ಕಿರ್ಗಿಯೋಸ್ ಮ್ಯಾರಥಾನ್ ಹೋರಾಟ
ಜ್ವೆರೇವ್, ವಾವ್ರಿಂಕ, ಮೆಡ್ವಡೇವ್ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶ
Team Udayavani, Jan 26, 2020, 12:20 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಕೂಟದ ಮ್ಯಾರಥಾನ್ ಪಂದ್ಯವೊಂದಕ್ಕೆ ಸಾಕ್ಷಿಯಾದ ತವರಿನ ನಿಕ್ ಕಿರ್ಗಿಯೋಸ್ ರಶ್ಯದ ಕರೆನ್ ಕಶನೋವ್ ಅವರನ್ನು ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇಲ್ಲಿ ರಫೆಲ್ ನಡಾಲ್ ಸವಾಲಿಗೆ ಸಜ್ಜಾಗಿದ್ದಾರೆ. ಸ್ಟಾನಿಸ್ಲಾಸ್ ವಾವ್ರಿಂಕ-ಡ್ಯಾನಿಲ್ ಮೆಡ್ವಡೇವ್ ಇನ್ನೊಂದು ಪಂದ್ಯದಲ್ಲಿ ಎದುರಾಗಲಿದ್ದಾರೆ.
ಕಿರ್ಗಿಯೋಸ್-ಕಶನೋವ್ ನಡುವಿನ ಕಾದಾಟ 5 ಸೆಟ್ಗಳಿಗೆ ವಿಸ್ತರಿಸಲ್ಪಟ್ಟಿತು. ಇದೇನೂ ವಿಶೇಷವಲ್ಲ. ಆದರೆ ಐದರಲ್ಲಿ 4 ಸೆಟ್ ಟೈ-ಬ್ರೇಕರ್ಗೆ ವಿಸ್ತರಿಸಿ ಟೆನಿಸ್ ಅಭಿಮಾ ನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಅದರಲ್ಲೂ ಆಸ್ಟ್ರೇಲಿಯದ ಆಟಗಾರನೇ ಕಣದಲ್ಲಿದ್ದ ಕಾರಣ ಪಂದ್ಯದ ಕುತೂಹಲ ಮುಗಿಲು ಮುಟ್ಟಿತ್ತು. ಕೊನೆಗೂ ಕಿರ್ಗಿಯೋಸ್ 6-2, 7-6 (7-5), 6-7 (6-8), 6-7 (7-9), 7-6 (10-8) ಅಂತರದಿಂದ ಗೆದ್ದು ಬಂದರು.
“ಆಲ್ ಸ್ಪೇನ್’ ಕಾಳಗವೊಂದರಲ್ಲಿ ರಫೆಲ್ ನಡಾಲ್ 6-1, 6-2, 6-4 ಅಂತರದಿಂದ ಪಾಬ್ಲೊ ಕರೆನೊ ಬುಸ್ಟ ಅವರನ್ನು ಮಣಿಸಿದರು. ಇದರೊಂದಿಗೆ 2016ರ ಬಳಿಕ ತವರಿನ ಆಟಗಾರನ ವಿರುದ್ಧ ನಡಾಲ್ ಅಜೇಯ ಗ್ರ್ಯಾನ್ಸ್ಲಾಮ್ ದಾಖಲೆ ಕಾಯ್ದುಕೊಂಡು ಬಂದಂತಾಯಿತು. ಅಂದು ಮೆಲ್ಬರ್ನ್ ಪಾರ್ಕ್ನಲ್ಲೇ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ ನಡಾಲ್ ಎಡವಿದ್ದರು.
ವಾವ್ರಿಂಕ-ಮೆಡ್ವಡೇವ್ ಮುಖಾಮುಖೀ
ಇನ್ನೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ ಸ್ಟಾನಿಸ್ಲಾಸ್ ವಾವ್ರಿಂಕ-ಡ್ಯಾನಿಲ್ ಮೆಡ್ವಡೇವ್ ನಡುವೆ ನಡೆಯಲಿದೆ. ಎದುರಾಳಿ ಜಾನ್ ಇಸ್ನರ್ ದ್ವಿತೀಯ ಸೆಟ್ ವೇಳೆ ಗಾಯಾಳಾಗಿ ಹಿಂದೆ ಸರಿದ ಕಾರಣ 2014ರ ಚಾಂಪಿಯನ್ ವಾವ್ರಿಂಕ ಸುಲಭದಲ್ಲಿ ಮುನ್ನಡೆದರು. ಆಗ ವಾವ್ರಿಂಕ 6-4, 4-1 ಅಂತರದ ಮುನ್ನಡೆಯಲ್ಲಿದ್ದರು.
ವಿಶ್ವದ ನಂ.4 ಆಟಗಾರ, ರಶ್ಯದ ಮೆಡ್ವಡೇವ್ ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ಅವರನ್ನು 6-4, 6-3, 6-2 ಅಂತರದಿಂದ ಪರಾಭವಗೊಳಿಸಿದರು.
ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 6-2, 6-2, 6-4ರಿಂದ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಅವರನ್ನು ಕೆಡವಿದರು. ಜ್ವೆರೇವ್ ಅವರಿನ್ನು ರಶ್ಯದ ಆ್ಯಂಡ್ರೆ ರುಬ್ಲೇವ್ ವಿರುದ್ಧ ಸೆಣಸಲಿದ್ದಾರೆ. ರುಬ್ಲೇವ್ 2-6, 7-6 (7-3), 6-4, 7-6 (7-4)ರಿಂದ ಬೆಲ್ಜಿಯಂನ ಡೇವಿಡ್ ಗೊಫಿನ್ ಆಟಕ್ಕೆ ತೆರೆ ಎಳೆದರು.
ಸಿಮೋನಾ ಹಾಲೆಪ್, ಮುಗುರುಜಾ ಮುನ್ನಡೆ
ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ನಲ್ಲಿ ಸಿಮೋನಾ ಹಾಲೆಪ್, ಗಾರ್ಬಿನ್ ಮುಗುರುಜಾ ಪ್ರಿ-ಕ್ವಾರ್ಟರ್ ಫೈನಲ್ಗೆ ಮುನ್ನಡೆದಿದ್ದಾರೆ.
ಶನಿವಾರದ ಪಂದ್ಯದಲ್ಲಿ ಸಿಮೋನಾ ಹಾಲೆಪ್ 6-1, 6-4 ಅಂತರದಿಂದ ಕಜಕಿಸ್ಥಾನದ ಯುಲಿಯಾ ಪುಟಿನ್ಸೇವಾ ಅವರನ್ನು ಮಣಿಸಿದರು. ಇವರ ಮುಂದಿನ ಎದುರಾಳಿ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್. ಅವರು ಅಮೆರಿಕದ ಕಿಕಿ ಬೆಲ್ಲಿಸ್ ವಿರುದ್ಧ 6-1, 6-7 (5-7), 6-0 ಅಂತರದ ಗೆಲುವು ಸಾಧಿಸಿದರು.
ಸ್ಪೇನಿನ ಗಾರ್ಬಿನ್ ಮುಗುರುಜಾ 6-1, 6-2 ಅಂತರದಿಂದ ಎಲಿನಾ ಸ್ವಿಟೋಲಿನಾ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಟಾಪ್-10ರ ಯಾದಿಯ 6ನೇ ಆಟಗಾರ್ತಿ ಕೂಟದಿಂದ ಹೊರಬಿದ್ದಂತಾಯಿತು.
ಎಸ್ತೋನಿಯಾದ ಅನೆಟ್ ಕೊಂಟವೀಟ್ ಸ್ವಿಜರ್ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ಅವರೆದುರು 6-0, 6-1 ಅಂತರದ ಸುಲಭ ಜಯ ಸಾಧಿಸಿದರು. ಇವರ ಎದುರಾಳಿ ಪೋಲೆಂಡಿನ ಐಗಾ ಸ್ವಿಟೆಕ್. ಅವರು ಕ್ರೊವೇಶಿಯಾದ ಡೋನಾ ವೆಕಿಕ್ಗೆ 7-5, 6-3ರಿಂದ ಆಘಾತವಿಕ್ಕಿದರು.
ಬೋಪಣ್ಣ ಜೋಡಿ ಮುನ್ನಡೆ
ಮಿಶ್ರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ-ಉಕ್ರೇನಿನ ನಾದಿಯಾ ಕಿಶೆನೋಕ್ ದ್ವಿತೀಯ ಸುತ್ತು ತಲುಪಿದ್ದಾರೆ. ಅವರು ಉಕ್ರೇನಿ ಲುಡ್ಮಿಲಾ ಕಿಶೆನೋಕ್-ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ವಿರುದ್ಧ 7-5, 4-6, 10-6 ಅಂತರದ ಕಠಿನ ಗೆಲುವು ಒಲಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್