ಡೆಲ್ಲಿಗೆ ಸ್ಪೆಷಲ್ಡೇ; 5ನೇ ಮುಕುಟಕ್ಕೆ ಮುಂಬೈ ಕಾತರ
Team Udayavani, Nov 10, 2020, 6:22 AM IST
4 ಬಾರಿಯ ಚಾಂಪಿಯನ್ ಮುಂಬೈಗೆ ಮೊದಲ ಸಲ ಫೈನಲ್ಗೆ ಏರಿದ ಡೆಲ್ಲಿ ಸವಾಲು ಅಯ್ಯರ್ ಪಡೆ ಗೆದ್ದರೆ ಇತಿಹಾಸ; ಟ್ರೋಫಿ ಉಳಿಸಿಕೊಳ್ಳುವ ಯೋಜನೆಯಲ್ಲಿ ಮುಂಬೈ
ದುಬಾೖ: “ಸ್ಪೆಷಲ್ ಐಪಿಎಲ್ ಫೈನಲ್’ ಒಂದಕ್ಕೆ ವೇದಿಕೆ ಸಜ್ಜು ಗೊಂಡಿದೆ. ಸಾಮಾನ್ಯವಾಗಿ ಪ್ರತೀ ಸಲ ಹಿಂದಿನ ಚಾಂಪಿಯನ್ ತಂಡಗಳೇ ಪ್ರಶಸ್ತಿಗಾಗಿ ಹೋರಾಡುವುದರಿಂದ ಹೊಸಬರಿಗೆ ಕಿರೀಟ ಏರಿಸಿಕೊಳ್ಳುವ ಅವಕಾಶವೇ ಸಿಗುತ್ತಿರಲಿಲ್ಲ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪ್ರವೇಶದಿಂದ ಪ್ರಶಸ್ತಿ ಸಮರಕ್ಕೆ ಹೊಸ ಖದರು ಬಂದಿದೆ. ಡೆಲ್ಲಿಗೆ ಇದು ಚೊಚ್ಚಲ ಫೈನಲ್. ಗೆದ್ದರೆ ಇತಿಹಾಸ.
ಇನ್ನೊಂದೆಡೆ ಹಾಲಿ ಹಾಗೂ 4 ಬಾರಿಯ ಚಾಂಪಿಯನ್ ಮುಂಬೈ ಇದೆ. ರೋಹಿತ್ ಬಳಗವಿಲ್ಲಿ 5ನೇ ಕಿರೀಟದ ಮೇಲೆ ಕಣ್ಣಿಟ್ಟಿದೆ. ಮಂಗಳವಾರ ರಾತ್ರಿಯ ದುಬಾೖ ಹಣಾಹಣಿಯನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳೆಲ್ಲ ತುದಿಗಾಲಲ್ಲಿ ನಿಂತಿದ್ದಾರೆ. “ಫಾರ್ ಎ ಚೇಂಜ್’ ಎಂಬಂತೆ ಐಪಿಎಲ್ ಫೈನಲ್ ವಾರದ ನಡುವೆ ನಡೆಯುತ್ತಿದೆ.
ಮುಂಬೈ ಫೇವರಿಟ್, ಆದರೆ…
ಒಂದೆ ಸಾಲಲ್ಲಿ ಹೇಳುವು ದಾದರೆ ಮುಂಬೈ ನೆಚ್ಚಿನ ತಂಡ; ಅನಿಶ್ಚಿತ ಫಲಿತಾಂಶ ದಾಖಲಿಸುತ್ತ ಬಂದಿರುವ ಡೆಲ್ಲಿ ಇಲ್ಲಿನ “ಡಾರ್ಕ್ ಹಾರ್ಸ್’. ಗೆಲುವಿನ ಸಾಧ್ಯತೆ 50-50. ತಂಡದ ಬಲಾಬಲದ ಲೆಕ್ಕಾಚಾರದಲ್ಲಿ ಮುಂಬೈಗೆ ಅವಕಾಶ ಹೆಚ್ಚು. ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ, ಮೊದಲ ಕ್ವಾಲಿಫೈಯರ್ನಲ್ಲಿ ಡೆಲ್ಲಿಯನ್ನು ಬಗ್ಗುಬಡಿದ ಅಜೇಯ ದಾಖಲೆಯನ್ನು ಅದು ಹೊಂದಿದೆ.
ಮುಂಬೈ ಬ್ಯಾಟಿಂಗ್ ಲೈನ್ಅಪ್ ಸುದೀರ್ಘ. ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮ, ಇಶಾನ್ ಕಿಸನ್, ಸೂರ್ಯಕುಮಾರ್, ಪಾಂಡ್ಯ, ಪೊಲಾರ್ಡ್… ಹೀಗೆ 6ನೇ ಕ್ರಮಾಂಕದ ತನಕ ಚಿಂತೆ ಇಲ್ಲ. ಎಲ್ಲರೂ ಬಿಗ್ ಹಿಟ್ಟರ್ಗಳೇ. ಪಾಂಡ್ಯ, ಕೈರನ್ ಪೊಲಾರ್ಡ್ ಆಲ್ರೌಂಡ್ ಪ್ರದರ್ಶನಕ್ಕೂ ಸೈ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಬೌಲ್ಟ್ ಇಬ್ಬರೇ ಸೇರಿ ಎದುರಾಳಿ ಬ್ಯಾಟಿಂಗ್ ಸರದಿಯನ್ನು ಸೀಳಬಲ್ಲರು. ಇದಕ್ಕೆ ಮೊದಲ ಕ್ವಾಲಿಫೈಯರ್ ಪಂದ್ಯಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಅಲ್ಲಿ ಡೆಲ್ಲಿಯ 3 ವಿಕೆಟ್ ಖಾತೆ ತೆರೆಯುವ ಮೊದಲೇ ಹಾರಿಹೋಗಿತ್ತು.
ಮುಂಬೈ ಕ್ರಿಕೆಟಿಗರಿಂದ ಈ ಕೂಟದಲ್ಲಿ 130 ಸಿಕ್ಸರ್ ಸಿಡಿದಿವೆ. ಡೆಲ್ಲಿಯಿಂದ ಬಾರಿಸಲು ಸಾಧ್ಯವಾದದ್ದು 84 ಸಿಕ್ಸರ್ ಮಾತ್ರ. ಮುಂಬೈ ಯಶಸ್ಸಿನಲ್ಲಿ ಅನುಭವಿಗಳಿಗಿಂತ ಪ್ರತಿಭಾನ್ವಿತರ ಪಾತ್ರವೇ ದೊಡ್ಡದು. ಸೂರ್ಯಕುಮಾರ್ ಯಾದವ್ ಅವರಂತೂ 60 ಬೌಂಡರಿ, 10 ಸಿಕ್ಸರ್ ಸಿಡಿಸಿ ಎದುರಾಳಿಗಳ ಪಾಲಿಗೆ ಬೆಂಕಿಯುಂಡೆಯೇ ಆಗಿದ್ದಾರೆ. ಎಡಗೈ ಆಟಗಾರ ಇಶಾನ್ ಕಿಶನ್ ಅವರಂತೂ ಬರೋಬ್ಬರಿ 29 ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಒಟ್ಟಾರೆ, ಮುಂಬೈ ಒಂದು ಪರಿಪೂರ್ಣ ಟಿ20 ಪ್ಯಾಕೇಜ್. ಆದರೆ ಇವೆಲ್ಲದರ ಜತೆಗೆ ಅದೃಷ್ಟದ ಪಾತ್ರವೂ ಇಲ್ಲಿ ನಿರ್ಣಾಯಕ ಎಂಬುದನ್ನು ಮರೆಯುವಂತಿಲ್ಲ.
ಪಾಂಟಿಂಗ್ ಮಾಸ್ಟರ್ ಮೈಂಡ್
ಪ್ಲೇ ಆಫ್ನಲ್ಲಿ ಮುಂಬೈ ವಿರುದ್ಧ ಶೋಚನೀಯ ಪ್ರದರ್ಶನ ನೀಡಿದ್ದ ಡೆಲ್ಲಿ, ರವಿವಾರ ಹೈದರಾಬಾದ್ ವಿರುದ್ಧ ತೋರಿದ ಪರಾಕ್ರಮ ಅಸಾಮಾನ್ಯ. ಸೊನ್ನೆ ಸುತ್ತುವ ಪೃಥ್ವಿ ಶಾ ಅವರನ್ನು ಕೈಬಿಟ್ಟು ಸ್ಟೋಯಿನಿಸ್ ಅವರನ್ನು ಆರಂಭಿಕನನ್ನಾಗಿ ಇಳಿಸಿದ ಡೆಲ್ಲಿ ಕಾರ್ಯತಂತ್ರ ಅತ್ಯಂತ ಯಶಸ್ವಿಯಾಗಿದೆ. ಇದು ಕೋಚ್ ರಿಕಿ ಪಾಂಟಿಂಗ್ ಅವರ “ಮಾಸ್ಟರ್ ಮೈಂಡ್’ ಎಂಬುದರಲ್ಲಿ ಎರಡು ಮಾತಿಲ್ಲ. ಮುಂಬೈಯ ಮಾಜಿ ಕೋಚ್ ಆಗಿರುವ ಪಾಂಟಿಂಗ್ ಬಳಿ ಫೈನಲ್ಗಾಗಿ ಇನ್ನಷ್ಟು ಗೇಮ್ಪ್ಲ್ರಾನ್ ಇರಲೂಬಹುದು.
ಡೆಲ್ಲಿ ಮೇಲುಗೈ ಸಾಧಿಸಬೇಕಾದರೆ ಸ್ಟೋಯಿನಿಸ್-ಧವನ್ ಇಬ್ಬರೂ ಮತ್ತೂಮ್ಮೆ ಕ್ಲಿಕ್ ಆಗಬೇಕು. ಹೆಟ್ಮೈರ್ ಸಿಡಿಯಬೇಕು. ಬಿಗ್ ಫೈನಲ್ ಒಂದರಲ್ಲಿ ಮೊದಲ ಸಲ ತಂಡವನ್ನು ಮುನ್ನಡೆಸುವ ಅಯ್ಯರ್ ಒತ್ತಡ ಮುಕ್ತರಾಗಿರಬೇಕು. ರಿಷಭ್ ಪಂತ್, ಅಜಿಂಕ್ಯ ರಹಾನೆ ಹೆಚ್ಚಿನ ಬದ್ಧತೆ ತೋರಬೇಕು. ಎಲ್ಲರೂ ಈ ಅಂತಿಮ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರಷ್ಟೇ ಯಶಸ್ಸು ಸಾಧ್ಯ.
ವೇಗದ ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ 2 ಪ್ರಬಲ ಅಸ್ತ್ರಗಳನ್ನು ಹೊಂದಿದೆ-ರಬಾಡ (29 ವಿಕೆಟ್) ಮತ್ತು ನೋರ್ಜೆ (20 ವಿಕೆಟ್). ರವಿವಾರ ಮುನ್ನುಗ್ಗಿ ಬರುತ್ತಿದ್ದ ಹೈದರಾಬಾದ್ಗೆ ತಡೆಯೊಡ್ಡಿದ್ದೇ ರಬಾಡ ಎಂಬುದನ್ನು ಮರೆಯುವಂತಿಲ್ಲ. ತೃತೀಯ ವೇಗಿಯಾಗಿರುವ ಮಾರ್ಕಸ್ ಸ್ಟೋಯಿನಿಸ್ ಪಾತ್ರ ನಿರ್ಣಾಯಕವಾಗಲಿದೆ. ಆಸೀಸ್ ಸವ್ಯಸಾಚಿ 352 ರನ್ ಜತೆಗೆ 12 ವಿಕೆಟ್ ಕೂಡ ಹಾರಿಸಿದ್ದಾರೆ. ಸ್ಪಿನ್ನಿಗೆ ಆರ್. ಅಶ್ವಿನ್-ಅಕ್ಷರ್ ಪಟೇಲ್ ಇದ್ದಾರೆ.
ಅಯ್ಯರ್ ಕೂಡ ಮುಂಬೈಕರ್
ಮುಂಬೈ ಗೆದ್ದರೆ ಮೊದಲ ಸಲ ಕಪ್ ಉಳಿಸಿಕೊಂಡ ಹಿರಿಮೆಗೆ ಪಾತ್ರವಾಗಲಿದೆ. ಸೋತರೆ ಬೇಸರವಂತೂ ಇರಲಿಕ್ಕಿಲ್ಲ. ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಗಿದ್ದರೂ ಮುಂಬಯಿಯವರು. ಈ ನಂಟು ಖಂಡಿತವಾಗಿಯೂ ಸಮಾಧಾನ ಮೂಡಿಸಲಿದೆ!
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೃಣಾಲ್ ಪಾಂಡ್ಯ, ಕೈರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ಡೆಲ್ಲಿ: ಶಿಖರ್ ಧವನ್, ಮಾರ್ಕಸ್ ಸ್ಟೋಯಿನಿಸ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರನ್ ಹೆಟ್ಮೈರ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಕಾಗಿಸೊ ರಬಾಡ, ಅನ್ರಿಚ್ ನೋರ್ಜೆ, ಪ್ರವೀಣ್ ದುಬೆ.