ಐಪಿಎಲ್ ಪಂದ್ಯ ಒಂದು ಗಂಟೆ ಬೇಗ ಆರಂಭ?
Team Udayavani, Dec 1, 2017, 7:55 AM IST
ಹೊಸದಿಲ್ಲಿ: ಮುಂದಿನ ಋತುವಿನಿಂದ ಐಪಿಎಲ್ ಪಂದ್ಯಗಳ ವೇಳೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸೂಚನೆಯೊಂದು ಲಭಿಸಿದೆ. ಪಂದ್ಯಗಳನ್ನು ನೇರ ಪ್ರಸಾರ ಮಾಡುವ “ಸ್ಟಾರ್ ನ್ಪೋರ್ಟ್ಸ್’ನ ಒಪ್ಪಿಗೆ ಲಭಿಸಿದರೆ ಈ ಬದಲಾವಣೆಗೆ ಸಿದ್ಧ ಎಂಬುದಾಗಿ ಬಿಸಿಸಿಐ ಹೇಳಿದೆ.
ಮುಖ್ಯವಾಗಿ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಪಂದ್ಯಗಳ ಬಗ್ಗೆ ಅನೇಕ ಕಡೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಇದು ಮಧ್ಯರಾತ್ರಿ ತನಕ ಮುಂದುವರಿಯುವುದರಿಂದ ವೀಕ್ಷಕರಿಗೆ ಮನೆಗೆ ತೆರಳುವುದು, ಟಿ.ವಿ.ಯಲ್ಲಿ ಇದನ್ನು ವೀಕ್ಷಿಸುವ ಚಿಕ್ಕ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ಇದನ್ನು ರಾತ್ರಿ ಎಂಟರ ಬದಲು 7 ಗಂಟೆಗೆ ಆರಂಭಿಸುವ ಚಿಂತನೆ ಬಿಸಿಸಿಐ ಚಾವಡಿಯಲ್ಲಿ ನಡೆದಿದೆ. ಆಗ ಹಗಲಿನ ಪಂದ್ಯವನ್ನೂ ಒಂದು ಗಂಟೆ ಮುಂಚಿತವಾಗಿ, ಅಂದರೆ ನಾಲ್ಕರ ಬದಲು 3 ಗಂಟೆಗೆ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ. ಸ್ಟಾರ್ ನ್ಪೋರ್ಟ್ಸ್ ಒಪ್ಪಿದರೆ ಬಿಸಿಸಿಐದೇನೂ ಅಭ್ಯಂತರವಿಲ್ಲ ಎಂದು ವರದಿಯಾಗಿದೆ.
ಐಪಿಎಲ್ ಸಾಮಾನ್ಯ ಮಂಡಳಿ ಸಭೆಯಲ್ಲಿ ಅಧ್ಯಕ್ಷ ರಾಜೀವ್ ಶುಕ್ಲ ಇಂಥದೊಂದು ಪ್ರಸ್ತಾವವನ್ನು ಮುಂದಿಟ್ಟಿದ್ದರು. ಇದಕ್ಕೆ ಎಲ್ಲ ಫ್ರಾಂಚೈಸಿಗಳು ಒಪ್ಪಿವೆ. ಆದರೆ ಪ್ರಸಾರಕ ಸಂಸ್ಥೆಗಳಿಗೆ ಜಾಹೀರಾತಿನ ಆದಾಯ ಮುಖ್ಯವಾಗುತ್ತದೆ. ಚೆಂಡು ಈಗ ಸ್ಟಾರ್ ನ್ಪೋರ್ಟ್ಸ್ ಅಂಗಳದಲ್ಲಿದೆ. ಡಿ. 5ರಂದು ಹೊಸದಿಲ್ಲಿಯಲ್ಲಿ ನಡೆಯುವ ಐಪಿಎಲ್ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು.
ನಡುವಲ್ಲೇ ಬೇರೆ ತಂಡಕ್ಕೆ?
ಇದೇ ವೇಳೆ ಐಪಿಎಲ್ ಚಾವಡಿಯಿಂದ ಇನ್ನೊಂದು ಸುದ್ದಿಯೂ ಕೇಳಿಬಂದಿದೆ. ಇದೆಂದರೆ, ಪಂದ್ಯಾವಳಿ ನಡುವೆಯೇ ಆಟಗಾರನೊಬ್ಬ ಮೂಲ ತಂಡ ಬಿಟ್ಟು ಮತ್ತೂಂದು ತಂಡದ ಪರ ಆಡುವುದು. ಇಂಥ ಕ್ರಮ ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಚಾಲ್ತಿಯಲ್ಲಿದೆ. 7 ಪಂದ್ಯಗಳ ಪೈಕಿ 2 ಪಂದ್ಯಗಳನ್ನಾಡಿದ ಆಟಗಾರನೊಬ್ಬ ಬೇರೆ ಫ್ರಾಂಚೈಸಿ ಪರ ಆಡಲು ಅರ್ಹನಾಗುತ್ತಾನೆ. ಇದಕ್ಕೆ “ಮಿಡ್-ಟೂರ್ನಮೆಂಟ್ ಟ್ರಾನ್ಸ್‌ಫರ್’ ಎನ್ನುತ್ತಾರೆ.
“ಉತ್ತಮ ಆಟಗಾರರಾಗಿದ್ದೂ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗದೇ ಹೋದಾಗ ಬೇರೆ ತಂಡದ ಪರ ಆಡುವ ಅವಕಾಶವೊಂದನ್ನು ಕಲ್ಪಿಸುವುದು ಐಪಿಎಲ್‌ನ ವಿನೂತನ ಯೋಜನೆ. ಇದಕ್ಕೂ ಫ್ರಾಂಚೈಸಿಗಳು ಒಪ್ಪಿಗೆ ಸಲ್ಲಿಸಿವೆ’ ಎಂದು ಶುಕ್ಲಾ ಹೇಳಿದ್ದಾರೆ.