯೇ ಬಿಕ್ಕಿಬಿಕ್ಕಿ ಅತ್ತರು. ಕೂಡಲೇ ಸಹ ಆಟಗಾರರು ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
• ಕೆಕೆಆರ್‌ ಮೊದಲ ಬಾರಿಗೆ ತವರಿನ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿತು.
• 2017ರ ಬಳಿಕ ಕೆಕೆಆರ್‌ ವಿರುದ್ಧ ಆಡಲಾದ 6 ಪಂದ್ಯಗಳಲ್ಲಿ ಆರ್‌ಸಿಬಿ ಮೊದಲ ಜಯ ದಾಖಲಿಸಿತು. ಕೆಕೆಆರ್‌ ವಿರುದ್ಧ ಆರ್‌ಸಿಬಿ ಕೊನೆಯ ಜಯ ಸಾಧಿಸಿದ್ದು 2016ರಲ್ಲಿ. ಈ ಗೆಲುವು ಕೂಡ ಈಡನ್‌ನಲ್ಲೇ ಒಲಿದಿತ್ತು.
• ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 5 ಶತಕ ಬಾರಿಸಿದರು. ಈ ಸಾಧನೆಯಲ್ಲಿ ಅವರಿಗೆ 2ನೇ ಸ್ಥಾನ. 6 ಸೆಂಚುರಿ ಬಾರಿಸಿದ ಕ್ರಿಸ್‌ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.
• ಕೊಹ್ಲಿ ಟಿ20ಯಲ್ಲಿ 5 ಶತಕ ಹೊಡೆದ ಭಾರತದ 2ನೇ ಬ್ಯಾಟ್ಸ್‌ ಮನ್‌. ಅವರ ಐದೂ ಶತಕಗಳು ಐಪಿಎಲ್ನಲ್ಲೇ ಬಂದಿವೆ. ರೋಹಿತ್‌ ಶರ್ಮ 6 ಶತಕ ಬಾರಿಸಿದ್ದು ಭಾರತದ ದಾಖಲೆ.
• ಕೊಹ್ಲಿ ಎಲ್ಲ 5 ಟಿ20 ಶತಕಗಳನ್ನು ತಂಡದ ನಾಯಕರಾಗಿಯೇ ದಾಖಲಿಸಿದರು. ಅವರು ನಾಯಕರಾಗಿ 5 ಪ್ಲಸ್‌ ಶತಕ ಹೊಡೆದ ವಿಶ್ವದ 2ನೇ ಕ್ರಿಕೆಟಿಗ. ಮೈಕಲ್ ಕ್ಲಿಂಜರ್‌ ನಾಯಕನಾಗಿ 6 ಟಿ20 ಶತಕಗಳನ್ನು ಬಾರಿಸಿದ್ದು ದಾಖಲೆ.

• ಕುಲದೀಪ್‌ ಯಾದವ್‌ 59 ರನ್‌ ನೀಡಿ ಟಿ20ಯಲ್ಲಿ ತಮ್ಮ ದುಬಾರಿ ಸ್ಪೆಲ್ ದಾಖಲಿಸಿದರು. ಇದು ಐಪಿಎಲ್ನಲ್ಲಿ ಸ್ಪಿನ್ನರ್‌ ಓರ್ವ ನೀಡಿದ ಅತ್ಯಧಿಕ ರನ್ನಿನ ಜಂಟಿ ದಾಖಲೆ. 2016ರಲ್ಲಿ ಮುಂಬೈ ವಿರುದ್ಧದ ವಿಶಾಖಪಟ್ಟಣ ಪಂದ್ಯದಲ್ಲಿ ಇಮ್ರಾನ್‌ ತಾಹಿರ್‌ ಕೂಡ 59 ರನ್‌ ನೀಡಿದ್ದರು.
• ಕುಲದೀಪ್‌ ಕೆಕೆಆರ್‌ ಪರ ದುಬಾರಿ ಸ್ಪೆಲ್ ದಾಖಲಿಸಿದ 2ನೇ ಬೌಲರ್‌ (59 ರನ್‌). 2013ರ ಮುಂಬೈ ಎದುರಿನ ಪಂದ್ಯದಲ್ಲಿ ರಿಯಾನ್‌ ಮೆಕ್‌ಲಾರೆನ್‌ 60 ರನ್‌ ನೀಡಿದ್ದರು. • ಐಪಿಎಲ್ನಲ್ಲಿ ಆರ್‌ಸಿಬಿ ಪರ 13 ಶತಕಗಳು ದಾಖಲಾದವು. ಇದೊಂದು ವಿಶ್ವದಾಖಲೆ. ವಿಶ್ವದ ಯಾವುದೇ ತಂಡ 11ಕ್ಕಿಂತ ಹೆಚ್ಚು ಶತಕ ಹೊಡೆದಿಲ್ಲ. ಐಪಿಎಲ್ನಲ್ಲಿ 11 ಸೆಂಚುರಿ ಬಾರಿಸಿರುವ ಪಂಜಾಬ್‌ ದ್ವಿತೀಯ ಸ್ಥಾನದಲ್ಲಿದೆ.
• ಐಪಿಎಲ್ನಲ್ಲಿ ಕೆಕೆಆರ್‌ ವಿರುದ್ಧ ಅತೀ ಹೆಚ್ಚು 8 ಶತಕಗಳು ದಾಖಲಾದವು.
• ಕೆಕೆಆರ್‌ನ ಬೌಲರ್‌ಗಳಿಬ್ಬರು ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ 50 ಪ್ಲಸ್‌ ರನ್‌ ನೀಡಿದರು (ಕುಲದೀಪ್‌ 59 ರನ್‌, ಪ್ರಸಿದ್ಧ್ ಕೃಷ್ಣ 52 ರನ್‌).
• ಆರ್‌ಸಿಬಿ ಕೊನೆಯ 5 ಓವರ್‌ಗಳಲ್ಲಿ 91 ರನ್‌ ಬಾರಿಸಿತು. ಇದು 16-20ನೇ ಓವರ್‌ ಅವಧಿಯಲ್ಲಿ ದಾಖಲಾದ 2ನೇ ಅತ್ಯಧಿಕ ಮೊತ್ತ. 2016ರ ಗುಜರಾತ್‌ ಎದುರಿನ ಪಂದ್ಯದಲ್ಲಿ ಆರ್‌ಸಿಬಿಯೇ 112 ರನ್‌ ಪೇರಿಸಿದ್ದು ದಾಖಲೆ.
• ಆ್ಯಂಡ್ರೆ ರಸೆಲ್ ಐಪಿಎಲ್ನಲ್ಲಿ 100 ಸಿಕ್ಸರ್‌ ಹೊಡೆದ 17ನೇ ಆಟಗಾರನೆನಿಸಿದರು. ಅವರ ಎಲ್ಲ 104 ಸಿಕ್ಸರ್‌ಗಳು ಕೆಕೆಆರ್‌ ಪರವಾಗಿಯೇ ಬಂದಿವೆ. ರಸೆಲ್ ಐಪಿಎಲ್ನಲ್ಲಿ ಒಂದೇ ತಂಡದ ಪರ 100 ಸಿಕ್ಸರ್‌ ಬಾರಿಸಿದ 10ನೇ ಆಟಗಾರ.
• ನಿತೀಶ್‌ ರಾಣಾ ಐಪಿಎಲ್ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು (38 ಇನ್ನಿಂಗ್ಸ್‌).
ಎಬಿಡಿಗೆ ಗೆಲುವಿನ ಅಪ್ಪುಗೆ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

  • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...