ಕೊಹ್ಲಿ, ಎಬಿಡಿ ಉಳಿಕೆ, ಗೇಲ್‌ ಔಟ್‌

Team Udayavani, Jan 4, 2018, 9:37 AM IST

ಬೆಂಗಳೂರು: ಐಪಿಎಲ್‌ ಉಳಿಕೆ ಆಟಗಾರರ ಪಟ್ಟಿ ಪ್ರಕಟಿಸಲು ಎಲ್ಲ ಫ್ರಾಂಚೈಸಿಗಳಿಗೂ ಗುರುವಾರ ಕೊನೆ ದಿನ. ಗುರುವಾರ ರಾತ್ರಿ ಹೊತ್ತಿಗೆ ಉಳಿಕೆ ಆಟಗಾರರ ಸಂಪೂರ್ಣ ಪಟ್ಟಿ ಪ್ರಕಟವಾಗಲಿದೆ. ಈ ಹಂತದಲ್ಲಿ ವಿಶ್ವಶ್ರೇಷ್ಠರ ದಂಡನ್ನೇ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಯಾರನ್ನು ಉಳಿಸಿಕೊಳ್ಳುವುದು, ಬಿಡುವುದು ಎನ್ನುವುದೇ ದೊಡ್ಡ ತಲೆನೋವಾಗಿದೆ. ಕೊಹ್ಲಿ, ಡಿವಿಲಿಯರ್ಸ್‌, ಗೇಲ್‌ರಂತಹ ಮಹಾನ್‌ ತಾರೆಯರ ಮಧ್ಯೆ ಆಯ್ಕೆ ಎಂತಹ ತಂಡಕ್ಕಾದರೂ ಕಷ್ಟವೇ. ಈ ಪ್ರಶ್ನೆಗೆ ಸ್ವತಃ ಆರ್‌ಸಿಬಿ ಉನ್ನತ ಮೂಲಗಳು ಉದಯವಾಣಿಗೆ ಪ್ರತಿಕ್ರಿಯೆ ನೀಡಿವೆ. 

ಕೆ.ಎಲ್‌.ರಾಹುಲ್‌, ಚಹಲ್‌ ಉಳಿಕೆ ಖಚಿತ:
ತಂಡದ ಜತೆಗಿರುವ ಸಿಬ್ಬಂದಿ ಹೇಳುವ ಪ್ರಕಾರ ಬೆಂಗಳೂರು ತಂಡದಿಂದ ಕ್ರಿಸ್‌ ಗೇಲ್‌ ಹೊರ ಹೋಗುವುದು ಶೇ.90ರಷ್ಟು ಖಚಿತವಂತೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಮಿಸ್ಟರ್‌ 360 ಡಿಗ್ರಿ ಬ್ಯಾಟ್ಸ್‌ಮನ್‌ ಖ್ಯಾತಿಯ ಎಬಿಡಿ ವಿಲಿಯರ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಫ್ರಾಂಚೈಸಿಯ ಸಹಜ ಆಯ್ಕೆಯಾಗಿದೆ. ಇನ್ನು ಭಾರತ ಕ್ರಿಕೆಟ್‌ ತಂಡದಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್‌.ರಾಹುಲ್‌, ಸ್ಪಿನ್ನರ್‌ ಆಗಿ ಮಿಂಚಿರುವ ಯಜುವೇಂದ್ರ ಚಹಲ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಹಿಂದಿನ ಆವೃತ್ತಿಗಳಲ್ಲಿ ಈ ಇಬ್ಬರು ತಮ್ಮ ಫಾರ್ಮ್ನಿಂದ ತಂಡಕ್ಕೆ ಗಮನ ಸೆಳೆದಿದ್ದರು. ಮತ್ತೂಂದು ಕಡೆ ಕೇದಾರ್‌ ಜಾಧವ್‌ ಅವರನ್ನು ಉಳಿಸಿಕೊಳ್ಳಲು ಆರ್‌ಸಿಬಿಗೆ ಮನಸ್ಸಿದೆ. ಆದರೆ ಐಪಿಎಲ್‌ ನಿಯಮಗಳು ಉಳಿಸಿಕೊಳ್ಳುವ ಆಟಗಾರರಿಗೆ ಗರಿಷ್ಠ ಮಿತಿ ಹೇರಿರುವುದು ಅವರ ಉಳಿಕೆಗೆ ಅಡಚಣೆಯಾಗಿ ಪರಿಣಮಿಸಿದೆ. ಅವರನ್ನು ಉಳಿಸಿಕೊಳ್ಳಬಹುದಾದರೆ ಹೇಗೆ ಎಂದು ಆರ್‌ಸಿಬಿ ಪರಿಶೀಲಿಸುತ್ತಿದೆ. ಇಲ್ಲಿ ರೈಟ್‌ ಟು ಮ್ಯಾಚ್‌ಕಾರ್ಡ್‌ ಬಳಸುವ ಅವಕಾಶವಿದೆ.

ಮ್ಯಾಚ್‌ ಕಾರ್ಡ್‌ ಮೂಲಕ ಗೇಲ್‌ ಉಳಿಕೆ?
ಐಪಿಎಲ್‌ನ ಮೊದಲ ಮೂರು ಆವೃತ್ತಿಗಳಲ್ಲಿ ಕೆಕೆಆರ್‌ ಪರ ಆಡಿದ್ದ ಕ್ರಿಸ್‌ ಗೇಲ್‌ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಕೆಕೆಆರ್‌ ಫ್ರಾಂಚೈಸಿ ಅವರಿಗೆ ತಂಡದಿಂದ ಗೇಟ್‌ಪಾಸ್‌ ನೀಡಿತ್ತು. 4ನೇ ಆವೃತ್ತಿಯಿಂದ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದ ಗೇಲ್‌ ಮೈಮೇಲೆ ದೆವ್ವ ಬಂದವರಂತೆ ಬ್ಯಾಟ್‌ ಬೀಸಿದ್ದರು. ಇವರ ಸಿಕ್ಸರ್‌, ಬೌಂಡರಿಗಳ ಸುರಿಮಳೆಗೆ ವಿಶ್ವ ದಾಖಲೆಗಳೆಲ್ಲ ಕೊಚ್ಚಿ ಹೋಗಿದ್ದವು. ಆದರೆ 9, 10ನೇ ಆವೃತ್ತಿ ಐಪಿಎಲ್‌ನಲ್ಲಿ ಗೇಲ್‌ ಸಂಪೂರ್ಣ ವಿಫ‌ಲವಾದರು. ಗಾಯದ ಕಾರಣದಿಂದ ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದರೆ ಮತ್ತೆ ಕೆಲವು ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಒಟ್ಟಾರೆ ಅವರು 9 ಪಂದ್ಯಗಳಿಂದ ಕಳೆದ ಆವೃತ್ತಿಯಲ್ಲಿ ಗಳಿಸಿದ ರನ್‌ 200 ಅಷ್ಟೆ. ಈ ಹಿನ್ನಲೆಯಲ್ಲಿ ಈ ಸಲ ಗೇಲ್‌ ಅವರನ್ನು ತಂಡದಿಂದ ಕೈಬಿಡಲು ಆರ್‌ಸಿಬಿ
ನಿರ್ಧರಿಸಿದೆಲಾಗಿದೆಯಂತೆ. ಆದರೆ ಹರಾಜಿನ ವೇಳೆ ಅವರನ್ನು ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ಮರು ಖರೀದಿ ಮಾಡುವ ಸಾಧ್ಯತೆಯಿದೆ.

ಧೋನಿ, ವಾರ್ನರ್‌,ಸ್ಮಿತ್‌ ಉಳೀತಾರೆ
ಮುಂಬೈ: 2018ರ ಐಪಿಎಲ್‌ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಲು ಫ್ರಾಂಚೈಸಿ ಗಳಿಗೆ ಗುರುವಾರ ಅಂತಿಮ ದಿನ. ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ಬಿಡು ವುದು ಎಂಬ ಗೊಂದಲ ಎಲ್ಲ ತಂಡಗಳಲ್ಲೂ ಇದೆ. ಗುರುವಾರ ಹಲವು ಅಚ್ಚರಿಯ ಮಾಹಿತಿಗಳು  ಹೊರಬೀಳುವುದು ಖಚಿತವಾಗಿದೆ. ಇದುವರೆಗಿನ ಮಾಹಿತಿಗಳ ಪ್ರಕಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎಂ.ಎಸ್‌ .ಧೋನಿಯನ್ನು ಉಳಿಸಿ ಕೊಳ್ಳುವುದು ಖಚಿತ. ಮುಂಬೈ ರೋಹಿತ್‌ ಶರ್ಮರನ್ನು, ಹೈದರಾಬಾದ್‌ ಡೇವಿಡ್‌ ವಾರ್ನರ್‌ರನ್ನು, ಡೆಲ್ಲಿ ಡೇರ್‌ಡೆವಿಲ್ಸ್‌ ರಿಷಭ್‌ ಪಂತ್‌, ಶ್ರೇಯಸ್‌ ಐಯ್ಯರ್‌ರನ್ನು, ರಾಜಸ್ಥಾನ್‌ ರಾಯಲ್ಸ್‌ ಸ್ಟೀವ್‌ ಸ್ಮಿತ್‌ರನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನಗಳೇನಿಲ್ಲ. ಆದರೆ ಕೆಲ ಮಹತ್ವದ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನಗಳು ಶುರು ವಾಗಿವೆ. ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ಎರಡು ಬಾರಿ ಚಾಂಪಿಯನ್‌ ಪಟ್ಟದಲ್ಲಿ ಕೂರಿಸಿದ ಗೌತಮ್‌ ಗಂಭೀರ್‌ ಕೋಲ್ಕತಾದಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ ಆ ತಂಡದಲ್ಲಿ ಆಸ್ಟ್ರೇಲಿಯಾದ ಕ್ರಿಸ್‌ ಲಿನ್‌ ಮಾತ್ರ ಉಳಿದು ಕೊಳ್ಳುತ್ತಾರೆ. ಮುಂದಿನ ಆವೃತ್ತಿಯಿಂದ ಗೌತಮ್‌ ಗಂಭೀರ್‌, ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಆಡುವ ಆಸಕ್ತಿ ಹೊಂದಿದ್ದಾರಂತೆ. ಇನ್ನೊಂದು ಕಡೆ ಡೆಲ್ಲಿ ಕೂಡ ನಿರಂತರ 10 ಐಪಿಎಲ್‌ಗ‌ಳಲ್ಲಿ ಹೀನಾಯ ಪ್ರದರ್ಶನ ನೀಡಿರುವುದರಿಂದ ಗೌತಮ್‌ ಗಂಭೀರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಶತಾಯಗತಾಯ ಯತ್ನಿಸಲಿದೆಯೆಂಬ ಮಾಹಿತಿಯಿದೆ. ಇದಕ್ಕೆ ಕೋಲ್ಕತಾ ಅವಕಾಶ ನೀಡಬೇಕಷ್ಟೇ!

ರೈಟ್‌ ಟು ಮ್ಯಾಚ್‌ಕಾರ್ಡ್‌ ಅಂದರೆ?
ಪ್ರತಿ ಫ್ರಾಂಚೈಸಿಗಳಿಗೆ ಈ ಬಾರಿ ವಿಶೇಷ ಅವಕಾಶವಿದೆ. ಅದು ರೈಟ್‌ ಟು ಮ್ಯಾಚ್‌ಕಾರ್ಡ್‌. ಒಂದು ವೇಳೆ ಫ್ರಾಂಚೈಸಿಯೊಂದು ಆಟಗಾರನೊಬ್ಬನನ್ನು ಕೈಬಿಟ್ಟಿರುತ್ತದೆ. ಹರಾಜಿನಲ್ಲಿ ಆತನನ್ನು ಬೇರೊಂದು ತಂಡ ಖರೀದಿಸುತ್ತದೆ. ಈ ವೇಳೆ ಹರಾಜು ಪ್ರಕ್ರಿಯೆ ನಡೆಸುವವರು, ಹಿಂದಿನ ತಂಡಕ್ಕೆ ನೀವು ಈ ಆಟಗಾರನನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳುತ್ತಾರೆ. ಆಟಗಾರನ ಹಿಂದಿನ ತಂಡ ಹೌದು ಎಂದು ಪ್ರತಿಕ್ರಿಯಿಸಿದರೆ ಈ ಬಾರಿ ಹರಾಜಿನಲ್ಲಿ ಆತ ಯಾವ ಮೊತ್ತಕ್ಕೆ ಬಿಕರಿಯಾಗಿದ್ದಾನೋ ಅದೇ ಮೊತ್ತ ನೀಡಿ ಖರೀದಿಸಬೇಕಾಗುತ್ತದೆ. ಈ ರೈಟ್‌ ಟು ಮ್ಯಾಚ್‌ಕಾರ್ಡ್‌ಗೆ ಮಿತಿಯಿದೆ. 

ತಂಡವೊಂದು ಯಾವುದೇ ಆಟಗಾರನನ್ನು ಉಳಿಸಿಕೊಳ್ಳದೇ ನೇರವಾಗಿ ಹರಾಜಿಗೆ ತೆರಳಿದರೆ ಅಂತಹ ತಂಡ 3 ಆಟಗಾರರನ್ನು ಮ್ಯಾಚ್‌ಕಾರ್ಡ್‌ ಮೂಲಕ ಖರೀದಿಸಬಹುದು. 5, 4 ಆಟಗಾರರನ್ನು ಉಳಿಸಿಕೊಳ್ಳುವ ತಂಡಗಳಿಗೆ 1 ಬಾರಿ ಮ್ಯಾಚ್‌ ಕಾರ್ಡ್‌ ಬಳಸಲು ಅವಕಾಶವಿದೆ. 3 ಆಟಗಾರರನ್ನು ಉಳಿಸಿಕೊಳ್ಳುವ ತಂಡಗಳಿಗೆ ಮ್ಯಾಚ್‌ಕಾರ್ಡ್‌ ಮೂಲಕ 2 ಆಟಗಾರರನ್ನು ಖರೀದಿಸಲು ಅವಕಾಶವಿದೆ. 

ಹೇಮಂತ್‌ ಸಂಪಾಜೆ 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ