ಕೆ.ಎಲ್.ರಾಹುಲ್ ರನ್ನು ಕೈಬಿಟ್ಟಿದ್ಯಾಕೆ? ತಂಡದ ಆಯ್ಕೆಯೇ ಅರ್ಥವಾಗುತ್ತಿಲ್ಲ: ಕಪಿಲ್ ದೇವ್
Team Udayavani, Feb 25, 2020, 4:11 PM IST
ಮುಂಬೈ: ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಸೋತ ನಂತರ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅನ್ನು ಕಪಿಲ್ ದೇವ್ ತರಾಟೆಗೆ ತೆಗೆದು ಕೊಂಡಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ನ ನಡೆಯೇ ಅರ್ಥವಾಗುತ್ತಿಲ್ಲ ಎಂದು ಕಪಿಲ್ ಹೇಳಿಕೊಂಡಿದ್ದಾರೆ.
ಎಬಿಪಿ ನ್ಯೂಸ್ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್, ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಕಿವೀಸ್ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಕಳೆದ ಏಕದಿನ ಸರಣಿ ಮತ್ತು ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ ಎಂದಿದ್ದಾರೆ.
ಟೀಂ ಇಂಡಿಯಾ ಆಡುವ ಬಳಗದಲ್ಲಿ ಇಷ್ಟೊಂದು ಬದಲಾವಣೆಗಳು ಯಾಕೆ ಆಗುತ್ತಿವೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಪ್ರತೀ ಪಂದ್ಯಕ್ಕೂ ಇಲ್ಲಿ ತಂಡದಲ್ಲಿ ಬದಲಾವಣೆ ಆಗುತ್ತಿದೆ. ಯಾರಿಗೂ ತನ್ನ ಸ್ಥಾನದ ಬಗ್ಗೆ ಭದ್ರತೆ ಇಲ್ಲ. ಇಷ್ಟು ಉತ್ತಮ ಬ್ಯಾಟಿಂಗ್ ಲೈನ್ ಅಪ್ ಇದ್ದರೂ ಎರಡೂ ಇನ್ನಿಂಗ್ಸ್ ನಲ್ಲಿ 200 ರನ್ ಗಳಿಸಲು ಸಾಧ್ಯವಾಗಿಲ್ಲ ಎಂದರೇ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಟೆಸ್ಟ್ ತಂಡದಿಂದ ಕೆ ಎಲ್ ರಾಹುಲ್ ರನ್ನು ಕೈ ಬಿಟ್ಟಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ರಾಹುಲ್ ಅದ್ಭುತ ಫಾರ್ಮಿನಲ್ಲಿ ಆಡುತ್ತಿದ್ದಾನೆ. ಆದರೆ ಆತ ತಂಡದಿಂದ ಹೊರಗಿದ್ದಾನೆ. ಇದಕ್ಕೆ ಅರ್ಥವೇನು ಎಂದು ಕಪಿಲ್ ಕಿಡಿಕಾರಿದ್ದಾರೆ.