ಬ್ರಾಡ್ ಬೊಂಬಾಟ್ ಆಟ: ಇಂಗ್ಲೆಂಡ್ ಹಿಡಿತದಲ್ಲಿ ತೃತೀಯ ಟೆಸ್ಟ್
Team Udayavani, Jul 26, 2020, 8:54 AM IST
ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹಿಡಿತ ಸಾಧಿಸಿದೆ. ಸ್ಟುವರ್ಟ್ ಬ್ರಾಡ್ ಆಲ್ ರೌಂಡ್ ಆಟವಾಡಿ ಆಂಗ್ಲರಿಗೆ ನೆರವಾದರು.
ಮೊದಲ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ್ದ ಇಂಗ್ಲೆಂಡ್ ಎರಡನೇ ದಿನದಲ್ಲಿ ಬೇಗನೇ ವಿಕೆಟ್ ಕಳೆದುಕೊಂಡಿತು. 91 ರನ್ ಗಳಿಸಿ ಅಜೇಯರಾಗಿದ್ದ ಒಲಿ ಪೋಪ್ ಎರಡನೇ ದಿನ ಯಾವುದೇ ರನ್ ಸೇರಿಸದೆ ಔಟಾದರು. ಬಟ್ಲರ್ ಕೂಡಾ 67 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ 280 ರನ್ ಗೆ ಎಂಟು ವಿಕೆಟ್ ಕಳೆದುಕೊಂಡಿದ್ದ ರೂಟ್ ಪಡೆಗೆ ನೆರವಾಗಿದ್ದ ಬ್ರಾಡ್.
ಹತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಬ್ರಾಡ್ 62 ರನ್ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್ 369 ರನ್ ಗೆ ಆಲ್ ಔಟ್ ಆಯಿತು. ವಿಂಡೀಸ್ ಪರ ಕೆಮರ್ ರೋಚ್ ನಾಲ್ಕು ವಿಕೆಟ್ ಪಡೆದರೆ, ಗ್ಯಾಬ್ರಿಯಲ್ ಮತ್ತು ಚೇಸ್ ತಲಾ ಎರಡು ವಿಕೆಟ್ ಪಡೆದರು. ನಾಯಕ ಹೋಲ್ಡರ್ ಒಂದು ವಿಕೆಟ್ ಪಡೆದರು.
ಪ್ರಥಮ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ಜಾನ್ ಕ್ಯಾಂಪ್ ಬೆಲ್ 32 ರನ್ ಗಳಿಸಿದರೆ, ಬ್ಲ್ಯಾಕ್ ವುಡ್ 26 ರನ್ ಗಳಿಸಿದರು. ನಾಯಲ ಹೋಲ್ಡರ್ 24 ರನ್ ಗಳಿಸಿ ಆಡುತ್ತಿದ್ದಾರೆ. ವಿಂಡೀಸ್ ಆರು ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ವಿಂಡೀಸ್ ಇನ್ನೂ 232 ರನ್ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ ಪರ ಬ್ರಾಡ್ ಮತ್ತು ಆಂಡರ್ಸನ್ ತಲಾ ಎರಡು ವಿಕೆಟ್ ಕಬಳಿಸಿದರೆ, ಆರ್ಚರ್ ಮತ್ತು ವೋಕ್ಸ್ ತಲಾ ಒಂದು ವಿಕೆಟ್ ಪಡೆದರು.